Asianet Suvarna News Asianet Suvarna News

ಭಾರತದ ಮುಸ್ಲಿಂ ಮಹಿಳೆಯರಿಗೆ ಇರಾನ್ ಮಾದರಿಯಾಗಬೇಕು: ಶೋಭಾ ಕೆರಂದ್ಲಾಜೆ

ಮುಸ್ಲಿಂ ಮಹಿಳೆಗೆ ಸ್ವಾತಂತ್ರ್ಯ ಸಿಗಬೇಕಾದರೆ ಹಿಜಾಬ್ ಗೆ ಅವಕಾಶ ಕೊಡಬಾರದು, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುವುದು ಮುಖ್ಯ.  ಇರಾನ್ ನ ಮುಸ್ಲಿಂ ಮಹಿಳೆಯರು ಭಾರತಕ್ಕೆ ಮಾರ್ಗದರ್ಶಕ ಆಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

Iran should be a role model for Indian Muslim women saya Shobha Karandlaje gow
Author
First Published Oct 14, 2022, 9:51 PM IST

ಉಡುಪಿ (ಅ.14): ಮುಸ್ಲಿಂ ಮಹಿಳೆಗೆ ಸ್ವಾತಂತ್ರ್ಯ ಸಿಗಬೇಕಾದರೆ ಹಿಜಾಬ್ ಗೆ ಅವಕಾಶ ಕೊಡಬಾರದು, ನಮ್ಮ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ, ಉದ್ಯೋಗ ಸಿಗುವುದು ಮುಖ್ಯ. ಮುಸ್ಲಿಂ ಹೆಣ್ಣು ಮಕ್ಕಳು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು. ಇರಾನ್ ನ ಮುಸ್ಲಿಂ ಮಹಿಳೆಯರು ಭಾರತಕ್ಕೆ ಮಾರ್ಗದರ್ಶಕ ಆಗಬೇಕು ಎಂದು ಕೇಂದ್ರ ಸಚಿವೆ ಮತ್ತು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಅವರು ಶುಕ್ರವಾರ ಉಡುಪಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿ ಹಿಜಾಬ್ ಪ್ರಕರಣ ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಆಗಬಹುದು, ಇಬ್ಬರು ನ್ಯಾಯಮೂರ್ತಿಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಸಂವಿಧಾನಿಕ ಪೀಠದಲ್ಲಿ ಹಿಜಾಬ್ ದೇಶಕ್ಕೆ ಬೇಕೋ, ಬೇಡವೋ ಎಂದು ತೀರ್ಮಾನವಾಗುತ್ತದೆ, ಎಲ್ಲಾ ಮಹಿಳೆಯರು ಸ್ವಾತಂತ್ರ್ಯವಾಗಿ ಬದುಕಲು ನ್ಯಾಯಾಲಯ ಅವಕಾಶ ಮಾಡಿಕೊಡಬಹುದು ಎಂದರು. ಮನೆಯವರು, ಗಂಡಸರು ಹಿಜಾಬ್ ಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ಗಂಡಸರು ಹಾಕುವ ತಾಳಕ್ಕೆ ಕುಣಿದು ಹೆಣ್ಣುಮಕ್ಕಳು ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ, ಪ್ರಗತಿಶೀಲ ದೇಶಗಳು ಮತಗಳಲ್ಲಿ ಇರುವ ತಪ್ಪುಗಳನ್ನು ಗುರುತಿಸಿ ಸರಿ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಭಾರತ್ ಜೋಡೋ ವಿಚಾರ: ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯಿಂದ ಅವರ ದೇಹದ ಫಿಟ್ನೆಸ್ ಪ್ರದರ್ಶನವಾಗುತ್ತಿದೆ. ದೇಶದ ನೇತೃತ್ವ ವಹಿಸಲು ರಾಹುಲ್ ಗೆ ಸಾಧ್ಯಾನಾ? ಪಕ್ಷದ ನೇತೃತ್ವ ವಹಿಸದವರಿಗೆ ದೇಶದ ನೇತೃತ್ವ ವಹಿಸಲು ಸಾಧ್ಯವಿಲ್ಲ. ಮೋದಿಗೆ ಸರಿಸಾಟಿಯಾಗುವ ರಾಹುಲ್ ಕನಸು ಎಂದಿಗೂ ನನಸಾಗುವುದಿಲ್ಲ. ದೇಹದ ಫಿಟ್ನೆಸ್ ಇದ್ದರೆ ಮೆಂಟಲ್ ಫಿಟ್ನೆಸ್ ಇದ್ದಾರ? ದೇಶ ಆಳಲು ಮೆಂಟಲ್ ಫಿಟ್ನೆಸ್ ಇದ್ದಾರಾ ಅನ್ನುವುದನ್ನು ದೇಶದ ಜನ ತೀರ್ಮಾನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. 

ಮಂಡ್ಯ ಬಾಲಕಿಯ ಅತ್ಯಾಚಾರ ಮತ್ತು ಕೊಲೆ: 
ಮಂಡ್ಯದಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ನಡೆಸಿದ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವೆ ದೇಶದಲ್ಲಿ ನಿರ್ಭಯ ಪ್ರಕರಣದ ನಂತರ ಬಲವಾದ ಕಾನೂನು ಇದೆ. ಆ ಕಾನೂನು ಕರ್ನಾಟಕ ರಾಜ್ಯದಲ್ಲೂ ಜಾರಿಯಾಗಬೇಕು. ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು, ಅಪ್ರಾಪ್ತ ಬಾಲಕಿ ಅತ್ಯಾಚಾರಕ್ಕೆ ಮರಣದಂಡನೆ ಎಂದು ಸಂಸತ್ ನಲ್ಲಿ ಜಾರಿಯಾಗಿದೆ. ಪುಸಲಾಯಿಸಿ ಅತ್ಯಾಚಾರ ಮಾಡಿ ಕೊಲೆಗೈದ ಶಿಕ್ಷಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಶಾಸಕ ಹರೀಶ್ ಪೂಂಜಾಗೆ ಹಲ್ಲೆ ಯತ್ನ ಖಂಡನೆ:
ದೇಶದಲ್ಲಿ ಪಿ.ಎಫ್.ಐ ಬ್ಯಾನ್ ಆದ ನಂತರ ಅದರ ಬೆಂಬಲಿಗರು ಹತಾಶರಾಗಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರಿಗೆ ಬೆದರಿಕೆ ಹಾಕಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ತನಿಖೆ ಮಾಡಿ ಆರೋಪಿಗಳನ್ನು ಪೊಲೀಸರು ಬಂಧಿಸಬೇಕು ಎಂದರು.

 

ಬುರ್ಖಾ ನಿಷೇಧ, ಸ್ವಿಸ್ ನಿಯಮ ಉಲ್ಲಂಘಿಸಿದರೆ 83,000 ರೂ ದಂಡ!

ಪಿ.ಎಫ್.ಐ ನಿಷೇಧದ ಬಳಿಕ ಶೋಭಾ ಕರಂದ್ಲಾಜೆಗೆ ಜೀವ ಬೆದರಿಕೆ: 
ದೇಶದಲ್ಲಿ ಪಿ.ಎಫ್.ಐ ನಿಷೇಧದ ಬಳಿಕ ವಿದೇಶಗಳಿಂದ ನಿರಂತರವಾಗಿ ಇಂಟರ್ ನೆಟ್ ಕರೆಗಳ ಮೂಲಕ ತನಗೆ ಜೀವ ಬೆದರಿಕೆಯನ್ನು ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ತನಗೂ ನಾಲ್ಕು ಸಂಖ್ಯೆಯ ವಿದೇಶಿ ನಂಬರ್ ಗಳಿಂದ ಬೆದರಿಕೆ ಕರೆಗಳು ಬರುತ್ತಿದೆ. ವಿದೇಶಿ ಇಂಟರ್ ನೆಟ್ ಕರೆಗಳಾಗಿರುವುದರಿಂದ ಪೋಲಿಸರಿಗೆ ಈ ಸಂಖ್ಯೆಗಳು ಯಾರದ್ದೆಂದು ತಿಳಿಯಲು ಕಷ್ಟವಾಗಿದೆ. ಆದರೆ ಈ ಬೆದರಿಕೆ ಕರೆಗಳಿಗೆ ನಾವು ಹೆದರುವುದು ಇಲ್ಲ, ಜಗ್ಗುವುದು ಇಲ್ಲ ಎಂದರು.

ನಮ್ ಮಕ್ಳು ಹಿಜಾಬ್ ಹಾಕ್ತಾರೆ ನೀವು ಬಿಕಿನಿ ಹಾಕ್ಕೊಳ್ಳಿ, ಬಿಜೆಪಿ ವಿರುದ್ಧ ಓವೈಸಿ ವಾಗ್ದಾಳಿ!

ಹಿಂದುತ್ವದ ವಿಚಾರವಾಗಿ ಮಾತನಾಡಿದಾಗಲೆಲ್ಲಾ ನನಗೆ ಬೆದರಿಕೆ ಕರೆಗಳು ಬಂದಿದೆ. ಆದರೆ ಭಯೋತ್ಪಾದನೆ ನಿರ್ಮೂಲನೆ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದರು.

Follow Us:
Download App:
  • android
  • ios