2022-23ನೇ ಸಾಲಿನ ರಾಜ್ಯ ಸಿಇಟಿ ಫಲಿತಾಂಶ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದ್ದು, ಜು. 29 ಅಥವಾ 30 ಕ್ಕೆ ಪ್ರಕಟವಾಗುವ ಸಾಧ್ಯತೆ 

ಬೆಂಗಳೂರು(ಜು.25):  ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಎಂಜಿನಿಯರಿಂಗ್‌ ಸೇರಿದಂತೆ ವೃತ್ತಿರ ಕೋರ್ಸುಗಳ ಪ್ರವೇಶಕ್ಕೆ ನಡೆಸಿದ್ದ 2022-23ನೇ ಸಾಲಿನ ರಾಜ್ಯ ಸಿಇಟಿ ಫಲಿತಾಂಶ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧತೆ ನಡೆಸಿದ್ದು, ಜು. 29 ಅಥವಾ 30 ಕ್ಕೆ ಪ್ರಕಟವಾಗುವ ಸಾಧ್ಯತೆ ಇದೆ.

ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಒಂದು ದಿನದ ಹಿಂದಷ್ಟೆ ಪ್ರಕಟವಾಗಿದೆ. ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಭಾನುವಾರ ಬಿಡುಗಡೆಯಾಗಿದೆ. ಸಿಬಿಎಸ್‌ಇ, ಐಸಿಎಸ್‌ಇನಲ್ಲಿ ಪಡೆದಿರುವ ಫಲಿತಾಂಶದ ವಿಜ್ಞಾನ ವಿಷಯಗಳ ಶೇ.50ರಷ್ಟು ಅಂಕಗಳನ್ನು ಸಿಇಟಿ ಫಲಿತಾಂಶಕ್ಕೆ ಜೋಡಿಸಿ ರಾರ‍ಯಂಕ್‌ಲಿಸ್ಟ್‌ ತಯಾರಿಸಲಾಗುತ್ತದೆ. ಇದಕ್ಕೆ ಮೂರ್ನಾಲ್ಕು ದಿನ ಕಾಲಾವಕಾಶ ಬೇಕಾಗುತ್ತದೆ. ಅಂದುಕೊಂಡಂತೆ ಎಲ್ಲ ಸಿದ್ಧತೆಗಳಾದರೆ ಜು. 29 ಅಥವಾ 30ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.

2023ರಿಂದ ಕರ್ನಾಟಕದಲ್ಲಿ ಒಂದೇ ಸಿಇಟಿ: ಅಶ್ವತ್ಥನಾರಾಯಣ

ಕಳೆದ ಜೂ.18ರಂದೇ ರಾಜ್ಯದ ದ್ವಿತೀಯ ಪಿಯು ಫಲಿತಾಂಶ ಫಲಿತಾಂಶ ಪ್ರಕಟವಾಗಿದ್ದ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿಗಳ ಫಲಿತಾಂಶ ಆಧರಿಸಿ ಈಗಾಗಲೇ ಸಿಇಟಿ ರಾರ‍ಯಂಕ್‌ ಪಟ್ಟಿಸಿದ್ಧಪಡಿಸಲಾಗಿದೆ. ಇದೀಗ ಕೇಂದ್ರೀಯ ಪಠ್ಯಕ್ರಮದ ವಿದ್ಯಾರ್ಥಿಗಳ ರ‍್ಯಾಂಕ್‌ ಪಟ್ಟಿ ಸಿದ್ಧಪಡಿಸಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಜೂನ್‌ 16 ರಿಂದ 18ರವರೆಗೆ ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆ-ಸಿಇಟಿ) ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜು.17 ಕ್ಕೆ ಪ್ರಕಟಿಸುವುದಾಗಿ ಹೇಳಿತ್ತು. ಅದರಂತೆ ಫಲಿತಾಂಶ ಪ್ರಕಟಿಸಲು ಕೆಇಎ ಸಿದ್ಧವಿದ್ದರೂ ಸಿಬಿಎಸ್‌ಇ ಮತ್ತು ಐಸಿಎಸ್‌ಇ 12ನೇ ತರಗತಿ ಫಲಿತಾಂಶಗಳು ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿರಲಿಲ್ಲ.

ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟವಾಗಿರುವುದರಿಂದ ಸಿಇಟಿ ಫಲಿತಾಂಶ ನೀಡಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರ‍್ಯಾಂಕ್‌ ಲಿಸ್ಟ್‌ ತಯಾರಿ ನಡೆದಿದೆ. ಸಿದ್ಧತೆಗಳು ಪೂರ್ಣಗೊಂಡರೆ ಜು. 29 ಇಲ್ಲವೇ 30 ರಂದು ಫಲಿತಾಂಶ ಪ್ರಕಟಿಸುತ್ತೇವೆ ಅಂತ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌.ರಮ್ಯಾ ತಿಳಿಸಿದ್ದಾರೆ.