ಹಿಂದಿ ಬಂದರಷ್ಟೇ ಪ್ರವಾಸ ಆದೇಶದ ಹಿಂದೆ ಡಿಡಿಪಿಐ ಕೈವಾಡ ಖಚಿತ!
ಹಿಂದಿ ಬಲ್ಲವರಿಗಷ್ಟೇ ಪ್ರವಾಸ ಆದೇಶ ನೀಡಿದ್ದು ಬೆಂಗಳೂರು ದಕ್ಷಿಣ ಡಿಡಿಪಿಐ ಎಂಬುದು ಈಗ ಗೊತ್ತಾಗಿದೆ. ಇನ್ನೊಂಡೆದೆ ಸರ್ಕಾರಿ ಶಾಲೆ ಹೆಚ್ಚುವರಿ ಶಿಕ್ಷಕರ ‘ವರ್ಗಾವಣೆ’ಗೆ ಆದೇಶಿಸಲಾಗಿದ್ದು, ನಾಳೆಯಿಂದ ಜು.6ರೊಳಗೆ ಮರುಹೊಂದಾಣಿಕೆ ಪೂರ್ಣಕ್ಕೆ ಸೂಚನೆ ನೀಡಲಾಗಿದೆ
ಬೆಂಗಳೂರು (ಜೂ.17): ‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ದ ಪ್ರಯುಕ್ತ ಹೊರ ರಾಜ್ಯ ಪ್ರವಾಸಕ್ಕೆ ಹಿಂದಿ, ಇಂಗ್ಲಿಷ್ ಮಾತನಾಡುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಂತೆ ವಿವಾದಾತ್ಮಕ ಸುತ್ತೋಲೆ ಹೊರಡಿಸಿದ್ದು ಮತ್ಯಾರೂ ಅಲ್ಲ, ಬೆಂಗಳೂರು ದಕ್ಷಿಣ ಡಿಡಿಪಿಐ ಎಂಬುದು ಖಚಿತಪಟ್ಟಿದೆ.
ಈ ಹಿನ್ನೆಲೆಯಲ್ಲಿ ಸದರಿ ಅಧಿಕಾರಿ ಹಾಗೂ ಈ ಮಾಹಿತಿಯನ್ನು ತ್ವರಿತವಾಗಿ ಹಬ್ಬಿಸಲು ಸಹಕರಿಸಿದ ಅವರ ಕಚೇರಿಯ ಸಿಬ್ಬಂದಿಯೊಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು (ಆಡಳಿತ) ಇಂತಹದ್ದೊಂದು ವಿವಾದಾತ್ಮಕ ಷರತ್ತು ವಿಧಿಸಿ ವಿದ್ಯಾರ್ಥಿಗಳ ಆಯ್ಕೆಗೆ ಸುತ್ತೋಲೆ ಹೊರಡಿಸಿದ್ದಾರೆ. ಅದೇ ರೀತಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ದಕ್ಷಿಣ ಉಪನಿರ್ದೇಶಕರ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಈ ಮಾಹಿತಿಯನ್ನು ವಾಟ್ಸ್ ಅಪ್ ಸಂದೇಶಗಳ ಮೂಲಕ ರವಾನಿಸಿದ್ದಾರೆ.
ಬೆಂ.ನಗರ ವಿವಿಯ ಪಿಜಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಂದ ಸಾಮೂಹಿಕ ನಕಲು
ಹಿಂದಿ ಭಾಷೆ ಅಗತ್ಯವೆಂಬ ವಿವಾದಿತ ಅಂಶವು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಯಾವುದೇ ಮಾರ್ಗಸೂಚಿಯಲ್ಲಿ ಇಲ್ಲದಿದ್ದರೂ ಜಿಲ್ಲಾ ಹಂತದಲ್ಲಿ ಹೊರಡಿಸಿದ ಸುತ್ತೋಲೆಯನ್ನು ಸಂದೇಶದಲ್ಲಿ ಸೇರಿಸಿ ಅನಗತ್ಯ ವಿವಾದ ಉಂಟು ಮಾಡಲಾಗಿದೆ. ಇದು ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿದ್ದು ಸಂಬಂಧ ಪಟ್ಟಅಧಿಕಾರಿ, ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸಚಿವರು ತಮ್ಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ಎಸ್‌ಎಸ್‌ಎ ಅಧಿಕಾರಿಗೆ ಎಚ್ಚರಿಕೆ: ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ ಮೂಲಕ ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಹೊರ ರಾಜ್ಯ ಪ್ರವಾಸಕ್ಕೆ ರಾಜ್ಯದ ವಿದ್ಯಾರ್ಥಿಗಳ ಆಯ್ಕೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಲಿಖಿತವಾಗಿ ಅಧೀನ ಕಚೇರಿಗಳಿಗೆ ನೀಡದೆ ಎಸ್‌ಎಸ್‌ಎ ಅಧಿಕಾರಿಗಳು ಲೋಪವೆಸಗಿರುವುದು ಕಂಡುಬಂದಿದೆ. ಇದರಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವರು, ಇನ್ನುಂದೆ ಇಂತಹ ತಪ್ಪುಗಳಾಗದಂತೆ ಎಚ್ಚರ ವಹಿಸಲು ಸೂಚಿಸಿದ್ದಾರೆ. ಬೆಂಗಳೂರು ಮಾತ್ರವಲ್ಲದೆ, ರಾಜ್ಯದ ಹಿಂದುಳಿದ ಜಿಲ್ಲೆಗಳನ್ನೊಳಗೊಂಡಂತೆ ಅರ್ಹ ವಿದ್ಯಾರ್ಥಿಗಳನ್ನು ಕೂಡ ಹೊರ ರಾಜ್ಯದ ಪ್ರವಾಸಕ್ಕೆ ಆಯ್ಕೆ ಮಾಡಲು ಸಚಿವರು ಸೂಚಿಸಿದ್ದಾರೆ.
ನೀಟ್ ಪಿಜಿ ಕಟ್ ಆಫ್ ಕಡಿಮೆ ಮಾಡಿದ ಕೇಂದ್ರ ಸರ್ಕಾರ
ಸರ್ಕಾರಿ ಶಾಲೆ ಹೆಚ್ಚುವರಿ ಶಿಕ್ಷಕರ ‘ವರ್ಗಾವಣೆ’: ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2022-23ನೇ ಸಾಲಿನ ದಾಖಲಾತಿ ಆಧಾರದ ಮೇಲೆ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಗುರುತಿಸಿ ಕೊರತೆ ಇರುವ ಶಾಲೆಗಳಿಗೆ ಮರು ಹೊಂದಾಣಿಕೆ ನಡೆಸಲು ಸೂಚಿಸಿ ಶಿಕ್ಷಣ ಇಲಾಖೆ ವೇಳಾಪಟ್ಟಿಪ್ರಕಟಿಸಿದೆ. ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಜೂ.18ರಿಂದ ಜುಲೈ 6ರೊಳಗೆ ಈ ಹೊಂದಾಣಿಕೆ ಪ್ರಕ್ರಿಯೆ ನಡೆಸಿ ಪೂರ್ಣಗೊಳಿಸುವಂತೆ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ವಿಶಾಲ್ ಸುತ್ತೋಲೆ ಹೊರಡಿಸಿದ್ದಾರೆ.
ಜೂ.15ರಂದು ಹೆಚ್ಚುವರಿ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿಶೇಷ ಶಿಕ್ಷಕರ ತಾಲ್ಲೂಕು, ಜಿಲ್ಲೆ, ಶಾಲಾವಾರು ತಾತ್ಕಾಲಿಕ ಆದ್ಯತಾ ಪಟ್ಟಿಯನ್ನು ಇಲಾಖಾ ತಂತ್ರಾಂಶದಲ್ಲಿ ಡಿಡಿಪಿಐಗಳಿಗೆ ಬಿಡುಗಡೆ ಮಾಡಲಾಗಿದೆ. ಆ ಪಟ್ಟಿಗೆ ತಮ್ಮ ಜಿಲ್ಲೆ, ತಾಲ್ಲೂಕು ಹಂತದಲ್ಲಿ ಶಿಕ್ಷಕರಿಂದ ಆಕ್ಷೇಪಣೆಗಳನ್ನು ಸ್ವೀಕರಿಸಿ ಕೇಂದ್ರ ಕಚೇರಿಗೆ ಜು.18ರೊಳಗೆ ಸಲ್ಲಿಸಬೇಕು. ನಂತರ ಆಕ್ಷೇಪಣೆಗಳನ್ನು ಪರಿಶೀಲಿಸಿ ಜೂ.23ರಂದು ಅಂತಿಮ ಪಟ್ಟಿಪ್ರಕಟಿಸಲಾಗುವುದು. ಈ ಪಟ್ಟಿಯ ಆಧಾರದಲ್ಲಿ ಡಿಡಿಪಿಐ, ಬಿಇಒಗಳು ಜೂ.28ರೊಳಗೆ ತಾಲ್ಲೂಕಿನೊಳಗೆ, ಜೂ.30ರೊಳಗೆ ಜಿಲ್ಲೆಯ ಒಳಗೆ, ಜು.2ರೊಳಗೆ ವಿಭಾಗದೊಳಗೆ (ಜಿಲ್ಲೆಯ ಹೊರಗೆ), ಜು.4ರೊಳಗೆ ಅಂತರ್ ವಿಭಾಗ ಮಟ್ಟದಲ್ಲಿ ಶಿಕ್ಷಕರು ಮರು ಹೊಂದಾಣಿಕೆ ಪ್ರಕ್ರಿಯೆ ಪೂರ್ಣಗೊಳಿಸಿ ಪೂರ್ಣ ಮಾಹಿತಿಯನ್ನು ಕೇಂದ್ರ ಕಚೇರಿಗೆ ಜು.6ರೊಳಗೆ ಸಲ್ಲಿಸಬೇಕೆಂದು ಆಯುಕ್ತರು ಸೂಚಿಸಿದ್ದಾರೆ.