Asianet Suvarna News Asianet Suvarna News

ಕರ್ನಾಟಕದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು: ಸಿಎಂ ಬೊಮ್ಮಾಯಿ ಹೇಳಿದ್ದಿಷ್ಟು

ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಇದು ನಮ್ಮ ಸರ್ಕಾರದ ನಿಲುವು ಕೂಡ ಆಗಿಲ್ಲ: ಸಿಎಂ ಬೊಮ್ಮಾಯಿ 

CM Basavaraj Bommai Talks Over Separate College for Muslim Girls in Karnataka grg
Author
First Published Dec 1, 2022, 11:21 AM IST

ಬೆಂಗಳೂರು(ಡಿ.01):  ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಬಗ್ಗೆ ನಮ್ಮ ಸರ್ಕಾರದಲ್ಲಿ ಯಾವುದೇ ಚರ್ಚೆ ನಡೆದಿಲ್ಲ, ಇದು ನಮ್ಮ ಸರ್ಕಾರದ ನಿಲುವು ಕೂಡ ಆಗಿಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.

ವಕ್ಫ್ ಬೋರ್ಡ್‌ನಿಂದ ಮುಸ್ಲಿಂಯುವತಿಯರಿಗೆ ಪ್ರತ್ಯೇಕ ಕಾಲೇಜು ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ರಾಜ್ಯದಲ್ಲಿ ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆಯ ಪ್ರಸ್ತಾವನೆ ಇದ್ರೆ ವಕ್ಫ್ ಬೋರ್ಡ್ ಅಧ್ಯಕ್ಷರೇ ಬಂದು ನನ್ನ ಜತೆ ಚರ್ಚೆ ಮಾಡಲಿ ಅಂತ ತಿಳಿಸಿದ್ದಾರೆ. 

Hijab Row ವೀರಶೈವ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಂದ ಪರೀಕ್ಷೆ ಬಹಿಷ್ಕಾರ

ರಾಜ್ಯದಲ್ಲಿ ಮುಸ್ಲಿಂ ಯುವತಿಯರಿಗೆ ಪ್ರತ್ಯೇಕ ಕಾಲೇಜು 

ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ತಿಂಗಳು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ ಅಂತ ಅಂತ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್‌ ಲಕ್ಕಿಸ್ಟಾರ್‌ ಹೇಳಿದ್ದರು. 

ನ.28 ರಂದು ಮಂಗಳೂರಿನಲ್ಲಿ ಮಾತನಾಡಿದ್ದ ಅವರು, ಮೂರು ತಿಂಗಳ ಹಿಂದೆ, ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಸರ್ಕಾರದಿಂದ ಇದಕ್ಕೆ ಅನುಮೋದನೆಯೂ ದೊರೆತಿತ್ತು. ಪ್ರತಿ ಕಾಲೇಜಿಗೆ 2.50 ಕೋಟಿ ರು.ಅನುದಾನವನ್ನೂ ಮೀಸಲಿರಿಸಲಾಗಿದ್ದು, ವಕ್ಫ್ ಬೋರ್ಡ್‌ಗೆ ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಈ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ ಅಂತ ತಿಳಿಸಿದ್ದರು. 

ಎಲ್ಲೆಲ್ಲಿ ಕಾಲೇಜು ಸ್ಥಾಪನೆ?:

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್‌ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲಾಗುತ್ತದೆ.

ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯಲ್ಲೇ ಈ ಕಾಲೇಜುಗಳು ತಲೆ ಎತ್ತಲಿವೆ. ಶಂಕುಸ್ಥಾಪನೆ ನೆರವೇರಿದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರಥಮ ಪಿಯುಸಿ ಆರಂಭವಾಗಲಿದ್ದು, ನಂತರದ ವರ್ಷ ದ್ವಿತೀಯ ಪಿಯುಸಿ...ಹೀಗೆ ಪದವಿ ಹಂತದವರೆಗೆ ಇದನ್ನು ವಿಸ್ತರಿಸಲಾಗುತ್ತದೆ.

ಹಿಜಾಬ್‌ ವಿವಾದದ ಬಳಿಕ ರಾಜ್ಯಾದ್ಯಂತ ಸುಮಾರು ಏಳೆಂಟು ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರು ಒಂದೋ ಶಿಕ್ಷಣದಿಂದಲೇ ವಿಮುಖರಾಗಿದ್ದಾರೆ, ಇಲ್ಲವೇ ಮುಸ್ಲಿಂ ಆಡಳಿತದ ಕಾಲೇಜುಗಳಿಗೆ ಹಾಗೂ ಹಿಜಾಬ್‌ಗೆ ಅವಕಾಶವಿರುವ ಖಾಸಗಿ ಕಾಲೇಜುಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆ ನಂತರ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಂದ ಕಾಲೇಜು ಸ್ಥಾಪನೆಗೆ 13 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ಎರಡು ಕಾಲೇಜುಗಳು ಈಗಾಗಲೇ ಮಂಜೂರಾಗಿವೆ. ಮುಂದಿನ ವರ್ಷ ಇನ್ನಷ್ಟು ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸರ್ಕಾರದ ಹೊಸ ನಿರ್ಧಾರ ಗಮನ ಸೆಳೆದಿದೆ.

ಭಾರತದ ಮುಸ್ಲಿಂ ಮಹಿಳೆಯರಿಗೆ ಇರಾನ್ ಮಾದರಿಯಾಗಬೇಕು: ಶೋಭಾ ಕೆರಂದ್ಲಾಜೆ

ವಕ್ಫ್ ಆಸ್ತಿಯಲ್ಲಿ ಸಮುದಾಯದ ಮಕ್ಕಳಿಗೆ ಕಾಲೇಜು ಸ್ಥಾಪನೆಗೆ ಅವಕಾಶವಿದೆ. ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಇವುಗಳನ್ನು ಆರಂಭಿಸಲಾಗುತ್ತಿದೆಯೇ ಹೊರತು ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಅಲ್ಲ. ಖಾಸಗಿ ಕಾಲೇಜುಗಳಲ್ಲಿ ಬಡ ಕುಟುಂಬಗಳಿಗೆ ದುಬಾರಿ ಫೀಸ್‌ ಕಟ್ಟುವುದು ಕಷ್ಟ. ಪ್ರತ್ಯೇಕ ಸರ್ಕಾರಿ ಕಾಲೇಜು ಇದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಬರುತ್ತಾರೆ, ಶಿಕ್ಷಣದಿಂದ ದೂರ ಉಳಿಯುವುದು ತಪ್ಪುತ್ತದೆ ಎನ್ನುವ ದೃಷ್ಟಿಯಿಂದ ವಕ್ಫ್ ಬೋರ್ಡ್‌ ಮೂಲಕ ಆರಂಭಿಸಲಾಗುತ್ತಿದೆ ಅಂತ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್‌ ಲಕ್ಕಿಸ್ಟಾರ್‌ ತಿಳಿಸಿದ್ದರು. 

ಮುಸ್ಲಿಂ ಪರ ಕೆಲಸ: ಹಿಂದೂಗಳ ಆಕ್ಷೇಪ

ಬಿಜೆಪಿ ಹಿಂದುತ್ವದ ಆಧಾರದಲ್ಲಿ ಓಟು ಪಡೆದುಕೊಂಡು ಈಗ ಜಾತ್ಯತೀತ ಮುಖವಾಡ ಹಾಕಿಕೊಂಡಿರುವುದು ನಿಷ್ಠಾವಂತ ಹಿಂದೂ ಕಾರ್ಯಕರ್ತರಿಗೆ ಮಾಡುತ್ತಿರುವ ದೊಡ್ಡ ಮೋಸ. ಆರಂಭದಿಂದಲೂ ಹಿಂದುತ್ವವಾದವನ್ನೇ ಹೇಳಿಕೊಂಡು ಬಂದು ಈಗ ಮುಸ್ಲಿಮರ ಪರ ಕೆಲಸ ಮಾಡುತ್ತಿದ್ದಾರೆ ಎಂದಾದರೆ ಬಿಜೆಪಿ ಸರ್ಕಾರವು ದ್ವಿಮುಖ ನೀತಿ ಅಳವಡಿಸಿಕೊಂಡಿರುವುದು ಸ್ಪಷ್ಟ. ಇಂತಹ ಪಕ್ಷ ಮತ್ತು ಅದರ ನಾಯಕರು ಭವಿಷ್ಯತ್ತಿನಲ್ಲಿ ಹಿಂದೂ ಧರ್ಮಕ್ಕೆ ಮಾರಕ ಅಂತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದರು. 
 

Follow Us:
Download App:
  • android
  • ios