Asianet Suvarna News Asianet Suvarna News

ಮಂಗಳೂರು ಕಾಲೇಜಿನಲ್ಲಿ ಎಂಬಿಬಿಎಸ್‌ ಪ್ರವೇಶ ವಿವಾದ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳಿಗೆ ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

Mangaluru college MBBS Admission Controversy High Court Notice to Karnataka State Government gow
Author
First Published Sep 13, 2023, 12:02 PM IST

ಬೆಂಗಳೂರು (ಸೆ.13): ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳಿಗೆ ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸುವ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

2023-24ನೇ ಸಾಲಿನ ಎಂಬಿಬಿಎಸ್‌ ಕೋಸ್‌ರ್ಗೆ ತಾವು ಪಡೆದಿರುವ ಪ್ರವೇಶಾತಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ ಅಕ್ರಮವೆಂದು ಸಾರಿರುವ ಹಿನ್ನೆಲೆಯಲ್ಲಿ ತಮ್ಮ ಪ್ರವೇಶಾತಿಯನ್ನು ಬೇರೊಂದು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ವರ್ಗಾಯಿಸಬೇಕು. ಹಾಗೆಯೇ, ಇದೇ ಅಕ್ಟೋಬರ್‌ನಿಂದ ಆರಂಭವಾಗಲಿರುವ ಪರೀಕ್ಷೆ ಬರೆಯಲು ತಮಗೆ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಡಿ.ಎಸ್. ಧಾತ್ರಿ ಸೇರಿದಂತೆ ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿನ 99 ವಿದ್ಯಾರ್ಥಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್‌ ಅವರ ನೇತೃತ್ವದ ವಿಭಾಗೀಯ ಪೀಠ, ಪ್ರತಿವಾದಿಗಳಾದ ಕೇಂದ್ರ ಮತ್ತು ರಾಜ್ಯ ಸರ್ಕಾರ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆ.20ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ರಾಷ್ಟ್ರೀಯ ವೈದ್ಯಕೀಯ ಆಯೋಗವು ಜಿ.ಆರ್. ಮೆಡಿಕಲ್ ಕಾಲೇಜಿನಲ್ಲಿ ಸೂಕ್ತ ಮೂಲಭೂತ ಸೌಕರ್ಯವಿಲ್ಲ. ವೈದ್ಯಕಿಯ ಶಿಕ್ಷಣ ನೀಡಲು ಕಾನೂನು ಪ್ರಕಾರ ಕಾಲೇಜು ಅರ್ಹತೆ ಹೊಂದಿಲ್ಲ ಎಂದು ಹೇಳಿ ಕಾಲೇಜಿನ ವಿರುದ್ಧ ಕ್ರಮ ಕೈಗೊಂಡಿದೆ. ಆದರೆ, ಈ ವಿಚಾರದಲ್ಲಿ ಅರ್ಜಿದಾರರಾದ ವಿದ್ಯಾರ್ಥಿಗಳ ತಪ್ಪೇನೂ ಇಲ್ಲ, ಅವರೆಲ್ಲಾ ಮುಗ್ಧರು ಎಂದು ವಿವರಿಸಿದರು.

ಅಲ್ಲದೆ, ಬಹುತೇಕ ವಿದ್ಯಾರ್ಥಿಗಳು ಎರಡನೇ ಮಾಪಅಪ್ ಸುತ್ತಿನಲ್ಲಿ ಕಾಲೇಜಿನಲ್ಲಿ ಸೀಟು ಪಡೆದು ಪ್ರವೇಶ ಪಡೆದಿದ್ದಾರೆ. ಆ ಸೀಟುಗಳನ್ನು ಪುನಃ ವಾಪಸ್ ನೀಡಲಾಗದು. ಹಾಗಾಗಿ, ಪ್ರಕರಣದಲ್ಲಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ನೀಡಿರುವ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಕೆಇಎ ಹೊಣೆ ಹೊರಬೇಕು. ಆದೇ ರೀತಿ ಅರ್ಜಿದಾರ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮುಂದುವರಿಕೆಗೆ ಅನುಕೂಲವಾಗುವಂತೆ ಯಾವುದಾದರೂ ಸರ್ಕಾರಿ ಕಾಲೇಜಿನಲ್ಲಿ ಸೀಟುಗಳನ್ನು ಒದಗಿಸಿಕೊಡಲು ಮತ್ತು ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪರೀಕ್ಷೆಗೆ ಹಾಜರಾಗಲು ಅವರಿಗೆ ಅವಕಾಶ ನೀಡಲು ಸರ್ಕಾರ, ಕೆಇಎ ಮತ್ತು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಗೆ ಆದೇಶಿಸಬೇಕು ಎಂದು ಕೋರಿದರು.

Follow Us:
Download App:
  • android
  • ios