Textbook Revision Row: ಚಕ್ರತೀರ್ಥ ಎದುರು ಸಿಎಂ ಬೊಮ್ಮಾಯಿ ಶರಣಾಗಿದ್ದೇಕೆ?: ಪ್ರಿಯಾಂಕ್ ಖರ್ಗೆ
ನಾಡಗೀತೆ ತಿರುಚಿ ಪ್ರಕಟಿಸಿದ ಹಾಗೂ ಕುವೆಂಪು, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು ಅವರಿಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳದೆ ಮುಖ್ಯಮಂತ್ರಿಗಳು ಮೂಕ ಬಸವನಂತೆ ಮೌನಕ್ಕೆ ಶರಣಾಗಿರುವುದು ಖಂಡನೀಯ.
ಬೆಂಗಳೂರು (ಜೂ.05): ನಾಡಗೀತೆ ತಿರುಚಿ ಪ್ರಕಟಿಸಿದ ಹಾಗೂ ಕುವೆಂಪು, ಬಸವಣ್ಣ, ಅಂಬೇಡ್ಕರ್, ನಾರಾಯಣ ಗುರು ಅವರಿಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ಕೈಗೊಳ್ಳದೆ ಮುಖ್ಯಮಂತ್ರಿಗಳು ಮೂಕ ಬಸವನಂತೆ ಮೌನಕ್ಕೆ ಶರಣಾಗಿರುವುದು ಖಂಡನೀಯ. ರೋಹಿತ್ ಚಕ್ರತೀರ್ಥ ನಿಮಗಿಂತ ಪ್ರಭಾವಿ ವ್ಯಕ್ತಿಯೇ? ರಾಜ್ಯದ ಮಹನೀಯರಿಗೆ ಅವಮಾನ ಮಾಡಿದ ವ್ಯಕ್ತಿಯ ಮುಂದೆ ಮುಖ್ಯಮಂತ್ರಿಗಳಾದ ನೀವು ಮಂಡಿಯೂರುತ್ತಿರುವುದೇಕೆ? ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಶುಕ್ರವಾರ ಮುಖ್ಯಮಂತ್ರಿಗಳು ಪ್ರಕಟಿಸಿರುವ ಪತ್ರಿಕಾ ಪ್ರಕಟಣೆಯಲ್ಲಿನ ಉತ್ತರ ನೋಡಿ ಸಾಕಾಗಿ ಹೋಗಿದೆ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು? ಯಾರ ಬಳಿ ನ್ಯಾಯ ಕೇಳಬೇಕು? ಎಂಬುದೇ ತಿಳಿಯದಂತಾಗಿದೆ. ಕುವೆಂಪು, ಬುದ್ಧ, ನಾರಾಯಣಗುರು, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ವ್ಯಕ್ತಿಯ ಮುಂದೆ ಮುಖ್ಯಮಂತ್ರಿಗಳು ಶರಣಾಗಿರುವುದು ಯಾಕೆ?’ ಎಂದು ಕಿಡಿ ಕಾರಿದ್ದಾರೆ.
ಸಿಎಂ ಯಾರು, ನಿಮಗಿಂತಲೂ ಚಕ್ರತೀರ್ಥ ದೊಡ್ಡೋರಾ? ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಆರ್‌ಎಸ್‌ಎಸ್ ವಿರುದ್ಧ ಪ್ರಿಯಾಂಕ ಖರ್ಗೆ ಕಿಡಿ: ಪಠ್ಯ ಪರಿಷ್ಕರಣೆ ನಡೆಸಿ ಆರ್‌ಎಸ್‌ಎಸ್‌ನ ಹೆಡಗೇವಾರ್ ಅವರ ಬಗ್ಗೆ ಸೇರಿಸಲಾಗಿದೆ. ಆರ್‌ಎಸ್‌ಎಸ್ ಈ ದೇಶಕ್ಕೆ ನೀಡಿದ ಕೊಡುಗೆ ಏನು? ಆರ್‌ಎಸ್‌ಎಸ್ ಕೈಪಿಡಿಯಲ್ಲಿ ಧೈರ್ಯವಾಗಿ ಹೇಳಿ ಸ್ವಾತಂತ್ರ್ಯ ಹೋರಾಟದಲ್ಲಿ ಯಾಕೆ ಭಾಗವಹಿಸಲಿಲ್ಲ? ಗಾಂಧೀಜಿಯನ್ನು ಯಾಕೆ ಕೊಂದಿದ್ದು? ಅವರ ಕಚೇರಿ ಮೇಲೆ 57 ವರ್ಷ ಯಾಕೆ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂಬುದನ್ನು ಬರೆಯಲಿ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಸವಾಲು ಹಾಕಿದರು. ಆರ್‌ಎಸ್‌ಎಸ್‌ಗೆ ಸೇರಿಸಿ ಕೇಸರಿ ಶಾಲುಗಳನ್ನು ಬಡ ವಿದ್ಯಾರ್ಥಿಗಳಿಗೆ ಹಾಕಿಸಲಾಗುತ್ತಿದೆ.
ಆದರೆ, ಬಿಜೆಪಿ ನಾಯಕರ ಮಕ್ಕಳು ಏಕೆ ಹಾಕುತ್ತಿಲ್ಲ. ಬಡವರನ್ನು ಬೀದಿಗೆ ತಳ್ಳಿ ಅವರ ಮಕ್ಕಳನ್ನು ಏಕೆ ವಿದೇಶಗಳಲ್ಲಿ ಓದಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. ‘40% ಕಮಿಷನ್, ನೇಮಕಾತಿ ಅಕ್ರಮ, ವರ್ಗಾವಣೆ ದಂಧೆ, ನಾಡಗೀತೆಗೆ ಅವಮಾನ, ಗಣ್ಯರಿಗೆ ಅವಮಾನ ನಡೆಯುತ್ತಿದ್ದರೂ ಮುಖ್ಯಮಂತ್ರಿಗಳು ಸುಮ್ಮನೆ ಕುಳಿತಿದ್ದಾರೆ. ಶ್ರೀರಾಮಸೇನೆ ಅಧ್ಯಕ್ಷರು ಸರ್ಕಾರದ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಹೀಗಿದ್ದರೂ ಸುಮ್ಮನೆ ಕುಳಿತು ರಾಜ್ಯವನ್ನು ಪುಂಡರ ಕೈಗೆ ನೀಡುತ್ತಿದ್ದಾರಾ?’ ಎಂದು ಪ್ರಶ್ನಿಸಿದರು.
ರಾಜಕೀಯ ಲಾಭಕ್ಕಾಗಿ ದಲಿತರ ಮೇಲೆ ಬಿಜೆಪಿಗೆ ಪ್ರೀತಿ: ಪ್ರಿಯಾಂಕ್ ಖರ್ಗೆ
‘ರಾಜ್ಯ ಸರ್ಕಾರ ರಚಿಸಿರುವ ಪಠ್ಯ ಪರಿಷ್ಕರಣೆ ಸಮಿತಿಯಲ್ಲಿ ಶೇ.90 ರಷ್ಟು ಮಂದಿ ಮನುವಾದಿಗಳೇ ಇದ್ದಾರೆ. ಈ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥ ಟ್ಯೂಷನ್ ಟೀಚರ್. ಅಂತಹ ವ್ಯಕ್ತಿಗೆ 1 ಕೋಟಿ ಮಕ್ಕಳ ಭವಿಷ್ಯ ಬರೆಯುವ ಹೊಣೆಯನ್ನು ನೀಡಲಾಗಿದೆ. ಬರಗೂರು ರಾಮಚಂದ್ರಪ್ಪ ಅವರಿಗೆ ಇರುವ ಅರ್ಹತೆ ಏನು? ರೋಹಿತ್ ಚಕ್ರತೀರ್ಥ ಅವರಿಗೆ ಇರುವ ಅರ್ಹತೆ ಏನು? ಅಶ್ಲೀಲತೆಯನ್ನೇ ಮಾನದಂಡ ಮಾಡಿಕೊಂಡು ರೋಹಿತ್ ಚಕ್ರತೀರ್ಥರನ್ನು ನೇಮಿಸಿದಂತಿದೆ’ ಎಂದು ಟೀಕಿಸಿದರು.