ಮೋದಿ ರೋಡ್ ಶೋಗಾಗಿ ಪಿಯು ಪರೀಕ್ಷೆ ಮುಂದೂಡಿಕೆ: ಕಾಂಗ್ರೆಸ್ ಕಿಡಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಶೋಕಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿಕೊಡುವುದು ನಾಚಿಕೆಗೇಡಿನ ಸಂಗತಿ. ಬಸವರಾಜ ಬೊಮ್ಮಾಯಿ ಅವರೇ, ವಿದ್ಯಾರ್ಥಿಗಳೇನು ಬಿಜೆಪಿಯ ಕಾಲಾಳುಗಳೇ ಎಂದು ಕಿಡಿ ಕಾರಿದ ಕಾಂಗ್ರೆಸ್.
ಬೆಂಗಳೂರು(ಫೆ.27): ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಪ್ರಥಮ ಪಿಯು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಶಿವಮೊಗ್ಗದ ಮೋದಿ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕರೆ ತರಲು ಸುತ್ತೋಲೆ ಹೊರಡಿಸಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ತೀವ್ರ ಟೀಕಾಪ್ರಹಾರ ನಡೆಸಿದೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಧಾನಮಂತ್ರಿ ನರೇಂದ್ರ ಮೋದಿ ಶೋಕಿಗಾಗಿ ವಿದ್ಯಾರ್ಥಿಗಳ ಭವಿಷ್ಯ ಬಲಿಕೊಡುವುದು ನಾಚಿಕೆಗೇಡಿನ ಸಂಗತಿ. ಬಸವರಾಜ ಬೊಮ್ಮಾಯಿ ಅವರೇ, ವಿದ್ಯಾರ್ಥಿಗಳೇನು ಬಿಜೆಪಿಯ ಕಾಲಾಳುಗಳೇ ಎಂದು ಕಿಡಿ ಕಾರಿದೆ.
‘ನರೇಂದ್ರ ಮೋದಿ ಹೇಳುವುದು ‘ಪರೀಕ್ಷಾ ಪೇ ಚರ್ಚಾ’ ಮಾಡುವುದು ‘ಪರೀಕ್ಷಾ ಮೇ ಆಕ್ರಮಣ್’. ಪ್ರಧಾನಮಂತ್ರಿಯ ರೋಡ್ ಶೋಗಾಗಿ ಪರೀಕ್ಷೆಗಳನ್ನು ಮುಂದೂಡಿರುವ ರಾಜ್ಯ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಬದುಕಿಗೆ ಕಲ್ಲು ಹಾಕಲು ಹೇಸುವುದಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಮೋದಿಯ ಪ್ರಚಾರದ ಹಪಾಹಪಿತನಕ್ಕೆ ವಿದ್ಯಾರ್ಥಿಗಳ ಭವಿಷ್ಯ ಕಿತ್ತುಕೊಳ್ಳಲಾಗುತ್ತಿದೆ’ ಎಂದು ಟೀಕಿಸಿದೆ.
PM Modi Visit Belagavi: ಮೋದಿ ಸ್ವಾಗತಿಸಲು ಸಜ್ಜಾದ ಕುಂದಾನಗರಿ, 10.7ಕಿಮೀ ಅದ್ಧೂರಿ ರೋಡ್ ಶೋ!
ಶಿಕ್ಷಣವಿಲ್ಲದವರಿಗೆ ಶಿಕ್ಷಣದ ಮಹತ್ವ ಅರಿವಾಗುವುದಾದರೂ ವಿದ್ಯಾರ್ಥಿಗಳ ಭವಿಷ್ಯ ಬಲಿಕೊಟ್ಟು ಶೋಕಿ ನಡೆಸಲು ಹೊರಟಿರುವ ಬಸವರಾಜ ಬೊಮ್ಮಾಯಿ ಅವರೇ, ತಮಗೆ ಚುನಾವಣಾ ಪ್ರಚಾರ ಮುಖ್ಯವೇ? ವಿದ್ಯಾರ್ಥಿಗಳ ಭವಿಷ್ಯ ಮುಖ್ಯವೇ ಸ್ಪಷ್ಟಪಡಿಸಿ. ನರೇಂದ್ರ ಮೋದಿ ಅವರು ನಾ ಪಡುಂಗಾ, ನಾ ಪಡನೆದುಂಗಾ ಎನ್ನಲು ಹೊರಟಿದ್ದಾರೆಯೇ ಎಂದು ಪ್ರಶ್ನಿಸಿದೆ.
ನಾಚಿಕೆ ಆಗುವುದಿಲ್ಲವೇ?:
ಗಾಂಪರ ಗುಂಪಾದ ಬಿಜೆಪಿಗೆ ತಿಳಿದಿರುವುದು ಕಮಿಷನ್ ಲೂಟಿಯೇ ಹೊರತು ಶಿಕ್ಷಣದ ಮಹತ್ವವಲ್ಲ. ಶಿವಮೊಗ್ಗದ ಪ್ರಧಾನಿ ಕಾರ್ಯಕ್ರಮದ ಕುರ್ಚಿ ತುಂಬಿಸಲು ಶಾಲಾ, ಕಾಲೇಜು ವಿದ್ಯಾರ್ಥಿಗಳನ್ನು ಕರೆಸಲು ಆದೇಶಿಸಿದೆ. ಅಲ್ಲದೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕಾಲೇಜು ಸಮವಸ್ತ್ರ ಧರಿಸಬಾರದು ಎಂದು ಹೇಳಿದೆ. ಪರೀಕ್ಷೆಯ ಆತಂಕದಲ್ಲಿರುವ ವಿದ್ಯಾರ್ಥಿಗಳನ್ನ ಖಾಲಿ ಕುರ್ಚಿ ತುಂಬಿಸಲು ಕರೆಸುವುದಕ್ಕೆ ನಾಚಿಕೆ ಎನಿಸುವುದಿಲ್ಲವೇ ಎಂದು ಕಿಡಿ ಕಾರಿದೆ.
ಯಾವುದೇ ಕಾರಣಕ್ಕೂ ಸಮವಸ್ತ್ರ ಹಾಗೂ ಕಪ್ಪು ಬಟ್ಟೆಧರಿಸಬಾರದು ಎಂದಿರುವುದೇಕೆ? ವಿದ್ಯಾರ್ಥಿಗಳ ಗುರುತು ಸಿಕ್ಕರೆ ಮರ್ಯಾದೆ ಹೋಗುತ್ತದೆ ಎಂಬ ದುರಾಲೋಚನೆಯೇ ಎಂದು ಟೀಕಾಪ್ರಹಾರ ನಡೆಸಿದೆ.