ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆಯಲ್ಲಿ ತಾಂತ್ರಿಕ ಶಿಕ್ಷಣ; CM Basavaraj Bommai
ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಸಕ್ತ ಕಾಲಮಾನಕ್ಕೆ ತಕ್ಕಂತೆ ಕೌಶಲತೆ ಹೆಚ್ಚಿಸುವ ಸಂಬಂಧ ಪ್ರೌಢಶಾಲಾ ಮಕ್ಕಳಿಗೆ ತಾಂತ್ರಿಕ ಶಿಕ್ಷಣದ ಪ್ರಾಥಮಿಕ ಜ್ಞಾನ ನೀಡುವ ಚಿಂತನೆ ಇದೆ ಸಿಎಂ ಬೊಮ್ಮಾಯಿ ಹೇಳಿದ್ಧಾರೆ.
ಬೆಂಗಳೂರು (ಜು.15): ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಸಕ್ತ ಕಾಲಮಾನಕ್ಕೆ ತಕ್ಕಂತೆ ಕೌಶಲತೆ ಹೆಚ್ಚಿಸುವ ಸಂಬಂಧ ಪ್ರೌಢಶಾಲಾ ಮಕ್ಕಳಿಗೆ ತಾಂತ್ರಿಕ ಶಿಕ್ಷಣದ ಪ್ರಾಥಮಿಕ ಜ್ಞಾನ ನೀಡುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಗುರುವಾರ ವಿಧಾನಸೌಧದಲ್ಲಿ ನಡೆದ ವಿಶ್ವ ಯುವ ಕೌಶಲ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 60ರ ದಶಕದಲ್ಲಿ ಪ್ರೌಢಶಾಲಾ ಹಂತದಲ್ಲಿಯೇ ಮಕ್ಕಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡಲಾಗುತ್ತಿತ್ತು. ಆದರೆ ನಂತರ ದಿನದಲ್ಲಿ ಸ್ಥಗಿತಗೊಳಿಸಲಾಯಿತು. ಜೀವನೋಪಾಯಕ್ಕೆ ಅನುಕೂಲವಾಗುವಂತೆ ತಂತ್ರಜ್ಞಾನದಲ್ಲಿ ಆಸಕ್ತಿ ಮೂಡಿಸಲು ಮತ್ತೊಮ್ಮೆ ಪ್ರಾರಂಭಿಸಲಾಗುವುದು. 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಪ್ರಾಥಮಿಕ ಜ್ಞಾನ ನೀಡಲಾಗುವುದು ಎಂದು ತಿಳಿಸಿದರು.
ಜನರನ್ನು ಉದ್ಯಮಶೀಲರನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯದಲ್ಲಿ ಸುಮಾರು 75 ಸಾವಿರ ಹೊಸ ಕೌಶಲ ಅಭಿವೃದ್ಧಿ ಕೇಂದ್ರಗಳನ್ನು ಆರಂಭಿಸಲಾಗುವುದು. ಪ್ರತಿಯೊಬ್ಬರಲ್ಲಿಯೂ ಅವರದೇ ಆದ ಪ್ರತಿಭೆ, ಕೌಶಲ ಇರುತ್ತದೆ. ಅದನ್ನು ಗುರುತಿಸಿ ಉತ್ತೇಜನ ನೀಡಿದರೆ ಸಾಧನೆಯ ಹಾದಿಯತ್ತ ಮುನ್ನಡೆಯಬಹುದು. ಕೌಶಲ ಅಭಿವೃದ್ಧಿಗೆ ತರಬೇತಿ ಸಹ ಬಹಳ ಅವಶ್ಯಕವಾಗಿದೆ. ಇದರಿಂದ ಉದ್ಯೋಗ ಮತ್ತು ಉದ್ದಿಮೆಗಳ ಸೃಷ್ಟಿಗೂ ಪೂರಕವಾಗಲಿದೆ ಎಂದರು.
ರಾಜ್ಯದಲ್ಲಿ ಈಗಾಗಲೇ ಐಟಿಐ, ಜಿಟಿಡಿಸಿಗಳನ್ನು ಮೇಲ್ದರ್ಜೆಗೇರಿಸುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ ಸಾಂಪ್ರದಾಯಿಕ ಕೌಶಲಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಒಂದು ಜಿಲ್ಲೆ-ಒಂದು ಕೌಶಲ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ ನುರಿತ ಅಭ್ಯರ್ಥಿಗಳಿಗೆ ತರಬೇತಿ ಸಹ ನೀಡಲಾಗುತ್ತಿದೆ. ರಾಜ್ಯದ ಸುಮಾರು ಆರು ಎಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪ ಇದೆ. ಉದ್ಯೋಗಿಗಳು ತಮ್ಮ ಕೌಶಲ ಪ್ರದರ್ಶಿಸಿದರೆ ರಾಜ್ಯಕ್ಕೆ ಮತ್ತು ದೇಶಕ್ಕೆ ಸಹ ಆದಾಯ ಹೆಚ್ಚುತ್ತದೆ. ಉದ್ಯಮಶೀಲತೆಯಲ್ಲಿ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನವನ್ನು ಅಲಂಕರಿಸುವುದರಲ್ಲಿ ಸಂಶಯ ಇಲ್ಲ. ಅಲ್ಲದೇ, ಸ್ತ್ರೀಶಕ್ತಿ ಮೂಲಕ ಸುಮಾರು ಐದು ಲಕ್ಷ ಮಹಿಳೆಯರಿಗೆ ಕೌಶಲ ನೀಡಲು ಉದ್ದೇಶಿಸಲಾಗಿದೆ. ಇದು ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೌಶಲಾಭಿವೃದ್ಧಿ ಸಚಿವ ಡಾ ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಮುಂದುವರಿದ ದೇಶದಲ್ಲಿ ಶೇ.95ರಷ್ಟುಜನರು ಕೌಶಲಪೂರ್ಣರಾಗಿದ್ದಾರೆ. ನಮ್ಮಲ್ಲಿಯೂ ಇದು ಸಾಧ್ಯವಾಗಬೇಕು. ಇದಕ್ಕಾಗಿ ಎನ್‌ಇಪಿ ಪ್ರಕಾರ ಕೌಶಲಾಭಿವೃದ್ಧಿಯನ್ನು ಶಿಕ್ಷಣದಲ್ಲಿ ಕಡ್ಡಾಯ ಮಾಡಲಾಗಿದೆ. ಜಾಗತಿಕ ಸ್ಪರ್ಧೆಯಲ್ಲಿ ಉಳಿದು ಗೆಲ್ಲಬೇಕು ಎಂದರೆ ಉತ್ತಮ ಗುಣಮಟ್ಟದ ಉತ್ಪನ್ನಗಳು ಅನಿವಾರ್ಯ. ಹೀಗಾಗಿ ರಾಜ್ಯದಲ್ಲಿ ಕಲೆ, ವಾಣಿಜ್ಯ ಮುಂತಾದ ತಾಂತ್ರಿಕೇತರ ವಿಭಾಗಗಳಲ್ಲಿ ಓದುತ್ತಿರುವ 25 ಲಕ್ಷ ವಿದ್ಯಾರ್ಥಿಗಳಿಗೆ ಕೌಶಲಗಳನ್ನು ಕಲಿಸಲಾಗುತ್ತಿದೆ. ಈ ಮೂಲಕ ಇವರನ್ನೆಲ್ಲಾ ಉದ್ಯೋಗದಾತರನ್ನಾಗಿ ಮತ್ತು ಉದ್ಯೋಗಾರ್ಹರನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಮರುರೂಪ ನೀಡಿರುವ ಕರ್ನಾಟಕ ಸ್ಕಿಲ್ ಕನೆಕ್ಟ್ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಜೀವನೋಪಾಯ ಮಿಷನ್ ನಿರ್ದೇಶಕಿ ಮಂಜುಶ್ರೀ, ಕೈಗಾರಿಕಾ ಮತ್ತು ತರಬೇತಿ ಇಲಾಖೆ ಆಯುಕ್ತೆ ಜ್ಯೋತಿ ಉಪಸ್ಥಿತರಿದ್ದರು.