Asianet Suvarna News Asianet Suvarna News

ಈ ಅಂಗನವಾಡಿಗೆ ಊರ ಸೊಸೆಯೇ ಶಿಕ್ಷಕಿಯಾಗಬೇಕಂತೆ!

  • ಈ ಅಂಗನವಾಡಿಗೆ ಊರ ಸೊಸೆಯೇ ಶಿಕ್ಷಕಿಯಾಗಬೇಕಂತೆ!
  • ಎರಡು ವಾರದಿಂದ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುತ್ತಿಲ್ಲ ಗ್ರಾಮಸ್ಥರು
  • ಬೇರೆ ತಾಲೂಕಿನ ಶಿಕ್ಷಕಿಯರು ಬೇಡವೆಂದು ಸೋಮನಕೊಪ್ಪ ಗ್ರಾಮಸ್ಥರ ಪಟ್ಟು
daughter inlaw of the village should be a teacher for this Anganwadi rav
Author
First Published Sep 7, 2022, 1:05 PM IST

ರಮೇಶ್‌ ಸೋಲಾರಗೋಪ್ಪ

 ಕಲಘಟಗಿ (ಸೆ.7) : ನಮ್ಮೂರ ಅಂಗನವಾಡಿ ಕೇಂದ್ರಕ್ಕೆ ನಮ್ಮೂರಿನ ಸೊಸೆಯನ್ನೇ ಶಿಕ್ಷಕಿಯಾಗಿ ನೇಮಿಸಬೇಕೆಂದು ಪಟ್ಟು ಹಿಡಿದಿರುವ ಗ್ರಾಮಸ್ಥರು ಕಳೆದ ಎರಡು ವಾರಗಳಿಂದ ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸದೇ ಇರುವುದರಿಂದ ಶಿಕ್ಷಕಿ ಮತ್ತು ಅಡುಗೆ ಸಹಾಯಕಿ ಪ್ರತಿ ದಿನ ಕೆಲಸ ಇಲ್ಲದೇ ಕಾಲ ಕಳೆಯುತ್ತಿದ್ದಾರೆ.

ಅಂಗನವಾಡಿ ಕೇಂದ್ರಕ್ಕೆ ನುಗ್ಗಿದ ನೀರು; ಸೂಕ್ತ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಕರವೇ ಪ್ರತಿಭಟನೆ

ಹೌದು! ಇಂತಹ ಘಟನೆ ತಾಲೂಕಿನ ಸೋಮನಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆಯಾಗಿ ಬಂದಿರುವ ಶಿಕ್ಷಕಿ ನೀಲಮ್ಮ ಕನಕಣ್ಣವರ ಅವರು ನಮ್ಮೂರಿನ ಅಂಗನವಾಡಿ ಕೇಂದ್ರಕ್ಕೆ ಬೇಡವೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜತೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಪಟ್ಟು ಹಿಡಿದಿದ್ದಾರೆ.

ಒಂದೇ ವಾರಕ್ಕೆ ರಾಜೀನಾಮೆ:

ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಶಿಕ್ಷಕಿಯರಿಲ್ಲದೆ ಹುದ್ದೆ ಖಾಲಿಯಿತ್ತು. ನಂತರ ಅರ್ಜಿ ಕರೆದು ಆಯ್ಕೆ ಪ್ರಕ್ರಿಯೆ ಸಹ ನಡೆಯಿತು. ಆಯ್ಕೆಯಾದ ಅಭ್ಯರ್ಥಿ ಒಂದು ವಾರ ಸೇವೆ ಸಲ್ಲಿಸಿ ಈ ಕೆಲಸ ಬೇಡವೆಂದು ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರದಿಂದ ಸೋಮನಕೊಪ್ಪ ಅಂಗನವಾಡಿಗೆ ನೀಲಮ್ಮ ಕನಕಣ್ಣವರ ಎಂಬುವರನ್ನು ವರ್ಗಾವಣೆ ಮಾಡಲಾಗಿದೆ. ಇವರು ಕರ್ತವ್ಯಕ್ಕೆ ಹೋದಾಗ ಗ್ರಾಮಸ್ಥರು ನಮ್ಮೂರಿನ ಅಂಗನವಾಡಿ ಕೇಂದ್ರಕ್ಕೆ ನಮ್ಮೂರಿನ ಸೊಸೆಯನ್ನೇ ನೇಮಿಸಬೇಕು ಎಂದು ಶಾಸಕರ ಬಳಿ ಹೋಗಿ ಹಲವರು ಕೋರಿದ್ದಾರೆ. ಇನ್ನೂ ಕೆಲವರು ನೀಲಮ್ಮ ಅವರನ್ನೇ ಮುಂದುವರಿಸಿ ಎಂದು ಹೇಳಿದ್ದಾರೆ. ಇದೀಗ ಅಂಗನವಾಡಿ ಶಿಕ್ಷಕಿಯ ನೇಮಕಕ್ಕೆ ಸಂಬಂಧಿಸಿದಂತೆ ರಾಜಕೀಯ ಶುರುವಾಗಿದೆ. ಗ್ರಾಮಸ್ಥರು ಇಂತವರನ್ನೇ ನೇಮಿಸಿ ಎಂದು ಆಗ್ರಹಿಸುತ್ತಿಲ್ಲ, ತಮ್ಮೂರ ಸೊಸೆಯನ್ನು ನೇಮಿಸಿ, ಇವರು ಬೇಡ ಎಂದು ವರಾತ ಹಚ್ಚಿದ್ದಾರೆ.

2 ವಾರದಿಂದ ಕೇಂದ್ರಕ್ಕೆ ತೆರಳದ ಮಕ್ಕಳು:

ಗ್ರಾಮಸ್ಥರು ಹಾಗೂ ಅಂಗನವಾಡಿ ಶಿಕ್ಷಕಿಯ ಹುದ್ದೆಯ ಮುಸುಕಿನ ಗುದ್ದಾಟದಿಂದ ಮಕ್ಕಳು ಕಲಿಕೆಯಿಂದ ದೂರವುಳಿಯುವಂತಾಗಿದೆ. ಮಕ್ಕಳು ಕೇಂದ್ರಕ್ಕೆ ಬರದೆ ಇರುವುದರಿಂದ ಶಿಕ್ಷಕಿ ಹಾಗೂ ಅಡುಗೆ ಸಹಾಯಕಿ ಇಬ್ಬರೇ ಕುಳಿತುಕೊಂಡು ಹೋಗುತ್ತಿದ್ದಾರೆ.

ಶಿಕ್ಷಕಿಯ ಕಣ್ಣೀರು:

‘ಸೋಮನಕೊಪ್ಪ ಅಂಗನವಾಡಿ ಕೇಂದ್ರಕ್ಕೆ ಹಾಜರಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲವು ಪಾಲಕರು ತಮ್ಮ ಮಕ್ಕಳನ್ನು ಕಳುಹಿಸುತ್ತಿಲ್ಲ. ಬೆಲವಂತರ ಗ್ರಾಮ ನನ್ನ ತವರು ಮನೆ. ಆದರೆ, ಊರು ಸೊಸೆ ಬೇಕೆಂದು ಗ್ರಾಮಸ್ಥರು ನನಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗಂಡನಿಂದ ಕೌಟುಂಬಿಕ ದೌರ್ಜನ್ಯ ಅನುಭವಿಸುತ್ತಿದ್ದೇನೆ. ಈಗ ಏನು ಮಾಡಲಿ ತಿಳಿಯುತ್ತಿಲ್ಲ’ ಎಂದು ಅಂಗನವಾಡಿ ಶಿಕ್ಷಕಿ ನೀಲಮ್ಮ ಕನಕಣ್ಣವರ ಕಣ್ಣೀರು ಹಾಕಿದರು.

ಶಿಕ್ಷಕಿ ಮತ್ತು ಅಡುಗೆ ಸಹಾಯಕಿ ಇದ್ದರೂ ಗ್ರಾಮದ ಮಕ್ಕಳು ಶಾಲೆಗೆ ಬರದೇ ಇರುವುದು ಕೆಲ ಪಾಲಕರಲ್ಲಿ ಬೇಸರ ಮೂಡಿಸಿದೆ. ಕೂಡಲೇ ಸಂಬಂಧಪಟ್ಚ ಮೇಲಧಿ​ಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಈ ಸಮಸ್ಯೆ ನಿವಾರಿಸಬೇಕು ಎಂದು ಆಗ್ರಹಿಸಿದ್ದಾರೆ.

ಬೆಳಗಾವಿ: ಮರದಲ್ಲಿ ನೇತು ಹಾಕಿದ್ದ ಚೀಲದಲ್ಲಿ ಗಂಡು ಶಿಶು ಪತ್ತೆ

ವರ್ಗಾವಣೆಯಾಗಿ ಬಂದಿರುವ ಶಿಕ್ಷಕಿಗೆ ಗಂಡನ ಮನೆ ಕಡೆಯಿಂದ ಕೌಟುಂಬಿಕ ದೌರ್ಜನ್ಯ ಆಗಿದ್ದು ಅವರ ರಕ್ಷಣೆಗಾಗಿ ಖಾಲಿ ಇರುವ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡಲಾಗಿದೆ. ಆದರೆ ಗ್ರಾಮಸ್ಥರು ನಮಗೆ ಈ ಶಿಕ್ಷಕಿ ಬೇಡ ಎಂದು ಹೇಳುತ್ತಿದ್ದಾರೆ. ಗ್ರಾಮಸ್ಥರಿಗೆ ತಿಳಿವಳಿಕೆ ಹೇಳಿದರೂ ಕೇಳುತ್ತಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.

ಎಚ್‌.ಎಚ್‌. ಕುಕನೂರ, ಜಿಲ್ಲಾ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಅ​ಧಿಕಾರಿ

 

Follow Us:
Download App:
  • android
  • ios