PM Modi Visit Belagavi: ಮೋದಿ ಸ್ವಾಗತಿಸಲು ಸಜ್ಜಾದ ಕುಂದಾನಗರಿ, 10.7ಕಿಮೀ ಅದ್ಧೂರಿ ರೋಡ್ ಶೋ!

ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗಾವಿಗೆ ಆಗಮಿಸುತ್ತಿದ್ದು ನಮೋ ಸ್ವಾಗತಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಭೇಟಿ ಬೆಳಗಾವಿ ಬಿಜೆಪಿಯಲ್ಲಿ ಹೊಸ ಚೈತನ್ಯ ತಂದಿದೆ.

PM Narendra Modi  10km roadshow in Belagavi on his Visit gow

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್,

ಬೆಳಗಾವಿ (ಫೆ.26): ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಗಾವಿಗೆ ಆಗಮಿಸುತ್ತಿದ್ದು ನಮೋ ಸ್ವಾಗತಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಭೇಟಿ ಬೆಳಗಾವಿ ಬಿಜೆಪಿಯಲ್ಲಿ ಹೊಸ ಚೈತನ್ಯ ತಂದಿದೆ. ಭಿನ್ನಮತ ಮರೆತು ಬೆಳಗಾವಿ ಬಿಜೆಪಿ ನಾಯಕರು ಸಭೆ ಸೇರಿ ಪ್ರಧಾನಿ ಮೋದಿ ಸಮಾವೇಶ ಹಾಗೂ ರೋಡ್ ಶೋಗೆ ಪಣತೊಟ್ಟಿದ್ದಾರೆ‌. ನಾಳೆ ಮಧ್ಯಾಹ್ನ ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು ನಮೋ ಸ್ವಾಗತಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ.  ಮಧ್ಯಾಹ್ನ 2.20ಕ್ಕೆ ಶಿವಮೊಗ್ಗದಿಂದ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕ ಬೆಳಗಾವಿ ನಗರದ ಕೆಎಸ್‌ಆರ್‌ಪಿ ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಕೆಎಸ್‌ಆರ್‌ಪಿ ಮೈದಾನದಿಂದ ರೋಡ್ ಶೋ ಆರಂಭವಾಗಲಿದೆ. 

ಬೆಳಗಾವಿಯ ಕೆಎಸ್‌ಆರ್‌ಪಿ ಮೈದಾನದಿಂದ ಬಸವಣ್ಣ ಮಂದಿರ ವೃತ್ತ, ಸದಾಶಿವ ನಗರ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಮೂಲಕ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದ್ದಾರೆ. ಚನ್ನಮ್ಮ ವೃತ್ತದಿಂದ ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಬೀದಿ, ಶನಿ ಮಂದಿರ, ಕಪಿಲೇಶ್ವರ ಮಂದಿರ ಬಳಿಯ ಮೇಲ್ಸೆತುವೆ ಮೂಲಕ ಶಹಾಪುರ ರಸ್ತೆ ಮಾರ್ಗವಾಗಿ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನವನ ಬಳಿಯ ಶಿವಚರಿತ್ರೆ ಬಳಿಯಿಂದ ಹಳೆಯ ಪಿಬಿ ರಸ್ತೆಗೆ ತೆರಳಿ ಬಿ‌‌‌.ಎಸ್‌.ಯಡಿಯೂರಪ್ಪ ಮಾರ್ಗವಾಗಿ ಸಮಾವೇಶ ನಡೆಯುವ ಮಾಲಿನಿ ಸಿಟಿ ಮೈದಾನ ತಲುಪಲಿದ್ದಾರೆ. ಮಾಲಿನಿ ಸಿಟಿ ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

 ಇಂದು ಸಮಾವೇಶ ನಡೆಯುವ ಸ್ಥಳಕ್ಕೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿ ಹಲವು ಬಿಜೆಪಿ ನಾಯಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಪ್ರಧಾನಿ ಮೋದಿ ಕಾರ್ಯಕ್ರಮ ಯಶಸ್ವಿಗೆ ಬೆಳಗಾವಿ ಬಿಜೆಪಿ ನಾಯಕರು ತಮ್ಮ ಭಿನ್ನಮತ ಮರೆತು ಸಭೆ ಮಾಡಿದ್ದಾರೆ. ಒಂದೇ ವೇದಿಕೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಸೇರಿ ಸಭೆ ಮಾಡಿದ್ದು ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಬಂದಂತಾಗಿದೆ.

ಇನ್ನು ಸಮಾವೇಶ ನಡೆಯುವ ಮಾಲಿನಿ ಸಿಟಿಗೆ ಭೇಟಿ ನೀಡಿ ಪರಿಶೀಲನೆ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 'ನಾಳೆ ಪ್ರಧಾನಿ ಶಿವಮೊಗ್ಗ, ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ,ಬಿಎಸ್‌ವೈ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕರು ಸಂಸದರು ಎಂಎಲ್‌ಸಿಗಳು ಇರ್ತಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶದ 8 ಕೋಟಿ ರೈತರ ಖಾತೆಗೆ ತಲಾ ಎರಡು ಸಾವಿರ ರೂಪಾಯಿಯಂತೆ 16 ಸಾವಿರ ಕೋಟಿ ಹಣ, ಬಟನ್ ಒತ್ತುವ ಮೂಲಕ ಜಮಾ ಮಾಡಲಿದ್ದಾರೆ.

ಲೋಂಡಾ ಬೆಳಗಾವಿ ಘಟಪ್ರಭಾ ರೈಲುಮಾರ್ಗ ಡಬ್ಲಿಂಗ್ ಲೈನ್ ಲೋಕಾರ್ಪಣೆ. ಪುನರ್ ನಿರ್ಮಾಣಗೊಂಡ ಬೆಳಗಾವಿ ರೇಲ್ವೆ ನಿಲ್ದಾಣ ಉದ್ಘಾಟನೆ, ಜಲಜೀವನ್ ಮಿಷನ್ ಬಹುದೊಡ್ಡ ಯೋಜನೆಯ 1124 ಕೋಟಿ ವೆಚ್ಚದ ಯೋಜನೆ ಲೋಕಾರ್ಪಣೆ‌ ಸೇರಿ 2240 ಕೋಟಿ ರೇಲ್ವೆ ಯೋಜನೆ, 16000 ಕೋಟಿ ಕಿಸಾನ್ ಸಮ್ಮಾನ್ ನಿಧಿ ಹಣ ಜಮಾ ಮಾಡುವ ಕಾರ್ಯ ನಡೆಯಲಿದೆ‌. ಈಗಾಗಲೇ ಒಂದು ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಒಂದೂವರೆಯಿಂದ ಎರಡು ಲಕ್ಷ ಜನ ಇಲ್ಲಿಯೇ ಸೇರುತ್ತಾರೆ. ಚನ್ನಮ್ಮ ವೃತ್ತದಿಂದ ರೋಡ್ ಶೋ ನಡೆಯಲಿದ್ದು ಬೆಳಗಾವಿ ಇತಿಹಾಸದಲ್ಲಿ ಈ ರ‌್ಯಾಲಿ ನಾ ಭೂತೋ ನಾ ಭವಿಷ್ಯತ್ ರೀತಿ ಆಗುತ್ತೆ. ಬೆಳಗಾವಿ ಜಿಲ್ಲೆಯ ಜನ ಬಹಳ ದೊಡ್ಡ ಸಂಖ್ಯೆಯಲ್ಲಿ ಬರಬೇಕು.‌ ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ‌. 10.45 ಕಿಮೀ ರೋಡ್ ಶೋ ಆಗುತ್ತೆ. ಜನರಿಗೆ ನಿಲ್ಲಲು ಪರ್ಟಿಕುಲರ್ ಪಾಯಿಂಟ್ ಮಾಡಿದ್ದೇವೆ. ಪಾಯಿಂಟ್ ಐಡಿಂಟಿಫೈ ಮಾಡಿ ರೋಡ್ ಶೋ ಮಾಡಲು ಸೂಚನೆ ನೀಡಿದ್ದು ರೋಡ್ ಶೋದಲ್ಲಿ ಎಂಟು ಪಾಯಿಂಟ್ಸ್‌ಗಳನ್ನು ಗುರುತಿಸಲಾಗಿದೆ' ಎಂದು ತಿಳಿಸಿದ್ದಾರೆ.

ಇತ್ತ ದಿವಂಗತ ಸುರೇಶ್ ಅಂಗಡಿ ಪಾರ್ಥಿವ ಶರೀರ ಸ್ವಕ್ಷೇತ್ರಕ್ಕೆ ತರುವ ಕೆಲಸ ಬಿಜೆಪಿ ಸರ್ಕಾರ ಮಾಡಲಿಲ್ಲ ಎಂಬ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಈ ದೇಶದ ಯಾವುದೇ ನಿಯಮ ಕಾಂಗ್ರೆಸ್ ಪಾಲನೆ ಮಾಡಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಪ್ರಧಾನಿ ಮೋದಿ ಬೆಳಗಾವಿಯಲ್ಲಿ ನವೀಕೃತ ರೇಲ್ವೆ ನಿಲ್ದಾಣ ಉದ್ಘಾಟನೆ ಮಾಡಲಿದ್ದು ಈ ರೇಲ್ವೆ ನಿಲ್ದಾಣದಲ್ಲಿ ಹಲವು ಮಹನೀಯರ ಕಲಾಕೃತಿ ಇವೆ‌. ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಚಿತ್ರದ ಕಲಾಕೃತಿ ಸಿದ್ಧಪಡಿಸಿ ಅಳವಡಿಸಿದೇ ಗೋದಾಮಿನಲ್ಲಿ ಇಟ್ಟಿದ್ದಕ್ಕೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಡಾ.ಬಿ.ಆರ್.ಅಂಬೇಡ್ಕರ್, ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರ ಅಳವಡಿಕೆ ಮಾಡದಿದ್ರೆ ನಾಳೆಯ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕೋದಾಗಿ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಬೆಳಗಾವಿ ಭೇಟಿ ಬಿಜೆಪಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಿದಂತಾಗಿದೆ.

ಇನ್ನು ಪ್ರಧಾನಿ ಮೋದಿ ಅಪರೂಪದ ಭಾವಚಿತ್ರವನ್ನು ಬೆಳಗಾವಿಯ ಟೇಲರ್‌‌ಗಳು ಹಾಗೂ ಮೋದಿ ಅಭಿಮಾನಿಗಳು ಸಿದ್ಧಪಡಿಸಿದ್ದಾರೆ. ಕಾಟನ್ ದಾರ ಬಳಸಿ 12.5 ಲಕ್ಷ ಬಾರಿ ಸ್ಟಿಚಿಂಗ್ ಮಾಡಿ ಟೇಲರ್ ಎಸ್.ಕೆ‌.ಕಾಕಡೆ ಸೇರಿ ಇಟ್ಟು 10 ಟೇಲರ್‌ಗಳು 1 ತಿಂಗಳ ಕಾಲ ಪರಿಶ್ರಮ ಪಟ್ಟು ಮೋದಿ ಭಾವಚಿತ್ರ ಸಿದ್ದಪಡಿಸಿದ್ದಾರೆ. ನಾಳೆ ಪ್ರಧಾನಿ ಮೋದಿಗೆ ಉಡುಗೊರೆ ಕೊಡಲು ಅವಕಾಶ ಕಲ್ಪಿಸಲು ಬೆಳಗಾವಿ ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ವಿವಿಧ ಯೋಜನೆಗಳ ಸುಮಾರು 75 ಸಾವಿರ ಫಲಾನುಭವಿಗಳು ಬೆಳಗಾವಿಗೆ ಆಗಮಿಸಲು ಪ್ರತಿ ಗ್ರಾಮ ಪಂಚಾಯತಿಗೆ ಒಂದು ಬಸ್ ಸೇರಿ ಒಟ್ಟು 1000ಕ್ಕೂ ಹೆಚ್ಚು ಸರ್ಕಾರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು ವಾಹನಗಳ ಪಾರ್ಕಿಂಗ್‌ಗೆ 50 ಎಕರೆ ಜಾಗದಲ್ಲಿ ಮೂರು ಕಡೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಊಟದ ವ್ಯವಸ್ಥೆ ಸಹ ಮಾಡಲಾಗಿದೆ.

ನಾಟು ನಾಟು... ಹಾಡಿಗೆ ಕುಣಿದ ಕೊರಿಯನ್ನರಿಗೆ ಪ್ರಧಾನಿ ಮೋದಿ ಫಿದಾ

ನಾಳೆ ಬೆಳಗಾವಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ ಹಲವು ವಿಶೇಷತೆಗಳಿಂದ ಕೂಡಿದೆ. ‌ನಾಳೆಯ ಪ್ರಧಾನಿ ರೋಡ್ ಶೋ ಐತಿಹಾಸಿಕ ಮಾಡಲು ಬಿಜೆಪಿ ಸಿದ್ಧತೆ ಮಾಡಿದ್ದು ರೋಡ್ ಶೋ ಮಾರ್ಗದಲ್ಲಿ ಲೈವ್ ಶೋ ನಡೆಸಲು ತೀರ್ಮಾನಿಸಲಾಗಿದೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯಿಸಿದ ಶಾಸಕ ಅಭಯ್ ಪಾಟೀಲ್, '10.7ಕಿಮೀ ಮಾರ್ಗದ ರಸ್ತೆಯ ಎರಡು ಬದಿಗಳಲ್ಲಿ 90 ಪಾಯಿಂಟ್ಸ್ ಗುರುತಿಸಿ ಲೈವ್ ಶೋ ಮಾಡಲಿದ್ದು ದೇಶದ 29 ರಾಜ್ಯ 8 ಕೇಂದ್ರಾಡಳಿತ ಪ್ರದೇಶಗಳ ವೇಷಭೂಷಣ ಧರಿಸಿ ಪ್ರಧಾನಿ ಮೋದಿ ನೀಡಿದ ಕೊಡುಗೆ ಬಗ್ಗೆ ತಿಳಿಸಲಾಗುವುದು‌. ರೋಡ್ ಶೋ ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ 10 ಸಾವಿರ ಮಹಿಳೆಯರು  ಕೇಸರಿ ಪೇಟ ತೊಟ್ಟು, ಪೂರ್ಣಕುಂಭ ಹೊತ್ತು ಪ್ರಧಾನಿ‌‌‌ ಮೋದಿ ಸ್ವಾಗತಿಸಲಿದ್ದಾರೆ‌.

MANN KI BAAT: ಪ್ರಧಾನಿ ಮೋದಿ ಪ್ರಶಂಸಿದ ಕೊಳ್ಳೇಗಾಲದ ಕವಿ ಮಂಜುನಾಥ್ ಮನೆಗೆ ಶಾಸಕ ಮಹೇಶ್ ಭೇಟಿ

ರೋಡ್ ಶೋದಲ್ಲಿ ಕಾಂಗ್ರೆಸ್ ಯುಗದಲ್ಲಿ ದೇಶದಲ್ಲಿ ಏನೇನಾಗಿತ್ತು, ಮೋದಿ ಯುಗದಲ್ಲಿ ಏನೇನಾಗಿದೆ ಈ ಬಗ್ಗೆ ಪ್ರದರ್ಶನ ಇರುತ್ತೆ‌. ಜನಸಾಮಾನ್ಯರು ವಿಐಪಿ ಅಂತಾ ಪ್ರಧಾನಿ ಮೋದಿ ಹೇಳ್ತಾರೆ. ಹೀಗಾಗಿ ಪ್ರಧಾನಿ ಮೋದಿರನ್ನು ಐವರು ಜನಸಾಮಾನ್ಯರು ಸ್ವಾಗತ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಬೆಳಗಾವಿಗೆ ಪ್ರಧಾನಿ ಮೋದಿರನ್ನು ಓರ್ವ ಆಟೋ ಚಾಲಕ, ಪೌರ ಕಾರ್ಮಿಕ ಮಹಿಳೆ, ರೈತ ಮಹಿಳೆ, ನೇಕಾರ, ಕಟ್ಟಡ ಕಾರ್ಮಿಕ ಸ್ವಾಗತಿಸಲಿದ್ದಾರೆ. ಈ ಎಲ್ಲರೂ ಏಷ್ಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿ ಪ್ರಧಾನಿ ಮೋದಿ ಸ್ವಾಗತಕ್ಕೆ ಅವಕಾಶ ನೀಡಿದ್ದು ನಮ್ಮ ಸೌಭಾಗ್ಯ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios