ತಿಪ್ಪನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕ ಕನಕರೆಡ್ಡಿ ಮಾದಿನಾಳ ಅವರು ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿ, ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ತಮ್ಮ ಅವಧಿಯಲ್ಲಿ ಸ್ಮಾರ್ಟ್‌ಕ್ಲಾಸ್, ಕಂಪ್ಯೂಟರ್ ಶಿಕ್ಷಣದಂತಹ ಸೌಲಭ್ಯಗಳನ್ನು ಒದಗಿಸಿ, ಇದೀಗ ಸೇವೆಯಿಂದ ನಿವೃತ್ತರಾಗಿದ್ದಾರೆ.

ಎಂ. ಪ್ರಹ್ಲಾದ್ ಕನಕಗಿರಿ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಪ್ಪಳ: ಮುಖ್ಯ ಶಿಕ್ಷಕರೊಬ್ಬರು 33 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ, ತಿಂಗಳ ಹಿಂದೆ ಹಿರಿಯ ಮುಖ್ಯೋಪಾಧ್ಯಾಯರಾಗಿ ಬೇರೆ ಶಾಲೆಗೆ ವರ್ಗಾವಣೆಗೊಂಡು ಮೇ 30ರಂದು ನಿವೃತ್ತರಾಗಿದ್ದಾರೆ.

ಹೌದು, ತಾಲೂಕಿನ ತಿಪ್ಪನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕನಕರೆಡ್ಡಿ ಮಾದಿನಾಳ ಅವರು ತಿಂಗಳ ಹಿಂದೆ ಹಿರಿಯ ಮುಖ್ಯೋಪಾಧ್ಯಾಯರಾಗಿ ಮುಂಬಡ್ತಿ ಹೊಂದಿದ ಹಿನ್ನೆಲೆಯಲ್ಲಿ ಪಕ್ಕದ ಜೀರಾಳ ಗ್ರಾಮದ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡರು. ಒಂದೇ ತಿಂಗಳಲ್ಲಿ ನಿವೃತ್ತಿ ಹೊಂದಿದರು.

ಕನಕರೆಡ್ಡಿ ಅವರು 1993 ಜೂನ್ ತಿಂಗಳಲ್ಲಿ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದರು. ಅಂದು ಶಾಲೆ ವಾತಾವರಣ, ಕೊಠಡಿ, ನೋಡುವಂತಿರಲಿಲ್ಲ. ಕ್ರಮೇಣ ಗ್ರಾಮದ ಹಿರಿಯರ ಹಾಗೂ ಯುವಕರ ಜತೆ ಸಮನ್ವಯತೆ ಕಾಯ್ದುಕೊಂಡು ಕಲಿಕೆಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಮುಂದಾದರು. ಆನಂತರ 2015ಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿಕೊಂಡು ಗ್ರಾಮಸ್ಥರ, ಸರ್ಕಾರ ಮತ್ತು ಇಲಾಖೆಯ ಸಹಕಾರದಿಂದ ಹೊಸ ಕೊಠಡಿ ನಿರ್ಮಾಣ, ಬಿಸಿಯೂಟ, ಸಮತಟ್ಟಾದ ಮೈದಾನ ಸೇರಿ ನಾನಾ ಕಾರ್ಯ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸಿದರು.

ಪಾಠದ ಜೊತೆ ಶಾಲೆಯಲ್ಲಿ ಅಭಿವೃದ್ಧಿ ಕೆಲಸ

11 ವರ್ಷಗಳ ಮುಖ್ಯಶಿಕ್ಷಕರಾಗಿ ಸೇವೆಯಲ್ಲಿದ್ದಾಗ 6 ಮತ್ತು 7ನೇ ತರಗತಿ ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್, ಸೋಲಾರ್‌ ಕಂಪನಿಗಳ ಜತೆ ಮಾತುಕತೆ ನಡೆಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಕಾಂಪೌಂಡ್ ನಿರ್ಮಾಣ, ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿ ಶಾಲೆಗೆ ಬೇಕಾದ ಅಗತ್ಯ ಸಾಮಗ್ರಿ ಪಡೆದರು. ಸದ್ಯ ಶಾಲೆಯ 6 ಕಂಪ್ಯೂಟರ್‌ಗಳ ಮೂಲಕ ವಿದ್ಯಾರ್ಥಿಗಳಿಗೆ ಗಣಕಯಂತ್ರ ತರಬೇತಿ ನೀಡಲಾಗುತ್ತಿದೆ.

ತಾಲೂಕಿನಲ್ಲೆ ಹೆಚ್ಚು ಸರ್ಕಾರಿ ನೌಕರಿದಾರರನ್ನು ತಿಪ್ಪನಾಳ ಗ್ರಾಮ ಹೊಂದಿದೆ. ಬಡ, ಹಿಂದುಳಿದ ಮಕ್ಕಳು ಮುನ್ನಲೆಗೆ ತಂದು ನೌಕರರದಾರರನ್ನಾಗಿ ಮಾಡಲು ಮುಖ್ಯಶಿಕ್ಷಕ ಕನಕರೆಡ್ಡಿ ಪಾತ್ರ ದೊಡ್ಡದಿದೆ. ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿ ತಿಪ್ಪನಾಳ ಸರ್ಕಾರಿ ಶಾಲೆ ತಿರುಗಿ ನೋಡುವಂತೆ ಮಾಡಿರುವುದಕ್ಕೆ ಖುಷಿ ತಂದಿದೆ ಎಂದು ಹಿರಿಯ ಶಿಕ್ಷಕ ಶಿವಾನಂದ ಬೆಲ್ಲದ್ ತಿಳಿಸಿದ್ದಾರೆ.

ಮುಖ್ಯಶಿಕ್ಷಕ ಕನಕರೆಡ್ಡಿ ಭಾವುಕ ಮಾತು

ನಾನು ಮೂಲ ಕೃಷಿಕ. ಪಿಯುಸಿ ಮುಗಿಸಿದ್ದರಿಂದ ಶಿಕ್ಷಕ ವೃತ್ತಿಗೆ ಬಂದೆ. ಬಳಿಕ ಮಾವನವರಾದ ಹೇಮರೆಡ್ಡಿ ಶಿವನಗುಂಡಿ ಮಾರ್ಗದರ್ಶನದಲ್ಲಿ ತಿಪ್ಪನಾಳ ಶಾಲೆ ಆಯ್ಕೆ ಮಾಡಿಕೊಂಡು ಬಡ, ಹಿಂದುಳಿದ ಮಕ್ಕಳಿಗೆ ಓದು, ಬರಹ ಕಲಿಸಿದೆ. ಎಲ್ಲರೊಟ್ಟಿಗೆ ಬೆರೆತು ಶಾಲೆ ಅಭಿವೃದ್ಧಿಪಡಿಸಲು ಶ್ರಮಿಸಿದ್ದೇನೆ. ತಿಪ್ಪನಾಳ ಶಾಲೆಯಲ್ಲಿ 33 ವರ್ಷ ಹಿರಿಯ ಮುಖ್ಯೋಪಾಧ್ಯಾಯನಾಗಿ ಜೀರಾಳದಲ್ಲಿ 1 ತಿಂಗಳ ಸೇವೆ ಸಲ್ಲಿಸಿ ನಿವೃತ್ತನಾಗಿದ್ದೇನೆ ಎಂದು ನಿವೃತ್ತ ಮುಖ್ಯಶಿಕ್ಷಕ ಕನಕರೆಡ್ಡಿ ತಿಳಿಸಿದ್ದಾರೆ.