ಸಿಬಿಎಸ್ಇಯ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ವರ್ಗಾವಣೆ ಮಾಡಿದೆ. ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ವೈಫಲ್ಯಗಳ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

ನವದೆಹಲಿ (ಜೂ.2): ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ಇತ್ತೀಚೆಗೆ ಜಾರಿಗೆ ತಂದಿದ್ದ ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯಾದ 'ಆನ್-ಸ್ಕ್ರೀನ್ ಮಾರ್ಕಿಂಗ್' (OSM) ಪೋರ್ಟಲ್ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಭಾರಿ ಆಡಳಿತಾತ್ಮಕ ಕ್ರಮ ಕೈಗೊಂಡಿದೆ. ಮಂಡಳಿಯ ಇಬ್ಬರು ಉನ್ನತ ಅಧಿಕಾರಿಗಳಾದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದ್ದು, ಒಎಸ್ಎಂ ಸೇವೆಗಳ ಟೆಂಡರ್ ಪ್ರಕ್ರಿಯೆಯ ತನಿಖೆಗಾಗಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ. ಕಳೆದ ಕೆಲವು ವಾರಗಳಿಂದ ಸಿಬಿಎಸ್ಇ ಪರೀಕ್ಷಾ ಮೌಲ್ಯಮಾಪನ ಪ್ರಕ್ರಿಯೆ, ಆನ್‌ಲೈನ್ ಪೋರ್ಟಲ್‌ನಲ್ಲಿನ ತಾಂತ್ರಿಕ ದೋಷಗಳು ಮತ್ತು ಖಾಸಗಿ ವೆಂಡರ್ (Vendor) ಆಯ್ಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ದಿಢೀರ್ ಕ್ರಮಕ್ಕೆ ಮುಂದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಬಿಎಸ್ಇ ಇತಿಹಾಸದಲ್ಲೇ ಇಷ್ಟು ದೊಡ್ಡ ಮಟ್ಟದ ಶಿಸ್ತುಕ್ರಮ ಜರುಗಿಸಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಮಂಡಳಿಯ ಒಟ್ಟಾರೆ ಕಾರ್ಯನಿರ್ವಹಣೆ ಮತ್ತು ಪರೀಕ್ಷಾ ಸುಧಾರಣೆಗಳ ನೇತೃತ್ವ ವಹಿಸಿದ್ದ ಸಿಬಿಎಸ್ಇ ಅಧ್ಯಕ್ಷ ರಾಹುಲ್ ಸಿಂಗ್ (IAS) ಹಾಗೂ ಮಂಡಳಿಯ ಆಡಳಿತ, ಹಣಕಾಸು ಮತ್ತು ಸಂಯೋಜನೆಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕಾರ್ಯದರ್ಶಿ ಹಿಮಾಂಶು ಗುಪ್ತಾ (IAS) ಅವರನ್ನು ಕೇಂದ್ರ ಸರ್ಕಾರ ವರ್ಗಾವಣೆ ಮಾಡಿದೆ. ದೇಶದ ಅತ್ಯಂತ ದೊಡ್ಡ ಶಾಲಾ ಪರೀಕ್ಷಾ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಈ ಕಠಿಣ ನಿರ್ಧಾರ ಕೈಗೊಂಡಿದೆ.

ದೇಶಾದ್ಯಂತ ತಲ್ಲಣ ಮೂಡಿಸಿದ್ದ ಸಿಬಿಎಸ್ಇ ಡಿಜಿಟಲ್ ವ್ಯವಸ್ಥೆ

ಇತ್ತೀಚೆಗೆ ಸಿಬಿಎಸ್ಇ 10 ಮತ್ತು 12 ನೇ ತರಗತಿಯ ಫಲಿತಾಂಶಗಳು ಪ್ರಕಟವಾದ ನಂತರ ವಿದ್ಯಾರ್ಥಿಗಳು ತಮ್ಮ ಮೌಲ್ಯಮಾಪನಗೊಂಡ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಯನ್ನು ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಎಸ್ಎಂ (OSM) ಪೋರ್ಟಲ್‌ನಲ್ಲಿ ಉತ್ತರ ಪತ್ರಿಕೆಗಳನ್ನು ನೋಡುವಾಗ ಪುಟಗಳು ಮಸುಕಾಗಿರುವುದು (Blurred), ಪ್ರಮುಖ ವಿಭಾಗಗಳೇ ಕಾಣೆಯಾಗಿರುವುದು (Missing Sections) ಹಾಗೂ ಪೋರ್ಟಲ್ ಸಂಪೂರ್ಣವಾಗಿ ಕ್ರ್ಯಾಶ್ ಆಗಿರುವುದು ಬೆಳಕಿಗೆ ಬಂದಿತ್ತು. ಇದರಿಂದಾಗಿ ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ಈ ಡಿಜಿಟಲ್ ತಂತ್ರಜ್ಞಾನ ವ್ಯವಸ್ಥೆಯನ್ನು ಮಂಡಳಿಯು ಅತ್ಯಂತ ಆತುರವಾಗಿ ಮತ್ತು ಸೂಕ್ತ ಪರೀಕ್ಷೆಗಳನ್ನು ನಡೆಸದೇ ಜಾರಿಗೆ ತಂದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ, ಈ ಡಿಜಿಟಲ್ ಮೌಲ್ಯಮಾಪನ ಕಾಂಟ್ರಾಕ್ಟ್ ಅನ್ನು ಖಾಸಗಿ ವೆಂಡರ್‌ಗೆ ನೀಡಿದ ಟೆಂಡರ್ ಪ್ರಕ್ರಿಯೆ, ಸೈಬರ್ ಭದ್ರತೆಯ ದೋಷಗಳು ಹಾಗೂ ಮರು-ಮೌಲ್ಯಮಾಪನ (Re-evaluation) ಪ್ರಕ್ರಿಯೆಯಲ್ಲಿ ಉಂಟಾದ ಭಾರಿ ವಿಳಂಬದ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ವಿವಾದ ತಾರಕಕ್ಕೇರಿದಾಗ ಸಿಬಿಎಸ್ಇ ಮಂಡಳಿಯು ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿ, ಹಲವು ಸ್ಪಷ್ಟೀಕರಣಗಳನ್ನು ನೀಡಿತ್ತಲ್ಲದೆ, ವಿದ್ಯಾರ್ಥಿಗಳ ಪ್ರತಿ ದೂರನ್ನು ಪರಿಶೀಲಿಸುವುದಾಗಿ ಹೇಳಿತ್ತು. ಆದರೂ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ತಣ್ಣಗಾಗಿರಲಿಲ್ಲ.

ಉನ್ನತ ಮಟ್ಟದ ಸಮಿತಿಯಿಂದ ಸಮಗ್ರ ತನಿಖೆ

ಈ ಇಡೀ ವಿವಾದದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಎಸ್ಎಂ (OSM) ಸೇವೆಗಳ ಖರೀದಿ ಮತ್ತು ಗುತ್ತಿಗೆ ಪ್ರಕ್ರಿಯೆಯನ್ನು ಕೂಲಂಕಷವಾಗಿ ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸಿದೆ. ಈ ಸಮಿತಿಯು ಖಾಸಗಿ ಕಂಪನಿಗೆ ಡಿಜಿಟಲ್ ಮೌಲ್ಯಮಾಪನದ ಕಾಂಟ್ರಾಕ್ಟ್ ಅನ್ನು ನಿಯಮಾನುಸಾರ ನೀಡಲಾಗಿದೆಯೇ? ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲಾ ಅಧಿಕೃತ ನಿಯಮಗಳನ್ನು ಪಾಲಿಸಲಾಗಿದೆಯೇ? ಮತ್ತು ತಾಂತ್ರಿಕ ವೈಫಲ್ಯಕ್ಕೆ ಕಾರಣ ಯಾರು? ಎಂಬಿತ್ಯಾದಿ ಅಂಶಗಳ ಕುರಿತು ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.