Raita Ratna : ಅಡಕೆ ಮಾರಿ ಶಾಲೆ ಮಕ್ಕಳಿಗೆ ಬಸ್ ಖರೀದಿ!
- ಅಡಕೆ ಮಾರಿ ಶಾಲೆ ಮಕ್ಕಳಿಗೆ ಬಸ್ ಖರೀದಿ!
- -ಕನ್ನಡಪ್ರಭ-ಸುವರ್ಣ ನ್ಯೂಸ್‌ನ ‘ರೈತ ರತ್ನ’ ಬಂಟ್ವಾಳದ ಶಾಲೆಯ ಯಶೋಗಾಥೆ
- ಸರ್ಕಾರಿ ಶಾಲೆಗೆ ಸೇರಿದ ಜಮೀನಲ್ಲಿ ಅಡಕೆ ಕೃಷಿ. ಈ ಅಡಕೆಯಿಂದ ಬಂದ ಹಣ ಶಾಲೆ ಅಭಿವೃದ್ಧಿಗೆ
ಮಂಗಳೂರು (ಸೆ.14) : ಶಾಲಾ ಅಡಕೆ ತೋಟದ ಫಸಲು ಮಾರಾಟ ಮಾಡಿ ಬಂದ ಮೊತ್ತದಲ್ಲಿ ಮಕ್ಕಳನ್ನು ಕರೆತರಲು ಬಸ್ ಖರೀದಿಸುವ ಮೂಲಕ ಬಂಟ್ವಾಳದ ಮಿತ್ತೂರಿನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ(ಎಸ್‌ಡಿಎಂಸಿ) ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ನರೇಗಾದ ಅಡಿ ತೋಟಗಾರಿಕೆ ಬೆಳೆದ ಅಡಿಕೆ ಮಾರಾಟ ಮಾಡಿ ಬಸ್ ಖರೀದಿಸಿದ ಶಾಲೆ ಇದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Raita Ratna Award 2022: ಸಾವಯವ ಕೃಷಿ ಸಾಧಕಿ ಟ್ರ್ಯಾಕ್ಟರ್ ಮಹದೇವಕ್ಕ
ಕಳೆದ ವಾರ ಶಾಲಾ ಬಸ್ ಸಂಚಾರಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಕಳೆದ ಸಾಲಿನಲ್ಲಿ ಕನ್ನಡಪ್ರಭÜ-ಏಷ್ಯಾನೆಟ್ ಸುವರ್ಣ ನ್ಯೂಸ್ ನೀಡಿದ ಮಾದರಿ ಕೃಷಿಗೆ ಇದೇ ಶಾಲೆಗೆ ‘ರೈತ ರತ್ನ’ ಪ್ರಶಸ್ತಿ ಲಭಿಸಿರುವುದು ಗಮನಾರ್ಹ.
ಅಡಕೆ ಕಾರುಬಾರು: 4.15 ಎಕರೆ ಜಮೀನು ಹೊಂದಿರುವ ಈ ಶಾಲೆಯಲ್ಲಿ ಒಂದು ಎಕರೆಯನ್ನು ಕೃಷಿಗೆ ಮೀಸಲಿರಿಸಲಾಗಿದೆ. ಇದರಲ್ಲಿ 2017ರಿಂದ ಅಡಕೆ ಬೆಳೆಯಲಾಗುತ್ತಿದ್ದು, ಪ್ರಸಕ್ತ 628 ಅಡಕೆ ಮರಗಳಿವೆ. ಕಳೆದ ವರ್ಷ 6 ಕ್ವಿಂಟಾಲ್ ಅಡಕೆ ಫಸಲು ಲಭಿಸಿದ್ದು, .2.65 ಲಕ್ಷ ಆದಾಯ ಶಾಲೆಯ ಕೈಸೇರಿತ್ತು. ಈ ಬಾರಿ ದುಪ್ಪಟ್ಟು ಬೆಳೆ ಹಾಗೂ ಆದಾಯ ನಿರೀಕ್ಷಿಸಲಾಗಿದೆ. ಎಸ್‌ಡಿಎಂಸಿ ಸದಸ್ಯರೊಬ್ಬರು ಕೈಯಿಂದ ಅರ್ಧದಷ್ಟುಮೊತ್ತವನ್ನು ಮುಂಗಡವಾಗಿ ನೀಡಿದ್ದು, ಕಳೆದ ಅವಧಿಯ ಅಡಕೆ ಫಸಲಿನ ಮಾರಾಟ ಮೊತ್ತ ಸೇರಿಸಿ ಒಟ್ಟು 5.20 ಲಕ್ಷ ರು. ನೀಡಿ ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸಲಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) 2016ರಲ್ಲಿ13 ಸಾವಿರ ರೂ. ವೆಚ್ಚದಲ್ಲಿ ಸ್ಥಳೀಯ ನರ್ಸರಿಯಿಂದ 628 ಊರಿನ ತಳಿಯ ಅಡಿಕೆ ಸಸಿ ತಂದು ನೆಟ್ಟಿದ್ದು, ಇದರ ಗುಂಡಿ ತೆಗೆದು, ಗಿಡ ನೆಡುವ ಕಾಮಗಾರಿಗೆ ನರೇಗಾ ಯೋಜನೆಯಡಿ 99743.17 ರೂ. ಕೂಲಿ ಪಾವತಿಯಾಗಿದೆ.
ಬಸ್ ಖರೀದಿ ಯಾಕಾಗಿ?: ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿರುವ ಮಿತ್ತೂರು ಶಾಲೆ ಗುಡ್ಡಗಾಡಿನಲ್ಲಿದೆ. ಇದುವರೆಗೆ ಎರಡು ಆಟೋಗಳಲ್ಲಿ ಶಾಲಾ ಮಕ್ಕಳನ್ನು ಕರೆ ತರಲಾಗುತ್ತಿತ್ತು. ಆಟೋ ಬಾಡಿಗೆಯನ್ನು ದಾನಿಯೊಬ್ಬರು ಭರಿಸುತ್ತಿದ್ದರು. ಮಳೆಗಾಲದಲ್ಲಿ ಆಟೋದಲ್ಲಿ ಮಕ್ಕಳಿಗೆ ಸಂಚರಿಸುವುದು ಕಷ್ಟವಾಗುತ್ತಿತ್ತು. ಎರಡ್ಮೂರು ಟ್ರಿಪ್ ಮಾಡಬೇಕಾಗುತ್ತಿತ್ತು.
Raita Ratna 2022: ಯುವಕರಿಗೆ ಕೃಷಿಯ ದಾರಿ ತೋರಿದ ಗಣೇಶ್ ಖಾರ್ವಿ
ದಿನಕ್ಕೆ ಎರಡು ಟ್ರಿಪ್:
ಮಿತ್ತೂರಿನ ಈ ಶಾಲೆಯಲ್ಲಿ ಒಟ್ಟು 118 ಮಕ್ಕಳಿದ್ದು, ಸುಮಾರು 50-60 ಮಕ್ಕಳು ಶಾಲಾ ಬಸ್‌ನ್ನು ಆಶ್ರಯಿಸಿದ್ದಾರೆ. 26 ಸೀಟುಗಳ ಈ ಬಸ್ ಈಗ ದಿನಕ್ಕೆ ಎರಡು ಟ್ರಿಪ್ ಮಾಡುತ್ತಿದೆ. ಈ ಹಿಂದೆ ಆಟೋ ಓಡಿಸುತ್ತಿದ್ದ ಚಾಲಕನೇ ಈ ಬಸ್‌ನ್ನು ಓಡಿಸುತ್ತಿದ್ದಾರೆ. ಸದ್ಯ ಶಾಲಾ ಬಸ್‌ನ ಡೀಸೆಲ್ ವೆಚ್ಚ ಹಾಗೂ ಚಾಲಕನ ವೇತನವನ್ನು ಸದ್ಯ ಎಸ್‌ಡಿಎಂಸಿ ಸದಸ್ಯರೇ ಭರಿಸುತ್ತಿದ್ದಾರೆ.
ಮತ್ತೆ ಗಿಡ ನೆಡುವ ಯೋಜನೆ: ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದ್ದು 6 ಮಕ್ಕಳು ಕಲಿಯುತ್ತಿದ್ದಾರೆ. ಮುಂದೆ 1 ಮತ್ತು 2ನೇ ತರಗತಿ ಆಂಗ್ಲ ಮಾಧ್ಯಮ ಆರಂಭಿಸುವ ಬಗ್ಗೆ ಯೋಜನೆ ಇದ್ದು, ಹಾಗಾಗಿ ಅಡಿಕೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಶಾಲೆಯ ಹಿಂಭಾಗದಲ್ಲಿರುವ ಉಳಿದ 1.50 ಎಕರೆ ಭೂಮಿಯಲ್ಲಿ ನರೇಗಾ ಯೋಜನೆಯ ಮೂಲಕ 600 ಅಡಿಕೆ ಸಸಿ ನೆಡುವ ಯೋಜನೆಯನ್ನು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ಹಾಕಿಕೊಂಡಿದ್ದು, ಈಗಾಗಲೇ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಕಾಮಗಾರಿ ಆರಂಭಿಸುವ ಉದ್ದೇಶವಿದೆ.