ವಿದ್ಯಾರ್ಥಿಗಳ ಶಾಲೆ ಶುಲ್ಕ: ಪೋಷಕರಿಗೆ ಬಿಗ್ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್
ವಿದ್ಯಾರ್ಥಿಗಳ ಪೋಷಕರು ಹಾಗೂ ಖಾಸಗಿ ಶಾಲಾ ಆಡಳಿ ಮಂಡಳಿ ನಡುವೆ ಶುಲ್ಕ ಜಂಗಿ ಕುಸ್ತಿ ಮುಂದುವರೆದಿದೆ. ಇದರ ಮಧ್ಯೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ನೀಡಿದ್ದು, ಪೋಷಕರಿಗೆ ಹಿನ್ನಡೆಯಾಗಿದೆ.
ನವದೆಹಲಿ, (ಫೆ. 04): ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಇದೀಗ ಹಂತ-ಹಂತವಾಗಿ ಆರಂಭವಾಗುತ್ತಿವೆ. ಇದರ ನಡುವೆ ಶಾಲಾ ಶುಲ್ಕದ ವಿಚಾರವಾಗಿ ವಿದ್ಯಾರ್ಥಿಗಳ ಪೋಷಕರು ಹಾಗೂ ಖಾಸಗಿ ಶಾಲಾ ಆಡಳಿತ ಮಧ್ಯೆ ಗೊಂದಲ ಏರ್ಪಟ್ಟಿದೆ.
ಕೊರೋನಾ ವೈರಸ್‌ನಿಂದಾಗಿ ಶಾಲಾ ಆಡಳಿತ ಮಂಡಳಿಗಳು ಹಾಗೂ ವಿದ್ಯಾರ್ಥಿಗಳು ಪೋಷಕರು ಆದಾಯವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಆದಾಯವಿಲ್ಲದೆ ಮಕ್ಕಳ ಶಾಲಾ ಶುಲ್ಕ ಭರಿಸುವುದು ಹೇಗೆ ಎಂಬುದು ಪೋಷಕರ ಪ್ರಶ್ನೆ.
ಮತ್ತೊಂದೆಡೆ ಶುಲ್ಕ ಕಟ್ಟದಿದ್ದರೆ ನಾವು ಶಿಕ್ಷಕರಿಗೆ ವೇತನ ಕೊಡುವುದು ಹೇಗೆ? ಎನ್ನುವುದು ಶಾಲಾ ಆಡಳಿತ ಮಂಡಳಿಗಳ ಮಾತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಗ್ಗಾಜಗ್ಗಾಟ ನಡೆದಿದೆ. ಇದರ ಮಧ್ಯೆ ಶೇ. 100ರಷ್ಟು ಅಂದ್ರೆ ಫುಲ್ ಫೀ ಕಟ್ಟುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
ಖಾಸಗಿ ಶಾಲಾ ಶುಲ್ಕ ಕಡಿತ ಸಾಧ್ಯವಿಲ್ಲ; ಸರ್ಕಾರದ ಆದೇಶದ ವಿರುದ್ದ ಕ್ಯಾಮ್ಸ್ ಪತ್ರ!
ಶೇ.100ರಷ್ಟು ಶುಲ್ಕ ಪಾವತಿಸುವಂತೆ ಆರ್ಡರ್
ಹೌದು....2020-21ರ ಶೈಕ್ಷಣಿಕ ವರ್ಷದಲ್ಲಿ ಪೋಷಕರು ಶಾಲಾ ಶುಲ್ಕದ 100% ಪಾವತಿಸಬೇಕಾಗುತ್ತದೆ. ಇದು 2019-20ರ ಶೈಕ್ಷಣಿಕ ವರ್ಷಕ್ಕೂ ಅನ್ವಯ ಎಂದು ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದೆ.
ಈ ಹಿಂದೆ ರಾಜಸ್ಥಾನ ಸರ್ಕಾರ, ಪ್ರೌಢ ಶಿಕ್ಷಣ ಮಂಡಳಿಗೆ (ಆರ್‌ಬಿಎಸ್‌ಇ) ರಾಜ್ಯ ಮಂಡಳಿ ಅಂಗಸಂಸ್ಥೆ ಶಾಲೆಗಳಿಗೆ ಶೇ.60ರಷ್ಟು ಮತ್ತು ಕೇಂದ್ರೀಯ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮಾನ್ಯತೆ ಪಡೆದ ಶಾಲೆಗಳಿಗೆ ಶೇ.70% ಶುಲ್ಕವನ್ನು ವಿದ್ಯಾರ್ಥಿಗಳ ಪೋಷಕರಿಂದ ಪಡೆಯುವಂತೆ ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ರಾಜಸ್ಥಾನದ ವಿದ್ಯಾ ಭವನ ಸೊಸೈಟಿ, ಸವಾಯಿ ಮಾನ್ಸಿಂಗ್ ವಿದ್ಯಾಲಯ, ಗಾಂಧಿ ಸೇವಾ ಸದನ್ ಮತ್ತು ಸೊಸೈಟಿ ಆಫ್ ಕ್ಯಾಥೊಲಿಕ್ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಸಮಿತಿ, ಸುಪ್ರೀಂ ಕೋರ್ಟ್‌ಗೆ ಶುಲ್ಕ ನಿಯಂತ್ರಣ ಕಾಯ್ದೆ 2016 ಅನ್ನು ಪ್ರಶ್ನಿಸಿದ್ದವು. ಇದನ್ನ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಶೇ. 100ರಷ್ಟು ವಿದ್ಯಾರ್ಥಿಗಳ ಶಾಲೆ ಶುಲ್ಕ ಪಾವತಿಸಬೇಕೆಂದು ತಿಳಿಸಿದೆ. ಇದು ಪೋಷಕರಿಗೆ ಭಾರೀ ಆತಂಕಕ್ಕೆ ಕಾರಣವಾಗಿದೆ.
ಪೋಷಕರು ಮಾರ್ಚ್ 5-2021 ರಿಂದ ಶುಲ್ಕವನ್ನು ಪಾವತಿಸಬೇಕು. ಅದನ್ನು ಶಾಲಾ ಆಡಳಿತ ಮಂಡಳಿ 6 ಕಂತುಗಳಲ್ಲಿ ಕಟ್ಟಿಸಿಕೊಳ್ಳಬೇಕು. ಅಲ್ಲದೆ, ಶುಲ್ಕವನ್ನು ಪಾವತಿಸದ ಕಾರಣ ಯಾವುದೇ ಮಗುವಿನ ಹೆಸರನ್ನು ಶಾಲೆಯಿಂದ ಕೈಬಿಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಇನ್ನು 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳ ಶುಲ್ಕವನ್ನು ಪಾವತಿಸದಿದ್ದರೆ ಪರೀಕ್ಷೆಗೆ ನಿರಾಕರಿಸುವಂತಿಲ್ಲ ಎಂದು ಕೋರ್ಟ್ ತಿಳಿಸಿದೆ.