Asianet Suvarna News Asianet Suvarna News

ಪಠ್ಯ ತಿರುಚಲು ಖರ್ಚು ಮಾಡ್ತೀರಿ, ಶೂಗೆ ಹಣ ಇಲ್ಲವೇ?: ಪ್ರಿಯಾಂಕ್‌ ಖರ್ಗೆ

*  ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಶೂ ಹಾಗೂ ಸಾಕ್ಸ್‌ ನೀಡುವುದು ಹೊಸ ಯೋಜನೆಯಲ್ಲ
*  ನಾವು ಎಚ್ಚರಿಸಿದ ಬಳಿಕ ಎಚ್ಚೆತ್ತು ಸಿಎಂ ಶೂ ಹಾಗೂ ಸಾಕ್ಸ್‌ ವಿತರಣೆಗೆ 132 ಕೋಟಿ ನೀಡುವುದಾಗಿ ಘೋಷಣೆ
*  ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಲ್ಲ

Congress Leader Priyank Kharge Slams To BJP Government grg
Author
Bengaluru, First Published Jul 10, 2022, 2:00 AM IST

ಬೆಂಗಳೂರು(ಜು.10):  ಕಾಂಗ್ರೆಸ್‌ ಪಕ್ಷ ಎಚ್ಚರಿಸುವವರೆಗೂ ಸರ್ಕಾರಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ನೀಡದೆ ಸತಾಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾನವೀಯತೆ ಮರೆತಿದ್ದಾರೆ. ಮಕ್ಕಳಿಗೆ ಶೂ, ಸಾಕ್ಸ್‌ ನೀಡಲು ಪ್ರತಿ ಬಾರಿ ವಿರೋಧ ಪಕ್ಷಗಳು ಭಿಕ್ಷೆ ಬೇಡಿ ಹಣ ನೀಡಬೇಕೆ? ಸರ್ಕಾರಕ್ಕೆ 130 ಕೋಟಿ ನೀಡುವ ಯೋಗ್ಯತೆ ಇಲ್ಲವೇ? ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ. 

ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಠ್ಯದಲ್ಲಿ ಇತಿಹಾಸ ತಿರುಚಿ, ಮಹನೀಯರಿಗೆ ಅಪಮಾನ ಮಾಡಲು 150 ಕೋಟಿ ಖರ್ಚು ಮಾಡಲು ತಯಾರಿದ್ದೀರಿ. ಆದರೆ ಮಕ್ಕಳಿಗೆ ಶೂ ಹಾಗೂ ಸಾಕ್ಸ್‌ ನೀಡಲು ಸರ್ಕಾರದ ಬಳಿ 130 ಕೋಟಿ ಹಣ ಇಲ್ಲವೇ? ಬಿಜೆಪಿ ಸರ್ಕಾರಕ್ಕೆ ಚಕ್ರತೀರ್ಥನ ಮೇಲೆ ಇರುವ ಪ್ರೀತಿ, ನಮ್ಮ ಶಾಲಾ ಮಕ್ಕಳ ಮೇಲೆ ಏಕಿಲ್ಲ ಎಂದು ಪ್ರಶ್ನಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್, ಶೂ, ಸಾಕ್ಸ್‌ಗೆ ಹಣ ರಿಲೀಸ್..

ಕೊರೋನಾ ಅವಧಿಯಲ್ಲಿ ಸರ್ಕಾರ ಮಾಡಲಾಗದ ಕೆಲಸವನ್ನು ನಮ್ಮ ಪಕ್ಷ ಮಾಡಿತ್ತು. ಬಡ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಬೇಕಾದರೆ ಸರ್ಕಾರ ದುಪ್ಪಟ್ಟು ಟಿಕೆಟ್‌ ದರ ನಿಗದಿ ಮಾಡಿತ್ತು. ಆಗ ನಾವೆಲ್ಲರೂ ಹೋಗಿ ಬಿಎಂಟಿಸಿ, ಕೆಎಸ್ಸಾರ್ಟಿಸಿಗೆ ಹಣ ನೀಡಲು ಮುಂದಾದಾಗ ಸರ್ಕಾರಕ್ಕೆ ಜ್ಞಾನೋದಯವಾಯಿತು. ರೈತರಿಗೆ, ಬಡ ಕಾರ್ಮಿಕರಿಗೆ ನೆರವಾಗಿದ್ದೂ ಸಹ ಕಾಂಗ್ರೆಸ್‌ ಪಕ್ಷ. ಹೀಗಿದ್ದರೂ ಶಾಲಾ ಮಕ್ಕಳಿಗೆ ಶೂ, ಸಾಕ್ಸ್‌ ನೀಡಲಾಗದ ಮುಖ್ಯಮಂತ್ರಿಗಳು ಕೊರೋನಾ ಅವಧಿಯಲ್ಲಿನ ನಮ್ಮ ಸೇವೆಯನ್ನು ವ್ಯಂಗ್ಯವಾಡಿದ್ದಾರೆ. ಇದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಶೂ ಹಾಗೂ ಸಾಕ್ಸ್‌ ನೀಡುವುದು ಹೊಸ ಯೋಜನೆಯಲ್ಲ. ಇನ್ನು ನಾವು ಎಚ್ಚರಿಸಿದ ಬಳಿಕ ಎಚ್ಚೆತ್ತು ಮುಖ್ಯಮಂತ್ರಿಗಳು ಶೂ ಹಾಗೂ ಸಾಕ್ಸ್‌ ವಿತರಣೆಗೆ 132 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದು ಮಕ್ಕಳ ವಿಚಾರವಾಗಿದ್ದು ಸರ್ಕಾರ ಇದರಲ್ಲಿ 40% ಕಮಿಷನ್‌ ಒಡೆಯದೇ ಇದ್ದರೆ ಒಳ್ಳೆಯದು. ಕಳೆದ 3 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ನೀಡಿಲ್ಲ. ಕಳೆದ ವರ್ಷ 2 ಸಮವಸ್ತ್ರ ನೀಡಬೇಕಿದ್ದ ಸರ್ಕಾರ ಕೇವಲ ಒಂದು ಸಮವಸ್ತ್ರ ನೀಡಿದೆ. ಮಕ್ಕಳ ಬಗ್ಗೆ ಸರ್ಕಾರಕ್ಕೆ ಏಕೆ ಇಷ್ಟುತಾತ್ಸಾರ ಎಂದು ಕಿಡಿ ಕಾರಿದರು.
 

Follow Us:
Download App:
  • android
  • ios