ಮಾ.27ರಿಂದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ: ಹೈಕೋರ್ಟ್ ಆದೇಶದಲ್ಲಿ ಖುಷಿ ವಿಚಾರವೂ ಇದೆ
ರಾಜ್ಯದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸುವುದಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸರ್ಕಾರದ ತೀರ್ಮಾನದಂತೆ ವಿದ್ಯಾರ್ಥಿಗಳಿಗೆ ಮಾ.27ರಿಂದ ಬೋರ್ಡ್ ಪರೀಕ್ಷೆ ನಡೆಸಲಾಗುತ್ತದೆ.
ಬೆಂಗಳೂರು (ಮಾ.15): ರಾಜ್ಯದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸುವುದಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಿಂದ ಗ್ರೀನ್ ಸಿಗ್ನಲ್ ನೀಡಲಾಗಿದೆ. ಸರ್ಕಾರದ ತೀರ್ಮಾನದಂತೆ ವಿದ್ಯಾರ್ಥಿಗಳಿಗೆ ಮಾ.27ರಿಂದ ಬೋರ್ಡ್ ಪರೀಕ್ಷೆ ನಡೆಸಲಾಗುತ್ತದೆ.
ಸರ್ಕಾರದಿಂದ ಬೋರ್ಡ್ ಪರೀಕ್ಷೆಯನ್ನು ನಡೆಸಲು ರಾಜ್ಯ ಶಿಕ್ಷಣ ಇಲಾಖೆ ತೀರ್ಮಾನ ಕೈಗೊಂಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಮಕ್ಕಳಿಗೆ ಬೋರ್ಡ್ ಪರೀಕ್ಷೆಯಿಂದ ಹೊರೆಯಾಗಲಿದ್ದು, ರದ್ದುಗೊಳಿಸುವಂತೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಿದ್ದರು. ಇದನ್ನು ವಿಚಾರನೆ ನಡೆಸಿದ್ದ ಹೈಕೋರ್ಟ್ ಏಕಸದಸ್ಯ ಪೀಠವು ಬೋರ್ಡ್ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಈ ಆದೇಶದ ವಿರುದ್ಧ ಸರ್ಕಾರ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಈ ಅರ್ಜಿ ಕುರಿತು ಇಂದು ವಿಚಾರಣೆ ಮಾಡಿದ ಹೈಕೋರ್ಟ್ ವಿಭಾಗೀಯ ಪೀಠವು 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸುವುದಕ್ಕೆ ಅನುಮತಿಯನ್ನು ನೀಡಿದೆ. ಈ ಮೂಲಕ ಸರ್ಕಾರದ ತೀರ್ಮಾನಕ್ಕೆ ಜಯ ಸಿಕ್ಕಂತಾಗಿದೆ.
5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆಯಲ್ಲಿ ಎಲ್ರೂ ಪಾಸ್: ಹೈಕೋರ್ಟ್‌ನಲ್ಲಿ ಸರ್ಕಾರ ವಾದ
ವಿದ್ಯಾರ್ಥಿಗಳನ್ನ ಫೇಲ್ ಮಾಡುವಂತಿಲ್ಲ: ರಾಜ್ಯದಾದ್ಯಂತ ಎರಡೂ ತರಗತಿಗಳಿಗೆ ಬೋರ್ಡ್ ಪರೀಕ್ಷೆಯನ್ನು ನಡೆಸಲು ಹೈಕೋರ್ಟ್ ಅನುಮತಿಯನ್ನು ನೀಡಿದೆ. ಆದರೆ, ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಂತಸ ಆಗುವಂತಹ ಒಂದು ವಿಚಾರವೂ ಕೂಡ ಇದರಲ್ಲಿದೆ. ಮಾ.27ರಿಂದ ಪರೀಕ್ಷೆಯನ್ನು ನಡೆಸಬೇಕು. ಕೂಡಲೇ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಎಂದು ಸೂಚನೆ ನೀಡಿದೆ. ಜೊತೆಗೆ, ಪರೀಕ್ಷೆ ಬರೆದ ಯಾವುದೇ ವಿದ್ಯಾರ್ಥಿಗಳನ್ನು ಅನುತ್ತೀರ್ಣ (ಫೇಲ್) ಮಾಡಬಾರದು ಎಂದು ಶಿಕ್ಷಣ ಇಲಾಖೆಗೆ ನಿರ್ದೇಶನವನ್ನು ನೀಡಿದೆ.
ಮಾ.13ರಿಂದ ಆರಂಭವಾಗಬೇಕಿದ್ದ ಪರೀಕ್ಷೆ: ಸರ್ಕಾರದ ಆದೇಶದಂತೆ ಈಗಾಗಲೇ ಮಾ.13ರಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಆರಂಭಿಸಬೇಕಿತ್ತು. ಆದರೆ, ಪರೀಕ್ಷೆ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ 5ನೇ ಮತ್ತು 8ನೇ ತರಗತಿಗಳಿಗೆ ಮಾತ್ರ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಉಳಿದಂತೆ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೂ ಸೋಮವಾರದಿಂದಲೇ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಈಗ ಈ ಎರಡು ತರಗತಿಗಳಿಗೆ ಮಾ.27ರಿಂದ ಪರೀಕ್ಷೆ ಆರಂಭವಾಗಲಿದ್ದು, ಅಭ್ಯಾಸ ಮಾಡುವುದಕ್ಕೆ 12 ದಿನ ವಿದ್ಯಾರ್ಥಿಗಳಿಗೆ ಸಮಯ ಸಿಕ್ಕಂತಾಗಿದೆ.
ಮುಂದಿನ ವರ್ಷದಿಂದ ಬೋರ್ಡ್ ಪರೀಕ್ಷೆ ಮಾಡಲಿ: ಹೈಕೋರ್ಟ್ ಆದೇಶದಿಂದ ನಮಗೆ ನಿರಾಸೆಯಾಗಿದೆ. 5 ಹಾಗೂ 8 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವ ವಿಚಾರ ಶೈಕ್ಷಣಿಕ ಪ್ರಾರಂಭದಲ್ಲಿ ನಿರ್ಧಾರ ಮಾಡಿಲ್ಲ. ಶೈಕ್ಷಣಿಕ ವರ್ಷದ ಮಧ್ಯ ಭಾಗದಲ್ಲಿ ಶಿಕ್ಷಣ ಇಲಾಖೆ ನಿರ್ಧಾರ ತೆಗೆದುಕೊಂಡಿದೆ. ಮಾರ್ಚ್ 31 ರಿಂದ SSLC ಪರೀಕ್ಷೆ ಪ್ರಾರಂಭವಾಗುತ್ತಿವೆ. ಈಗಾಗಲೇ ಉಳಿದ ತರಗತಿಗಳ ಪರೀಕ್ಷೆ ನಡೆಸಲಾಗುತ್ತಿದೆ. ಇದರ ಮಧ್ಯೆ 5 ಹಾಗೂ 8 ನೇ ತರಗತಿ ಬೋರ್ಡ್ ಪರೀಕ್ಷೆ ನಡೆಸುವುದು ಹೊರೆಯಾಲಗಲಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಈ ಬಗ್ಗೆ ತಯಾರಿ ಮಾಡಿಕೊಂಡಿಲ್ಲ. ಎಷ್ಟೋ ಶಾಲೆಗಳಿಗೆ ಶಿಕ್ಷಣ ಇಲಾಖೆ ಪಠ್ಯಪುಸ್ತಕವನ್ನ ಕೊಟ್ಟಿಲ್ಲ. ಆದ್ದರಿಂದ ಮುಂದಿನ ವರ್ಷದಿಂದಾದರೂ ಬೋರ್ಡ್ ಪರೀಕ್ಷೆ ನಡೆಸಲಿ ಎಂದು ಖಾಸಗಿ ಶಾಲಾ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ.
5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಣೆ, ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಸೂಚನೆ
ಬೋರ್ಡ್ ಪರೀಕ್ಷೆ ಭಯ ಹೋಗಲಾಡಿಸಲು ಅನುಕೂಲ: ಇನ್ನು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಹಂತದ ಎರಡು ಮೇಲ್ಪಟ್ಟದ ತರಗತಿಗಳಾದ 5ನೇ ಮತ್ತು 8ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿತ್ತು. ಈ ವೇಳೆ ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವುದಿಲ್ಲ ಎಮದು ತಿಳಿಸಿತ್ತು. ಕೋರ್ಟ್‌ಗೂ ಕೂಡ ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಕೂಡ ವಿದ್ಯಾರ್ಥಿಗಳನ್ನು ಫೇಲ್ ಮಾಡುವುದಿಲ್ಲ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಪ್ರಸಾರ ಇದರ ಉದ್ದೇಶವಾಗಿದೆ. ಜೊತೆಗೆ, ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುನಲ್ಲಿ ನಡೆಸುವ ಬೋರ್ಡ್ ಪರೀಕ್ಷೆಗೂ ಮೊದಲೇ ಎರಡು ಹಂತದಲ್ಲಿ ಬೋರ್ಡ್ ಪರೀಕ್ಷೆಯ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಿ ಮಾನಸಿಕವಾಗಿ ಸಿದ್ಧಗೊಳಿಸಲಾಗುತ್ತದೆ. ಈ ಮೂಲಕ ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಯ ಭಯವಿಲ್ಲದೆ ಅಭ್ಯಾಸಮಾಡಲು ಹಾಗೂ ಪರೀಕ್ಷೆ ಬರೆಯಲು ಅನುಕೂಲ ಆಗುತ್ತದೆ.