5, 8ನೇ ಕ್ಲಾಸ್ ಬೋರ್ಡ್ ಪರೀಕ್ಷೆಯಲ್ಲಿ ಎಲ್ರೂ ಪಾಸ್: ಹೈಕೋರ್ಟ್‌ನಲ್ಲಿ ಸರ್ಕಾರ ವಾದ
ಮಕ್ಕಳ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರು (ಮಾ.09): ಮಕ್ಕಳ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಉದ್ದೇಶದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐದು ಮತ್ತು ಎಂಟನೇ ತರಗತಿ ಮಕ್ಕಳಿಗೆ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಮಕ್ಕಳನ್ನು ಮುಂದಿನ ತರಗತಿಗೆ ಕಳಿಸಲಾಗುವುದು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. 5 ಮತ್ತು 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನದ ಬದಲಾಗಿ ರಾಜ್ಯ ಮಟ್ಟದ ಬೋರ್ಡ್ ಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡಿರುವ ಕ್ರಮ ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ಸಿಂಗ್ ಯೆರೂರ್ ಅವರ ನ್ಯಾಯಪೀಠದ ಮುಂದೆ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಯಾವುದೇ ಸುತ್ತೋಲೆ ಹೊರಡಿಸುವುದಕ್ಕೂ ಮುನ್ನ ಸರ್ಕಾರವು ಸಾರ್ವಜನಿಕರು ಮತ್ತು ಸಂಬಂಧಪಟ್ಟವರಿಂದ ಅಹವಾಲು ಹಾಗೂ ಆಕ್ಷೇಪಣೆ ಸ್ವೀಕರಿಸಬೇಕು. ಆದರೆ, ಸರ್ಕಾರ ಏಕಾಏಕಿ 5 ಮತ್ತು 8ನೇ ತರಗತಿಗಳ ಮಕ್ಕಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸಲು ನಿರ್ಧಾರ ಕೈಗೊಂಡು ಸುತ್ತೋಲೆ ಹೊರಡಿಸಿದೆ. ಇದರಿಂದ ಶಿಕ್ಷಣ ಸಂಸ್ಥೆಗಳು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ, ಸರ್ಕಾರದ ಸುತ್ತೋಲೆಯನ್ನು ರದ್ದುಪಡಿಸಬೇಕು ಎಂದು ಕೋರಿದರು.
3 ವರ್ಷದಲ್ಲಿ ರಾಜ್ಯದ 20 ಲಕ್ಷ ಯುವಕರಿಗೆ ಟೆಕ್ ತರಬೇತಿ: ರಾಜೀವ್ ಚಂದ್ರಶೇಖರ್
ಸರ್ಕಾರದ ಪರ ವಕೀಲರು ಉತ್ತರಿಸಿ, ಕೊರೋನಾ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳ ವ್ಯಾಸಂಗದಲ್ಲಿ ಶೈಕ್ಷಣಿಕ ಗುಣಮಟ್ಟಕುಸಿದಿದೆ. ಅದನ್ನು ಹೆಚ್ಚಿಸಲು 5 ಮತ್ತು 8ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೂ ಅವರನ್ನು ಅದೇ ತರಗತಿಯಲ್ಲಿ ಮುಂದುವರೆಸುವುದಿಲ್ಲ. ಮುಂದಿನ ತರಗತಿಗೆ ಕಳುಹಿಸಲಾಗುತ್ತದೆ. ಮಕ್ಕಳ ಬುದ್ಧಿವಂತಿಕೆ ಪರೀಕ್ಷಿಸುವುದೇ ಈ ನಿರ್ಧಾರದ ಹಿಂದಿನ ಉದ್ದೇಶ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳ ಬುದ್ಧಿವಂತಿಕೆ ಅಳೆಯಬಹುದೆ? ಮಕ್ಕಳ ಸಾಮರ್ಥ್ಯ, ವಿಶ್ವಾಸ ಮತ್ತು ಬುದ್ಧಿವಂತಿಕೆಯನ್ನು ಅವರ ಅಂಕಗಳ ಮೇಲೆ ಅಳೆಯುತ್ತಿದ್ದೇವೆ. ಕೆಲ ಅನುದಾನರಹಿತ ಖಾಸಗಿ ಶಾಲೆಗಳು ಶೇ.90ಕ್ಕೂ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಲು ವಿಫಲವಾದ ವಿದ್ಯಾರ್ಥಿಗಳನ್ನು ಬೇರೊಂದು ಶಾಲೆಗಳಿಗೆ ಕಳುಹಿಸುತ್ತಿವೆ ಎಂಬ ಅಂಶ ನ್ಯಾಯಾಲಯದ ಗಮನಕ್ಕೆ ಬಂದಿದೆ. ಅಂಕಗಳ ಮೇಲೆ ವಿದ್ಯಾರ್ಥಿಗಳ ಬುದ್ಧಿವಂತಿಕೆ ಅಳೆಯುವ ವಿಧಾನವೇ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿತು.
ಇದೇ ಮಾನದಂಡದಲ್ಲಿ ಬುದ್ಧಿವಂತಿಕೆಯನ್ನು ಅಳೆಯುವುದಾದರೆ ಅತ್ಯುತ್ತಮ ರಾರಯಂಕ್ ಪಡೆದ ಕಾನೂನು ವಿದ್ಯಾರ್ಥಿಗಳು ವಕೀಲರಾದ ಮೇಲೆ ಪ್ರಕರಣಗಳಿಲ್ಲದೆ ನ್ಯಾಯಾಲಯದ ಕಾರಿಡಾರ್‌ನಲ್ಲಿ ಓಡಾಡುತ್ತಿದ್ದಾರೆ. ಚಿನ್ನದ ಪದಕ ಗಳಿಸಿದ ಅನೇಕ ವೈದ್ಯರ ಬಳಿ ರೋಗಿಗಳೇ ಇಲ್ಲವಾಗಿದೆ. ಚಿನ್ನದ ಪದಕ ಪಡೆದ ಎಂಜಿನಿಯರ್‌ಗಳು ನಿರ್ಮಿಸಿದ ಕಟ್ಟಡಗಳು ಕುಸಿಯುತ್ತಿವೆ ಎಂದು ನ್ಯಾಯಪೀಠ ನುಡಿಯಿತು. ಅಂತಿಮವಾಗಿ ನ್ಯಾಯಪೀಠ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಆದೇಶವನ್ನು ಕಾಯ್ದಿರಿಸಿದೆ.
ಆಯಾ ಶಾಲೆಯೇ ಪರೀಕ್ಷಾ ಕೇಂದ್ರ: ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ನಿರ್ಧಾರ ಪ್ರಶ್ನಿಸಿರುವ ಪ್ರಕರಣದ ತೀರ್ಪನ್ನು ಹೈಕೋರ್ಟ್ ಗುರುವಾರ ಕಾಯ್ದಿರಿಸಿರುವ ಬೆನ್ನಲ್ಲೇ ಶಿಕ್ಷಣ ಇಲಾಖೆ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳನ್ನಾಗಿ ಮಾರ್ಪಡಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
ಮಕ್ಕಳ ಕಲಿಕೆಯನ್ನು ಉತ್ತಮಗೊಳಿಸಲು 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮಂಡಳಿ (ಬೋರ್ಡ್) ಪರೀಕ್ಷೆ ನಡೆಸಲು ನಿರ್ಧರಿಸಿ ವೇಳಾಪಟ್ಟಿಯನ್ನೂ ಪ್ರಕಟಿಸಿದೆ. ಮಾ.13ರಿಂದ 18ರವರೆಗೆ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪರೀಕ್ಷಾ ಕೇಂದ್ರಗಳನ್ನು ರಚಿಸುವಂತೆ ಸೂಚಿಸಲಾಗಿತ್ತು. ಅಂದರೆ, ಯಾವುದೇ ಶಾಲೆಯಲ್ಲಿ ಕಡಿಮೆ ಮಕ್ಕಳಿದ್ದರೆ ಅವರಿಗೆ ಸಮೀಪದ ಮತ್ತೊಂದು ಶಾಲೆಯನ್ನು ಪರೀಕ್ಷಾ ಕೇಂದ್ರವಾಗಿಸಲು ಸೂಚಿಸಲಾಗಿತ್ತು. ಆದರೆ, ಇದಕ್ಕೆ ಪೋಷಕರಿಂದ ಆಕ್ಷೇಪಗಳು ವ್ಯಕ್ತವಾಗಿವೆ. ಹಾಗಾಗಿ ಆಯಾ ಶಾಲೆಗಳನ್ನೇ ಕೇಂದ್ರವಾಗಿಸಲು ಇಲಾಖೆ ಸೂಚಿಸಿದೆ.
ಈ ಬಾರಿ ಕಲಘಟಗಿ ತೊಟ್ಟಿಲು ತೂಗುವವರು ಯಾರು?: ‘ಕೈ’ ಟಿಕೆಟ್‌ಗಾಗಿ ನಾಗರಾಜ, ಲಾಡ್ ನಡುವೆ ಪೈಪೋಟಿ
ಮಾ.3ರಿಂದಲೇ ಆರಂಭಿಸಿರುವ ಇಲಾಖೆಯ ಸಹಾಯವಾಣಿಗೆ ಕರೆ ಮಾಡುತ್ತಿರುವ ಪೋಷಕರು, ವಿದ್ಯಾರ್ಥಿಗಳು ಪ್ರಸ್ತುತ ಶಾಲೆಯಿಂದ ಪರೀಕ್ಷೆ ಕೇಂದ್ರಗಳಿಗೆ ತೆರಳಲು ಅನಾನುಕೂಲವಾಗುತ್ತಿರುವ ಬಗ್ಗೆ ಆಕ್ಷೇಪಣೆಗಳನ್ನು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆಯಾ ಶಾಲೆಗಳನ್ನೇ ಪರೀಕ್ಷಾ ಕೇಂದ್ರಗಳನ್ನಾಗಿ ಪರಿಗಣಿಸಿ ಈಗಾಗಲೇ ನಿಗದಿ ಮಾಡಿರುವ ದಿನಾಂಕಗಳಂದೇ ಮೌಲ್ಯಾಂಕನವನ್ನು ನಡೆಸಬೇಕು. ಉಳಿದಂತೆ ಮಾರ್ಗಸೂಚಿ ಅನ್ವಯ ಗೌಪ್ಯತೆ ಮತ್ತು ಪಾವಿತ್ರ್ಯತೆ ಕಾಪಾಡುವಂತೆ ಕರ್ನಾಟಕ ಶಾಲಾ ಗುಣಮಟ್ಟಮತ್ತು ಅಂಗೀಕರಣ ಪರಿಷತ್ತು ತಿಳಿಸಿದೆ.