ನವದೆಹಲಿ (ಡಿ.11): ಕೊರೋನಾ ಹಿನ್ನೆಲೆಯಲ್ಲಿ 2021ರ ಕೇಂದ್ರೀಯ ಪಠ್ಯಕ್ರಮದ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಪ್ರತಿ ವರ್ಷದಂತೆ ಫೆಬ್ರವರಿ-ಮಾರ್ಚಲ್ಲೇ ನಡೆಸಲಾಗುತ್ತದೆ ಮತ್ತು ಇವು ಆಫ್‌ಲೈನ್‌ನಲ್ಲೇ ನಡೆಯುತ್ತವೆ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ. ಅದರೊಂದಿಗೆ, 2021ರ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಗಳು ಆನ್‌ಲೈನ್‌ನಲ್ಲಿ ನಡೆಯುತ್ತವೆ ಹಾಗೂ ಕಳೆದ ವರ್ಷದಂತೆ ಈ ವರ್ಷವೂ ಪರೀಕ್ಷೆ ತಡವಾಗುತ್ತದೆ ಎಂಬಿತ್ಯಾದಿ ವದಂತಿಗಳಿಗೆ ತೆರೆ ಎಳೆದಿದೆ.

ಈ ಕುರಿತು ಮಾಹಿತಿ ನೀಡಿರುವ ಸಿಬಿಎಸ್‌ಇ ಪರೀಕ್ಷೆಗಳ ನಿಯಂತ್ರಕ ಸನ್ಯಾಮ್‌ ಭಾರದ್ವಾಜ್‌, 2021ರ ಬೋರ್ಡ್‌ ಎಕ್ಸಾಮ್‌ಗಳು ಪ್ರತಿ ವರ್ಷದಂತೆ ಫೆಬ್ರವರಿ-ಮಾಚ್‌ರ್‍ ತಿಂಗಳಲ್ಲೇ ನಡೆಯಲಿವೆ. ಮತ್ತು ಇವುಗಳನ್ನು ಎಂದಿನಂತೆ ಆಫ್‌ಲೈನ್‌ನಲ್ಲೇ ನಡೆಸಲಾಗುತ್ತದೆ. ಕಳೆದ ಬಾರಿ ಕೊರೋನಾ ಕಾರಣಕ್ಕೆ ಕಡಿಮೆ ಅಂತರ ನೀಡಿ ತರಾತುರಿಯಲ್ಲಿ ಪರೀಕ್ಷೆ ನಡೆಸಿದಂತೆ ಈ ಬಾರಿ ಮಾಡದೆ ಪ್ರತಿಯೊಂದು ಪರೀಕ್ಷೆಗೂ ಸಾಕಷ್ಟುದಿನಗಳ ಅಂತರ ನೀಡಲಾಗುತ್ತದೆ.

ಸಿಇಟಿ 2ನೇ ಸುತ್ತಿನ ವೇಳಾಪಟ್ಟಿ ಪ್ರಕಟ ...

ಪ್ರಾಕ್ಟಿಕಲ್‌ ಪರೀಕ್ಷೆಗಳು ಕೂಡ ಎಂದಿನಂತೆ ನಡೆಯಲಿವೆ. ಅವುಗಳಿಗೆ ಸಿದ್ಧತೆ ಮಾಡಿಕೊಳ್ಳಲು ಶಾಲೆಗಳಿಗೆ 2 ತಿಂಗಳಿಗೂ ಹೆಚ್ಚು ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಜೆಇಇ ಮೇನ್‌, ನೀಟ್‌ ವಿಳಂಬ: ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ 2021ರ ಜೆಇಇ ಮೇನ್‌ ಪರೀಕ್ಷೆ ಹಾಗೂ ವೈದ್ಯಕೀಯ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸುವ ನೀಟ್‌ ಪರೀಕ್ಷೆ ಈ ವರ್ಷ ವಿಳಂಬವಾಗುವ ಸಾಧ್ಯತೆಯಿದೆ. ಆದರೆ ಯಾವುದೇ ಕಾರಣಕ್ಕೂ ಇವುಗಳನ್ನು ರದ್ದುಪಡಿಸುವುದಿಲ್ಲ. ನೀಟ್‌ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸುವ ಚಿಂತನೆ ನಡೆದಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ತಿಳಿಸಿದ್ದಾರೆ.