ನವದೆಹಲಿ (ಫೆ.12): ದೇಶಾದ್ಯಂತ ಹೊಸ ಕೊರೋನಾ ಪ್ರಕರಣಗಳು ಇಳಿಕೆಯಾಗುತ್ತಿರುವ ಬೆನ್ನಲ್ಲೇ, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ವ್ಯಾಪ್ತಿಯ ಶಾಲೆಗಳ 2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಏ.1ರಿಂದಲೇ ಆರಂಭಿಸಲು ತೀರ್ಮಾನಿಸಿದೆ. ಈ ಸಂಬಂಧ ಸಿಬಿಎಸ್‌ಇ ಗುರುವಾರ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಕೊರೋನಾದಿಂದಾಗಿ ಈ ಬಾರಿಯ ಶೈಕ್ಷಣಿಕ ವರ್ಷಾರಂಭ ವಿಳಂಬವಾಗುವ ಸಾಧ್ಯತೆ ಕ್ಷೀಣಿಸಿದೆ.

ಈ ಕುರಿತು ಶಾಲೆಗಳ ಪ್ರಾಂಶುಪಾಲರಿಗೆ ಪತ್ರ ರವಾನಿಸಿರುವ ಸಿಬಿಎಸ್‌ಇ ಮಂಡಳಿ ‘ಕೋವಿಡ್‌ ಪರಿಸ್ಥಿತಿ ಸುಧಾರಣೆಯಾಗಿರುವ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳಲ್ಲಿ ಶಾಲೆಗಳು ಪುನಾರಂಭವಾಗಿದೆ. ಉಳಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೂ ಶೀಘ್ರವೇ ಶಾಲೆಗಳು ಪುನಾರಂಭದ ಸಾಧ್ಯತೆ ಇದೆ. ಹೀಗಾಗಿ ಸಿಬಿಎಸ್‌ಇ ವ್ಯಾಪ್ತಿಯ ಶಾಲೆಗಳು ಕೂಡಾ ಮಕ್ಕಳ ಖುದ್ದು ಹಾಜರಾತಿಯನ್ನು ಒಳಗೊಂಡ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಪೂರ್ಣ ರೀತಿಯಲ್ಲಿ ಸಜ್ಜಾಗಬೇಕು. ರಾಜ್ಯಗಳ ಸೂಚನೆಯ ಒಳಪಟ್ಟು ಏ.1ರಿಂದಲೇ 2021-22ನೇ ಸಾಲಿನ ಶೈಕ್ಷಣಿಕ ವರ್ಷವನ್ನು ಆರಂಭಿಸುವುದು ಸೂಕ್ತ’ ಎಂದು ಮಾಹಿತಿ ನೀಡಿದೆ.

ವಿದ್ಯಾರ್ಥಿಗಳ ಶಾಲೆ ಶುಲ್ಕ: ಪೋಷಕರಿಗೆ ಬಿಗ್ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ ...

ಸಾಮಾನ್ಯವಾಗಿ ಸಿಬಿಎಸ್‌ಇ ಶೈಕ್ಷಣಿಕ ತರಗತಿಗಳು ಮಾಚ್‌ರ್‍ ಕೊನೆಯ ವಾರದಿಂದ ಆರಂಭವಾಗುತ್ತಿದ್ದವು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಈ ವರ್ಷ ಶಾಲೆಗಳ ಆರಂಭದ ದಿನಾಂಕ ಮುಂದೂಡಿಕೆಯಾಗಬಹುದು ಎಂಬ ನಿರೀಕ್ಷೆ ಇದ್ದವು. ಆದರೆ ಇದೀಗ ಸಾಮಾನ್ಯ ಸಮಯದಲ್ಲೇ ಶಾಲೆಗಳ ಪುನಾರಂಭಕ್ಕೆ ಸಿಬಿಎಸ್‌ಇ ಮುಂದಾಗಿದೆ.

ಇದೇ ವೇಳೆ 9 ಮತ್ತು 11ನೇ ತರಗತಿಗಳಿಗೆ ಪರೀಕ್ಷೆ ನಡೆಸುವ ಮೂಲಕ ಕಲಿಕೆಯ ಅಂತರವನ್ನು ಪತ್ತೆ ಮಾಡಿ ಅದಕ್ಕೆ ಪರಿಹಾರ ಒದಗಿಸಬೇಕು. ಬಳಿಕವಷ್ಟೇ ಕಟ್ಟುನಿಟ್ಟಾದ ಕೋವಿಡ್‌ ನಿಯಮಗಳ ಅನ್ವಯ ಈ ತರಗತಿಗಳಿಗೆ ಪರೀಕ್ಷೆ ಆಯೋಜಿಸಬೇಕು. ಈ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷ ಆರಂಭಕ್ಕೂ ಕಲಿಕೆಯ ಅಂತರ ಸರಿದೂಗಿಸಲು ಬ್ರಿಡ್ಜ್‌ ಕೋರ್ಸ್‌ (ಸೇತುಬಂಧ ತರಗತಿ)ವೊಂದನ್ನು ಆರಂಭಿಸಬೇಕು ಎಂದು ಸಲಹೆ ನೀಡಿದೆ.