ಸಿಎಂ ಯಾರು, ನಿಮಗಿಂತಲೂ ಚಕ್ರತೀರ್ಥ ದೊಡ್ಡೋರಾ? ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
* ಶಾಲಾ ಪಠ್ಯಪುಸ್ತಕ ವಿವಾದ
* ಸಿಎಂ ಯಾರು, ನಿಮಗಿಂತಲೂ ಚಕ್ರತೀರ್ಥ ದೊಡ್ಡೋರಾ?
* ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಬೆಂಗಳೂರು, (ಜೂನ್.04): ಪಠ್ಯವಿವಾದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನಡೆದುಕೊಂಡಿರುವ ರೀತಿಯನ್ನು ಕಾಂಗ್ರೆಸ್ ಖಂಡಿಸಿದೆ. ಪಿಎಸ್ಐ ನೇಮಕಾತಿ ಹಗರಣ ಹಾಗೂ ಗಂಗಾಕ್ಯಲಾಣ ಯೋಜನೆಯಲ್ಲಿ ಅಕ್ರಮ ಸೇರಿದಂತೆ ಹಲವು ವಿಚಾರಗಳಲ್ಲಿ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು(ಶನಿವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಎಲ್ಲದಕ್ಕೂ ಮೂಗ ಬಸವನ ರೀತಿ ಇರ್ತೀರಿ. ನಿಮಗಿಂತ ಚಕ್ರತೀರ್ಥ ದೊಡ್ಡವರಾದ್ರಾ. ಬಸವ, ಬುದ್ಧ, ಅಂಬೇಡ್ಕರ್ಗೆ ಅವರು ಅವಮಾನ ಮಾಡಿದ್ದಾನೆ. ನಾರಾಯಣಗುರು, ನಾಡಗೀತೆಗೆ ಅವಮಾನ ಮಾಡಿದ್ದಾನೆ. ಯಾಕೆ ನೀವು ಅವನ ಮೇಲೆ ಕ್ರಮ ಜರುಗಿಸಲಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಗಂಭೀರವಾಗಿ ಎಂದು ಪ್ರಶ್ನಿಸಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ರೋಹಿತ್ ಚಕ್ರತೀರ್ಥ ಸಮಿತಿ ವಿಸರ್ಜನೆ, ಸರ್ಕಾರ ಮಹತ್ವದ ಆದೇಶ
ಪಿಎಸ್ಐ ಹಗರಣ ನಡೆದಾಗ ಸುಮ್ಮನಿದ್ದಿರಿ. ಉಪನ್ಯಾಸಕರ ನೇಮಕಾತಿ ಹರಗಣ ನಡೆದರೂ ಸುಮ್ಮನಿದ್ದಿರಿ. ಶ್ರೀರಾಮಸೇನೆ ನಿಮ್ಮ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡುತ್ತೆ. ನಿಮಗೆ ಡೇಟ್ ಮೇಲೆ ಡೇಟ್ ಕೊಡ್ತಾರೆ. ಯಾಕೆ ಯಾರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಪ್ರಕಾರ ರೋಹಿತ್ ಚಕ್ರತೀರ್ಥ ಪ್ರಶ್ನಾತೀತರೇ? ನಿಮಗೆ ರೋಹಿತ್ ಬೇಕು. ವಿದ್ಯಾರ್ಥಿಗಳು ಮುಖ್ಯರಲ್ಲ ಎಂದು ಕಿಡಿಕಾರಿದರು.
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಗೊಂದಲವಿದ್ದರೆ ಪರಿಶೀಲನೆ ಮಾಡುವುದಾಗಿ ಸಿಎಂ ಹೇಳುತ್ತಾರೆ. ಈಗ ಪರಿಷ್ಕರಣ ಸಮಿತಿ ವಿಸರ್ಜಿಸಿದ್ದೀರಿ. ಪುಸ್ತಕಗಳು ಈಗಾಗಲೇ ಮುದ್ರಣವಾಗಿದ್ದು, ಬಿಇಒ ಕಚೇರಿಗೆ ತಲುಪಿವೆ. ಸಮಿತಿಯೇ ಇಲ್ಲ ಅಂದರೆ ಪರಿಶೀಲನೆ ಹೇಗೆ ಸಾಧ್ಯ? ಎಸ್ಡಿಎಂಸಿಗಳಿಗೆ ಕೊಡಬೇಕಾದಷ್ಟು ಅನುದಾನವನ್ನು ಈವರೆಗೆ ಕೊಟ್ಟಿಲ್ಲ. ಸ್ಕಾಲರ್ಶಿಪ್, ಸೈಕಲ್ಗಳ ವಿತರಣೆಯಾಗಿಲ್ಲ. ಇನ್ನು ಮಕ್ಕಳ ಕಲಿಕೆ ಎಲ್ಲಿಂದ ಬರುತ್ತದೆ? ಮಕ್ಕಳ ಕಲಿಕೆಗೆ ಏನಾದ್ರು ಕಾರ್ಯಕ್ರಮ ತಂದಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ಕೋವಿಡ್ನಿಂದ ಮಕ್ಕಳ ಕಲಿಕೆ ಹೋಗಿಬಿಟ್ಟಿದೆ. ಆದರೆ ಬಡವರ ಮಕ್ಕಳಿಗೆ ಕೇಸರಿ ಶಾಲು ಹಾಕುತ್ತೀರಿ. ಕೇಸರಿ ಶಾಲು ಹಾಕಿ ಬಿಜೆಪಿ ನಾಯಕರ ಮಕ್ಕಳು ಆರ್ಎಸ್ಎಸ್ ಶಾಖೆಗಳಿಗೆ ಹೋಗುತ್ತಿದ್ದಾರಾ? ಬಡವರ ಮಕ್ಕಳು ಇವತ್ತು ಶಾಖೆಗೆ ಹೋಗುತ್ತಾರೆ. ನಿಮ್ಮ ಮಕ್ಕಳು ಒಳ್ಳೊಳ್ಳೆ ಶಿಕ್ಷಣ ಕಲಿಯಬೇಕು. ಬಡವರ ಮಕ್ಕಳು ಗೋಶಾಲೆಗೆ ಹೋಗಿ ಗೋರಕ್ಷಕರಾಗಬೇಕು. ಇದು ಸರಿಯೇ ಇದನ್ನ ಮೊದಲು ನಿಲ್ಲಿಸಿ ಎಂದು ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.