ಶಿಕ್ಷಣ ಇಲಾಖೆಯಲ್ಲೂ ಕಮಿಷನ್: ಸಚಿವ ನಾಗೇಶ್‌ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ರುಪ್ಸಾ ಆಗ್ರಹ
ಸರ್ಕಾರದಿಂದ ನೀಡುವ ಆರ್‌ಟಿಇ ಮರುಪಾವತಿ ಶುಲ್ಕ ಬಿಡುಗಡೆಗೆ ಶೇ.40ಕ್ಕೂ ಹೆಚ್ಚು ಕಮಿನಷ್ ನೀಡಬೇಕು. ಡಿಡಿಪಿಐಗೆ ಶೇ.20, ಬಿಇಒಗಳಿಗೆ ಶೇ.25ರಷ್ಟು ಕಮಿಷನ್ ಕೊಡಬೇಕು ಎಂದು ದೂರಿದ ಖಾಸಗಿ ಶಾಲಾ ಸಂಘಟನೆಗಳು
ಬೆಂಗಳೂರು(ಆ.27): ಗುತ್ತಿಗೆದಾರರ ಸಂಘದಿಂದ ಟೆಂಡರ್ ಕಮಿಷನ್ ಆರೋಪದ ಬಳಿಕ ಇದೀಗ ಖಾಸಗಿ ಶಾಲಾ ಸಂಘಟನೆಗಳು, ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಆರೋಪ ಮಾಡಿವೆ. ಈ ಸಂಬಂಧ ಪ್ರಧಾನಿ ಮೋದಿ ಅವರಿಗೂ ಪತ್ರ ಬರೆದು ಭ್ರಷ್ಟಾಚಾರ ತಡೆಯುವಲ್ಲಿ ವಿಫಲವಾಗಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿವೆ. ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ಮತ್ತು ನೋಂದಾಯಿತ ಅನುದಾನರತಹಿ ಖಾಸಗಿ ಶಾಲಾ ಸಂಘಟನೆಗಳ ಒಕ್ಕೂಟ (ರುಪ್ಸಾ-ಕರ್ನಾಟಕ) ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ವಿವರಿಸಿ ಪ್ರಧಾನಿಗೆ ಪತ್ರ ಬರೆದಿದ್ದು, ಇದಕ್ಕೆ ಕಡಿವಾಣ ಹಾಕಲು ಒತ್ತಾಯಿಸಿವೆ.
ಕ್ಯಾಮ್ಸ್ ಆರೋಪ:
ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಕೂಡ ಪ್ರಧಾನಿ ಅವರಿಗೆ ಪತ್ರ ಬರೆದಿದ್ದು, ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಡಿಡಿಪಿಐ, ಬಿಇಒಗಳು ಸೇರಿದಂತೆ ಇಲಾಖೆಯ ಪ್ರತಿ ಹಂತದಲ್ಲೂ ಲಂಚಬಾಕತನ ಹೆಚ್ಚಾಗಿದೆ. ಇದನ್ನು ತಡೆಯಲು ವಿಫಲವಾಗಿರುವ ಶಿಕ್ಷಣ ಸಚಿವ ನಾಗೇಶ್ ಅವರನ್ನು ಸಂಪುಟದಿಂದ ಕೈಬಿಟ್ಟು ಶಿಕ್ಷಣ ಕ್ಷೇತ್ರದ ಬಗ್ಗೆ ಹೆಚ್ಚಿನ ಅರಿವಿರುವವರನ್ನು ಇಲಾಖಾ ಸಚಿವರನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ ಅವರಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
News Hour: ಕಮಿಷನ್ ಇಕ್ಕಟ್ಟಿಗೆ ಸಿಲುಕಿತಾ ರಾಜ್ಯ ಸರ್ಕಾರ..?
ಇಲಾಖೆಯು ಶಿಕ್ಷಣ ಸುಧಾರಣೆ ಹೆಸರಲ್ಲಿ ಖಾಸಗಿ ಶಾಲೆಗಳಿಗೆ ಕಿರುಕುಳ ನೀಡುತ್ತಿವೆ. ಶಾಲಾ ಮಾನ್ಯತೆ ನವೀಕರಣ, ಕಟ್ಟಡ ಸುರಕ್ಷತೆ ಅಗ್ನಿ ಸುರಕ್ಷತೆ ವಿಚಾರಗಳಲ್ಲಿ ಅವೈಜ್ಞಾನಿಕ ನಿಯಮಗಳನ್ನು ತಂದು ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ. ಆರ್‌ಟಿಇ ಶುಲ್ಕ ಮರುಪಾವತಿಯಲ್ಲಿ ವಿಳಂಬ ಮಾಡುತ್ತಿದ್ದಾರೆ. ಶಾಲೆಗಳನ್ನು ನಡೆಸಲು ಆಗುವ ಖರ್ಚಿನ ಬಗ್ಗೆ ಇಲಾಖೆಗೆ ಅರಿವೇ ಇಲ್ಲ. ಅಧಿಕಾರಿಗಳು ಆಡಳಿತ ಮಂಡಳಿಗಳ ಜೊತೆ ಚರ್ಚಿಸದೆ ಯಾವುದೇ ಚರ್ಚೆ ನಡೆಸದೆ ಏಕಮುಖವಾಗಿ ಶುಲ್ಕ ನಿಗದಿ ಮಾಡುವ ಮೂಲಕ ಶಾಲೆಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸಿದ್ದಾರೆ ಎಂದು ದೂರಿದ್ದಾರೆ.
ರುಪ್ಸಾ ದೂರು ಏನು?:
ಮತ್ತೊಂದು ಸಂಘಟನೆಯಾದ ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ‘ಶಾಲಾ ಮಾನ್ಯತೆ ನವೀಕರಣ, ಆರ್‌ಟಿಇ ಶುಲ್ಕ ಮರುಪಾವತಿ ಸೇರಿದಂತೆ ಇಲಾಖೆಯ ಪ್ರತಿಯೊಂದು ಕಾರ್ಯಗಳಿಗೂ ಅಧಿಕಾರಿಗಳು ಲಂಚ, ಶೇ.30ರಿಂದ 40ರಷ್ಟುಕಮಿಷನ್ ಕೇಳುತ್ತಿದ್ದಾರೆ. ಇದನ್ನು ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹಾಗಾಗಿ ಸಚಿವರನ್ನೂ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಪ್ರತೀ 10 ವರ್ಷಕ್ಕೊಮ್ಮೆ ಮಾನ್ಯತೆ ನವೀಕರಣ ಮಾಡಿ ಎಂದು ಹೈಕೋರ್ಚ್ ಹೇಳಿದ್ದರೂ ಇಲಾಖೆ ಪ್ರತಿ ವರ್ಷದ ಪ್ರಕ್ರಿಯೆಯಾಗಿಸಿದೆ. ಪ್ರತೀ ವರ್ಷ ಇದಕ್ಕಾಗಿ ಲಕ್ಷಾಂತರ ರು. ಕೇಳುತ್ತಾರೆ. ಲಂಚ ಕೊಡದಿದ್ದರೆ ಅನಗತ್ಯ ಕಾರಣನ್ನು ತೋರಿಸಿ ಮಾನ್ಯತೆ ನಿರಾಕರಿಸುತ್ತಾರೆ. ಸರ್ಕಾರದಿಂದ ನೀಡುವ ಆರ್‌ಟಿಇ ಮರುಪಾವತಿ ಶುಲ್ಕ ಬಿಡುಗಡೆಗೆ ಶೇ.40ಕ್ಕೂ ಹೆಚ್ಚು ಕಮಿನಷ್ ನೀಡಬೇಕು. ಡಿಡಿಪಿಐಗೆ ಶೇ.20, ಬಿಇಒಗಳಿಗೆ ಶೇ.25ರಷ್ಟು ಕಮಿಷನ್ ಕೊಡಬೇಕು ಎಂದು ದೂರಿದರು. ಕೆಲ ಬಿಇಒ, ಡಿಡಿಪಿಐಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ನಮ್ಮ ಬಳಿಕ ಆಡಿಯೋ ಸಾಕ್ಷ್ಯಾಧಾರಗಳು ಇವೆ. ಇಲಾಖೆ ತನಿಖೆ ನಡೆಸುವುದಾದರೆ ಅದನ್ನು ನೀಡಲು ಸಿದ್ಧ’ ಎಂದು ಹೇಳಿದರು.