ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಮಾನ್ಯತೆಗಿದ್ದ ಮಿತಿ ರದ್ದು
ರಾಜ್ಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆ ಪ್ರಮಾಣ ತುಂಬಾ ಕಡಿಮೆ ಇದೆ. ಹೀಗಾಗಿ ಅಲಸಂಖ್ಯಾತ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.50 ರಷ್ಟು ಅಲ್ಪಸಂಖ್ಯಾತರು ಪ್ರವೇಶ ಪಡೆಯುವುದು ಕಷ್ಟ. ಈ ಕಾರಣಕ್ಕಾಗಿ ಆ ನಿಯಮ ಕೈಬಿಡಲಾಗಿದೆ.
ಬೆಂಗಳೂರು(ಡಿ.07): ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಪಡೆಯಲು ಕಾಲೇಜಿನ ಒಟ್ಟು ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಶೇ.50 ರಷ್ಟು ಅಲಸಂಖ್ಯಾತ ವಿದ್ಯಾರ್ಥಿಗಳು ಇರಬೇಕೆಂಬ ನಿಯಮವನ್ನು ರದ್ದುಪಡಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದೇ ವೇಳೆ ಕಾಲೇಜು ಆಡಳಿತ ಮಂಡಳಿಯಲ್ಲಿ 3ನೇ ಎರಡು ಭಾಗ ಅಲ್ಪಸಂಖ್ಯಾತರೇ ಸದಸ್ಯರಾಗಿರಬೇಕು ಎಂಬ ಷರತ್ತನ್ನು ಮುಂದುವರೆಸಲಾಗಿದೆ. ರಾಜ್ಯದಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಜೈನ್, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನಸಂಖ್ಯೆ ಪ್ರಮಾಣ ತುಂಬಾ ಕಡಿಮೆ ಇದೆ. ಹೀಗಾಗಿ ಅಲಸಂಖ್ಯಾತ ಸಮುದಾಯದವರು ನಡೆಸುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.50 ರಷ್ಟು ಅಲ್ಪಸಂಖ್ಯಾತರು ಪ್ರವೇಶ ಪಡೆಯುವುದು ಕಷ್ಟ. ಈ ಕಾರಣಕ್ಕಾಗಿ ಆ ನಿಯಮ ಕೈಬಿಡಲಾಗಿದೆ.
ಶಿಕ್ಷಣ ಗುಣಮಟ್ಟ ಸುಧಾರಣೆಗೆ 2,500 ಕೋಟಿ:
ಉನ್ನತ ಶಿಕ್ಷಣದ ಮಟ್ಟ ಸುಧಾರಿಸುವ ಸಲುವಾಗಿ ಸರ್ಕಾರಿ ಪದವಿ ಕಾಲೇಜುಗಳು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್, ವಿಶ್ವವಿದ್ಯಾಲಯಗಳ ಮೂಲ ಸೌಕರ್ಯ, ಕಲಿಕಾ ವಾತಾವರಣ ಸುಧಾರಣೆಗೆ 2,500 ಕೋಟಿ ರು. ವೆಚ್ಚದ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಜುಲೈ 2025 ರಿಂದ ಜೂನ್‌ವರೆಗೆ 4 ವರ್ಷಗಳಲ್ಲಿ 2500 ಕೋಟಿ ವೆಚ್ಚ ಮಾಡಲಾಗುವುದು. ಈ ಪೈಕಿ 750 ಕೋಟಿ ರು.ಹಣವನ್ನು ರಾಜ್ಯ ಸರ್ಕಾರದಿಂದ ಹಾಗೂ 1,750 ಕೋಟಿ ರು. ಅನ್ನು ವಿಶ್ವ ಬ್ಯಾಂಕ್ ನೆರವಿನಿಂದ ವೆಚ್ಚ ಮಾಡಲಾಗುವುದು. ಪಠ್ಯ ಕ್ರಮದ ಉನ್ನತೀಕರಣ, ಶಿಕ್ಷಕರ ತರಬೇತಿ, ಇಂಟರ್ನ್‌ಶಿಪ್ ಮತ್ತು ಡಿಜಿಟಲ್ ಅಪ್ರೆಂಟಿಶಿಪ್‌ಗಳ ಮೂಲಕ ಸುಧಾರಿತ ಹಾಗೂ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಉದ್ಯೋಗವಕಾಶ ಸೃಷ್ಟಿಸುವುದು ಕಾರ್ಯ ಕ್ರಮದ ಉದ್ದೇಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಎಸ್ಸಿ,ಎಸ್ಟಿ ಮಕ್ಕಳಿಗೆ ಮಂಚ:
ಕಲ್ಯಾಣ ಕರ್ನಾಟಕದ ಎಸ್.ಸಿ, ಎಸ್.ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರ್ಕಾರಿ ವಸತಿ ಶಾಲೆಗಳು ಮತ್ತು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಟೂ ಟಯರ್‌ಕಾಟ್ (ಮಂಚ), ಕಾಯರ್‌ಮ್ಯಾಟ್ರಸ್ (ತೆಂಗಿನ ನಾರಿನ ಹಾಸಿಗೆ) ಪೂರೈಸಲು ನಿರ್ಧರಿಸಲಾಗಿದೆ. ಜತೆಗೆ 2024-25ನೇ ಸಾಲಿನಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು 100 ರು. ಹೆಚ್ಚುವರಿ ವೆಚ್ಚ ಮಾಡಿ ಆರೋಗ್ಯ ಬಲವರ್ಧನೆಗೆ ಪ್ರೋಟೀನ್ ಪೌಡರ್, ಮೊಟ್ಟೆ ಮತ್ತು ಶೇಂಗಾ ಚಿಕ್ಕಿ ಖರೀದಿಸಲು ತೀರ್ಮಾನಿಸಲಾಗಿದೆ.
ಅಪರೂಪದ ಕಾಯಿಲೆ ಚಿಕಿತ್ಸೆಗೆ ಪರಿಶಿಷ್ಟರಿಗೆ ಕಾರ್ಪಸ್ ನಿಧಿ ಸ್ಥಾಪನೆ: ಸಂಪುಟ ನಿರ್ಧಾರ
ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಅಪರೂಪದ ಮತ್ತು ಹೆಚ್ಚಿನ ವೆಚ್ಚದ ತಗಲುವ ಆ ಕಾಯಿಲೆಗಳು • ಉಂಟಾದರೆ ಅದಕ್ಕೆ ಚಿಕಿತ್ಸೆ ನೀಡುವ ಸಲುವಾಗಿ 47 ಕೋಟಿ ರು. ಕಾರ್ಪಸ್ ನಿಧಿ ಸ್ಥಾಪಿಸಲು ಸಂಪುಟ ನಿರ್ಧರಿಸಿದೆ. 33 ವಿರಳ ಕಾಯಿಲೆಗಳಿಗೆ 17 ಚಿಕಿತ್ಸಾ ವಿಧಾನಗಳಿಗೆ ನಿಧಿಯಿಂದ ನೆರವು ನೀಡಲಾಗುವುದು. ಆಯುಷ್ಮಾನ್ ಭಾರತ್, ಜೀವ ಸಾರ್ಥಕತೆ ಇತ್ಯಾದಿ ಯೋಜನೆಗಳಲ್ಲಿ ದೊರೆಯುತ್ತಿದ್ದ ಚಿಕಿತ್ಸಾ ಸೇವೆ ಕೈಬಿಟ್ಟು 17 ಚಿಕಿತ್ಸೆಗಳಿಗೆ ಪ್ರತ್ಯೇಕ ನಿಧಿ ಸ್ಥಾಪಿಸಿ ತ್ವರಿತಗತಿಯಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಲು ತೀರ್ಮಾನಿಸಲಾಗಿದೆ.
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಮಾನ್ಯತೆಗೆ ಷರತ್ತು ಸಡಿಲ ಸಾಧ್ಯತೆ ಇದೆ ಎಂದು ನ.14ರಂದೇ ಕನ್ನಡಪ್ರಭ ವರದಿ ಮಾಡಿತ್ತು.