ಎನ್‌ಇಪಿಯಿಂದ 5 ವರ್ಷದಲ್ಲಿ ಬದಲಾವಣೆ: ಸಿಎಂ ಬೊಮ್ಮಾಯಿ

*  ವಿದೇಶದಲ್ಲಿ ಸಿಗುವ ಉತ್ಕೃಷ್ಟಶಿಕ್ಷಣ ನಮ್ಮಲ್ಲೇ ಲಭ್ಯ
*  ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ
*  ವಿದೇಶಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಅಧ್ಯಯನ ನಡೆಸಲು ಆಗಮಿಸಲಿದ್ದಾರೆ

CM Basavaraj Bommai Talks Over National Education Policy in Karnataka grg

ಬೆಂಗಳೂರು(ಜೂ.10): ನೂತನ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಅಳವಡಿಕೆಯಿಂದ ಐದು ವರ್ಷದಲ್ಲಿ ಶಿಕ್ಷಣ ವ್ಯವಸ್ಥೆಯು ಅಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಲಿದೆ. ವಿದೇಶಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಕ್ಕೆ ಅಧ್ಯಯನ ನಡೆಸಲು ಆಗಮಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಕೆ.ಆರ್‌.ವೃತ್ತದ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (ಯುವಿಸಿಇ) ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನಿರ್ಮಿಸಿರುವ 150 ಅಡಿ ಧ್ವಜ ಸ್ಥಂಭದ ಉದ್ಘಾಟನೆ, ಯುವಿಸಿಇ ನೂತನ ಮೆಕ್ಯಾನಿಕಲ್‌ ವಿಭಾಗ ಕಟ್ಟಡದ ಭೂಮಿ ಪೂಜೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಭವಿಷ್ಯದ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ಕೇಂದ್ರದಿಂದ PM Shri Schools ಸ್ಥಾಪನೆ

ಬದಲಾದ ವ್ಯವಸ್ಥೆಗೆ ತಕ್ಕಂತೆ ಕೇಂದ್ರ ಸರ್ಕಾರವು ಎನ್‌ಇಪಿ ಜಾರಿಗೆ ತಂದಿದ್ದು ಮೊದಲು ಅಳವಡಿಸಿಕೊಂಡ ರಾಜ್ಯ ಕರ್ನಾಟಕವಾಗಿದೆ. ರಾಜಿ ಮಾಡಿಕೊಳ್ಳದೇ ಕಟ್ಟುನಿಟ್ಟಾಗಿ ಎನ್‌ಇಪಿ ಅನುಷ್ಠಾನ ಮಾಡುತ್ತಿದ್ದೇವೆ. ಇದರಿಂದ ಐದು ವರ್ಷದಲ್ಲಿ ಮಹತ್ತರ ಬದಲಾವಣೆ ಆಗಲಿದೆ. ಕೆಲ ದೇಶಗಳಲ್ಲಿ ನೀಡುತ್ತಿರುವ ಉತ್ಕೃಷ್ಟಶಿಕ್ಷಣ ಇಲ್ಲಿಯೇ ಸಿಗುವುದರಿಂದ ವಿದೇಶಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನಕ್ಕೆ ಬರಲಿದ್ದಾರೆ ಎಂದು ಭರವಸೆ ನೀಡಿದರು.

ಜ್ಞಾನವೇ ನಿರ್ಣಾಯಕ

ಹಿಂದೆ ಭೂಮಿ ಇದ್ದವರು, ಬಂಡವಾಳಗಾರರು ಸಮಾಜದಲ್ಲಿ ಪ್ರಾಮುಖ್ಯತೆ ಪಡೆದಿದ್ದರು. ಆದರೆ 21ನೇ ಶತಮಾನವು ಜ್ಞಾನ ಯುಗವಾಗಿದ್ದು ಶಿಕ್ಷಣ ಪಡೆದವರಿಗೆ ಆದ್ಯತೆ ನೀಡಲಾಗುತಿದೆ. ದೇಶಕ್ಕೆ ಆಗಮಿಸುವ ವಿದೇಶಿ ಗಣ್ಯರು ನೇರವಾಗಿ ದೆಹಲಿಗೆ ತೆರಳುವುದಿಲ್ಲ. ನಗರದ ಇಸ್ಫೋಸಿಸ್‌, ವಿಪ್ರೋ ಕಚೇರಿಗಳಿಗೆ ಮೊದಲು ಭೇಟಿ ನೀಡುತ್ತಿದ್ದಾರೆ. ಜ್ಞಾನ ಪಡೆದವರೇ ನಿರ್ಣಾಯಕ ಸ್ಥಾನಗಳಲ್ಲಿ ಇದ್ದಾರೆ. ವಿದ್ಯಾರ್ಥಿಗಳು ಇದನ್ನು ಅರ್ಥ ಮಾಡಿಕೊಂಡು ಅಧ್ಯಯನಕ್ಕೆ ಆದ್ಯತೆ ನೀಡಬೇಕು ಎಂದು ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.

ಗತಕಾಲದ ವೈಭವ ಬರಲಿ

ಸಚಿವ ಅಶ್ವತ್ಥ ನಾರಾಯಣ ಮಾತನಾಡಿ, ಸರ್ಕಾರಿ ಇಂಜನಿಯರಿಂಗ್‌ ಕಾಲೇಜುಗಳು ಐಐಟಿಗಿಂತಲೂ ಗುಣಮಟ್ಟದಲ್ಲಿ ಉತ್ತಮವಾಗಿರಲು ದೇಶದ ಐಐಟಿಗಳ ಪ್ರಮುಖರನ್ನು ಆಯ್ಕೆ ಮಾಡಿ ಟಾಸ್‌್ಕಫೋರ್ಸ್‌ ರಚಿಸಲಾಗಿದೆ. ರಾಜ್ಯದಲ್ಲಿ ಸ್ಥಾಪನೆಯಾದ ಮೊದಲ ಇಂಜನಿಯರಿಂಗ್‌ ಕಾಲೇಜು ಯುವಿಸಿಇ ಆಗಿದ್ದು ಸಂಪೂರ್ಣ ಸ್ವಾಯತ್ತತೆ ನೀಡಲಾಗಿದೆ. ಗತಕಾಲದ ವೈಭವ ಮರಳಿ ಬರುವಂತೆ ಸರ್ಕಾರ ವಿವಿಗೆ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಂಜುನಾಥ್‌, ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ವಿವಿ ಕುಲಸಚಿವ ಪ್ರೊ.ಎಂ.ಕೊಟ್ರೇಶ್‌, ಪ್ರಾಂಶುಪಾಲ ಪ್ರೊ.ಎಚ್‌.ಎನ್‌.ರಮೇಶ್‌ ಮತ್ತಿತರರು ಉಪಸ್ಥಿತರಿದ್ದರು.

NEP: ಈಗಿರುವ ಸಂಪನ್ಮೂಲದಲ್ಲೇ ಎನ್‌ಇಪಿ ಅವಳಡಿಕೆ: ಸಚಿವ ಅಶ್ವತ್ಥನಾರಾಯಣ

ಶೇ.4ರಿಂದ ಕೈತಪ್ಪಿದ್ದ ಸೀಟು!

ವಿಶ್ವೇಶ್ವರಯ್ಯ ಎಂಜನಿಯರಿಂಗ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಅಭ್ಯಾಸ ಮಾಡಲು ಅರ್ಜಿ ಸಲ್ಲಿಸಿದ್ದೆ. ಆದರೆ ಶೇ.4ರಷ್ಟುಕಡಿಮೆ ಅಂಕ ಪಡೆದಿದ್ದರಿಂದ ನನಗೆ ಪ್ರವೇಶ ದೊಕಲಿಲ್ಲ. ಆದರೆ ಬಳಿಕ ನನ್ನ ಕಿರಿಯ ಸಹೋದರನಿಗೆ ಪ್ರವೇಶ ಲಭಿಸಿತು. ಇದರಿಂದಾಗಿ ನಮ್ಮ ಕುಟುಂಬವು ಈ ಕಾಲೇಜಿನೊಂದಿಗೆ ಸಂಬಂಧ ಹೊಂದುವಂತೆ ಆಯಿತು. ಇದೇ ಮೊದಲ ಸಲ ಕಾಲೇಜಿನ ಒಳಗೆ ಪ್ರವೇಶ ಮಾಡಿದ್ದು, ಅದ್ಭುತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಸಚಿವ ಅಶ್ವತ್ಥ ನಾರಾಯಣ, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಬೆಂಗಳೂರು ವಿವಿ ಕುಲಪತಿ ಪ್ರೊ.ವೇಣುಗೋಪಾಲ್‌ ಮತ್ತಿತರರು ಹಾಜರಿದ್ದರು. 

Latest Videos
Follow Us:
Download App:
  • android
  • ios