Asianet Suvarna News Asianet Suvarna News

Raita Ratna 2022: ಯುವಕರಿಗೆ ಕೃಷಿಯ ದಾರಿ ತೋರಿದ ಗಣೇಶ್‌ ಖಾರ್ವಿ

ಕನ್ನಡಪ್ರಭ-ಸುವರ್ಣನ್ಯೂಸ್‌ ಪ್ರದಾನ ಮಾಡುವ ರೈತರತ್ನ 2022 ಪ್ರಶಸ್ತಿ ಉಡುಪಿಯ ಪಂಜರ ಮೀನು ಕೃಷಿಕ ಗಣೇಶ್‌ ಖಾರ್ವಿ ಅವರಿಗೆ ಸಂದಿದೆ. ಸಾಧಕ ರೈತರಿಗೆ ಗೌರವ ಸಮರ್ಪಣೆ.

Raita Ratna Award 2022 Young Farmer category winner Ganesh Kharvi from Udupi vcs
Author
Mangalore, First Published Apr 19, 2022, 10:28 AM IST

ಸುಭಾಶ್ಚಂದ್ರ ವಾಗ್ಳೆ

ಕೇವಲ ಹೈಸ್ಕೂಲು ಶಿಕ್ಷಣ ಪಡೆದಿರುವ, ಉಡುಪಿ ಜಿಲ್ಲೆಯ ಉಪ್ಪುಂದ ಗ್ರಾಮದ 30ರ ಗಣೇಶ್‌ ಖಾರ್ವಿ ಪಂಜರ ಮೀನು ಕೃಷಿ ಎಂಬ ವಿಶಿಷ್ಟಉದ್ಯಮದಲ್ಲಿ ತಾನು ಯಶಸ್ವಿಯಾಗಿರುವುದು ಮಾತ್ರವಲ್ಲವೇ, ತನ್ನಂತಹ ನೂರಾರು ಮಂದಿ ಯುವಕರು ಈ ಕೃಷಿಗೆ ಇಳಿಯುವಂತೆ ಮಾಡಿ, ಅವರ ಜೀವನಕ್ಕೆ ದಾರಿ ತೋರಿಸಿದ್ದಾರೆ.

ತನ್ನ 18ನೇ ವರ್ಷಕ್ಕೆ ಮೀನು ಕೃಷಿಗೆ ಇಳಿದ ಗಣೇಶ್‌ ಅವರು ಬೆಳೆಸುವ ಮೀನಿಗೆ ಇಂದು ನಮ್ಮ ರಾಜ್ಯದಲ್ಲಿ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರದಿಂದಲೂ ಬೇಡಿಕೆ ಇದೆ. ಈ ಕೃಷಿಯಲ್ಲಿ ಅವರೀಗ ತಜ್ಞರು, ತರಬೇತುದಾರರು, ಸಂಪನ್ಮೂಲ ವ್ಯಕ್ತಿಯೂ, ಪೂರೈಕೆದಾರರೂ ಆಗಿದ್ದಾರೆ.

ಮೀನು ಸಾಕುವುದು ಒಂದು ಕೃಷಿ ಎಂದು ಗುರುತಿಸಿ, ನನಗೆ ರೈತರತ್ನ ಪ್ರಶಸ್ತಿ ನೀಡಿದ್ದು, ನನ್ನ ಕೃಷಿಗೆ ಸಿಕ್ಕಿದ ಗೌರವ ಎಂದು ಭಾವಿಸುತ್ತೇನೆ. ನನ್ನನ್ನು ಗುರುತಿಸಿದ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ ವಾಹಿನಿಯಿಂದಾಗಿ ನಾನು ರಾಜ್ಯ ಮಟ್ಟದಲ್ಲಿ ಹೆಸರು ಪಡೆಯುವಂತಾಯಿತು.-- ಗಣೇಶ್‌ ಖಾರ್ವಿ, ರೈತರತ್ನ ಪ್ರಶಸ್ತಿ ಪುರಸ್ಕೃತರು

ಉಪ್ಪಂದ ಗ್ರಾಮದ ಎಡಮಾವಿನಹೊಳೆ ಗಣೇಶ್‌ ಅವರ ಪ್ರಯೋಗಶಾಲೆ ಇದ್ದಂತೆ, ಕಬ್ಬಿಣದ ಪಂಜರವನ್ನು ನಿರ್ಮಿಸಿ ಅದನ್ನು ಹೊಳೆಯಲ್ಲಿ ಮೇಲ್ಭಾಗ ಮಾತ್ರ ಹೊರಗೆ ಕಾಣುವಂತೆ ಕಟ್ಟಿ, ಅದರೊಳಗೆ ಮೀನು ಮರಿಗಳನ್ನು ಬಿಟ್ಟು, ಅವುಗಳಿಗೆ ಪ್ರತಿದಿನ ಆಹಾರ ಹಾಕಿ, ಅವುಗಳನ್ನು 1ರಿಂದ 2 ವರ್ಷದವರೆಗೆ ಸಾಕಿ, ನಂತರ ಅವುಗಳನ್ನು ಹಿಡಿದು ಮಾರಾಟ ಮಾಡುವುದೇ ಪಂಜರ ಮೀನು ಕೃಷಿ.

12 ವರ್ಷಗಳ ಹಿಂದೆ ಮಂಗಳೂರಿನ ಸಂಟ್ರಲ್‌ ಮರೇನ್‌ ಫಿಶರೀಸ್‌ ರಿಸಚ್‌ರ್‍ ಇನ್‌ಸ್ಟಿಟ್ಯೂಟ್‌ನ ಪ್ರೋತ್ಸಾಹದಿಂದ 1 ಪಂಜರದಲ್ಲಿ ಮೀನು ಕೃಷಿ ಆರಂಭಿಸಿದ ಗಣೇಶ್‌, ಇಂದು ಸ್ವಂತ ಬಂಡವಾಳ ಹಾಕಿ 7 ಪಂಜರಗಳನ್ನು ನಿರ್ಮಿಸಿ, ಅವುಗಳಲ್ಲಿ ಕುರಡಿ (ಸೀಬಾಸ್‌) ಎಂಬ ತಳಿಯ ಮೀನು ಸಾಕುತ್ತಿದ್ದಾರೆ.

Raita Ratna Award 2022: ಬ್ಲಾನಿ ಡಿಸೋಜರ ಟೆರೇಸ್‌ನಲ್ಲಿದೆ ಕೃಷಿಯ ಅದ್ಭುತ ಲೋಕ!

ಸಮುದ್ರ ಪಕ್ಕದ ಈ ಪ್ರದೇಶದ ನದಿಯಲ್ಲಿ ಸಮುದ್ರದ ಉಪ್ಪುನೀರು ಕೂಡ ಸೇರುವುದರಿಂದ ಈ ಮೀನನ್ನು ಉಪ್ಪುನೀರು ಮತ್ತು ಸಿಹಿ ನೀರುಗಳೆರಡರಲ್ಲೂ ಸಾಕಬಹುದು ಎಂಬುದನ್ನು ಗಣೇಶ್‌ ಸಾಧಿಸಿ ತೋರಿಸಿದ್ದಾರೆ. ಒಂದು ಪಂಜರಕ್ಕೆ 1000ದಷ್ಟುಮೀನಿನ ಮರಿಗಳನ್ನು ಹಾಕುತ್ತಾರೆ. ಅವು ಮಾಂಸಹಾರಿ ಮೀನುಗಳೂ ಆಗಿರುವುದರಿಂದ, ಅವುಗಳಲ್ಲಿ ಕೆಲವು ಚಿಕ್ಕ ಮರಿಗಳು ದೊಡ್ಡ ಮರಿಮೀನುಗಳಿಗೆ ಆಹಾರವಾಗುತ್ತದೆ. ಕೊನೆಗೆ 700 - 800 ಮೀನುಗಳು ಉಳಿಯುತ್ತವೆ.

ಅವುಗಳಿಗೆ ಬೇರೆ ಮೀನಿನ ತ್ಯಾಜ್ಯ, ಮಾಂಸದ ತ್ಯಾಜ್ಯ ಇತ್ಯಾದಿಗಳನ್ನು ಹಾಕಿ ಸಾಕಲಾಗುತ್ತದೆ. 1 ವರ್ಷದಲ್ಲಿ ಅವು ಸುಮಾರು 2 ಕೆಜಿ, 2 ವರ್ಷಗಳಲ್ಲಿ 4- 5 ಕೆಜಿವರೆಗೆ ಬೆಳೆಯುತ್ತವೆ. ನಡುವೆ ಬೇಡಿಕೆಯಂತೆ ಅವುಗಳ ಕೊಯ್ಲು ಮಾಡುತ್ತಾರೆ.

ಪ್ರಸ್ತುತ ಗಣೇಶ್‌ ಅವರು ಮೀನನ್ನು ಕೆಜಿಗೆ 450 ರು.ಗಳಂತೆ ಮಾರಾಟ ಮಾಡುತ್ತಿದ್ದಾರೆ. ಗಣೇಶ್‌ ಅವರು ಸಾಕುವ ಮೀನಿನ ತೂಕ ಮತ್ತು ಗಾತ್ರಗಳೆರಡೂ ಉತ್ತಮವಾಗಿರುವುದರಿಂದ ಗೋವಾದಿಂದ ಸ್ವತಃ ಮೀನು ಸಂಸ್ಕರಣಾ ಉದ್ಯಮಿಗಳು ಹುಡುಕಿಕೊಂಡು ಬಂದು ಸಗಟಾಗಿ ಮೀನು ಖರೀದಿಸುತ್ತಿದ್ದಾರೆ. ಎಲ್ಲಾ ಖರ್ಚು ಕಳೆದು ವರ್ಷಕ್ಕೆ ಒಂದು ಪಂಜರದಿಂದ 1.50 - 2 ಲಕ್ಷ ರು.ಗಳಷ್ಟುನಿವ್ವಳ ಲಾಭ ಗಳಿಸುತ್ತಿದ್ದಾರೆ. ಈ 7 ಪಂಜರಗಳ ನಿರ್ವಹಣೆಗೆಂದು ಗಣೇಶ್‌ ಬೇರೆ ಕಾರ್ಮಿಕರನ್ನಿಟ್ಟುಕೊಂಡಿಲ್ಲ. ತಾವೇ ನಿರ್ವಹಣೆ ಮಾಡುತ್ತಾರೆ.

Raita Ratna Award 2022: ರೈತರಿಗಾಗಿ ಕೃಷಿ ಯಂತ್ರೋಪಕರಣ ನಿರ್ಮಿಸುವ ಎನ್‌.ಕೆ. ಆಕಾಶ್‌

12 ವರ್ಷಗಳ ಹಿಂದೆ ಗಣೇಶ್‌ ಅವರು ಈ ಪ್ರಯೋಗಕ್ಕಿಳಿದಾಗ ಅಲ್ಲೊಬ್ಬರು ಇಲ್ಲೊಬ್ಬರು ಪಂಜರ ಮೀನು ಕೃಷಿ ಮಾಡುತಿದ್ದರು. ಇಂದು ಮಂಗಳೂರಿನಿಂದ ಕಾರವಾರದವರೆಗೆ 7000ಕ್ಕೂ ಹೆಚ್ಚು ಮಂದಿ ಪಂಜರ ಮೀನು ಕೃಷಿ ಮಾಡುತಿದ್ದಾರೆ. ಪ್ರತಿದಿನವೂ ಗಣೇಶ್‌ ಅವರಿಗೆ ಕರೆ ಮಾಡಿ ಮೀನು ಸಾಕಣೆಯ ಸಲಹೆಗಳನ್ನು ಪಡೆಯುತ್ತಾರೆ. ಪ್ರತಿವರ್ಷ ನೂರಾರು ಮಂದಿ ಯುವಕರು ಬಂದು ಮಾಹಿತಿ ಪಡೆದುಕೊಂಡು ಹೋಗುತ್ತಾರೆ. ಅವರೆಲ್ಲರೂ ಇಂದು ಪಂಜರ ಮೀನು ಕೃಷಿ ಮಾಡಿ ಬದುಕುತಿದ್ದಾರೆ ಎಂಬುದೇ ತನಗೆ ಖುಷಿ ಕೊಡುತ್ತದೆ ಎನ್ನುತ್ತಾರೆ ಗಣೇಶ್‌.

ಇಂದು ಕರಾವಳಿಯಲ್ಲಿ ಪಂಜರ ಮೀನು ಕೃಷಿ ಮಾಡುವವರಲ್ಲಿ ಮುಕ್ಕಾಲು ಪಾಲು ಮಂದಿಗೆ ಮೀನು ಮರಿಗಳನ್ನು ಪೂರೈಕೆ ಮಾಡುವುದು ಗಣೇಶ್‌. ಅದರಲ್ಲಿಯೂ ಅವರ ಗಳಿಕೆ ಇದೆ. ಜೊತೆಗೆ ಕಬ್ಬಿಣದ ಪಂಜರಗಳನ್ನು ನಿರ್ಮಿಸಿಯೂ ಪೂರೈಕೆ ಮಾಡುತ್ತಾರೆ. ಸಾಕುವುದಕ್ಕೆ ಅಗತ್ಯವಾದ ಮಾಹಿತಿ, ತರಬೇತಿಯನ್ನೂ ನೀಡುತ್ತಾರೆ. ಮೀನುಗಾರಿಕಾ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ಇಂದು ಗಣೇಶ್‌ ಅವರಲ್ಲಿ ಕಾರ್ಯಾಗಾರ, ಕ್ಷೇತ್ರೋತ್ಸವ, ಕೊಯ್ಲು ಮೇಳ ಇತ್ಯಾದಿಗಳನ್ನು ನಡೆಸುತಿದ್ದಾರೆ.

"

 

Follow Us:
Download App:
  • android
  • ios