5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರಣೆ, ಅಫಿಡವಿಟ್ ಸಲ್ಲಿಸಲು ಸರ್ಕಾರಕ್ಕೆ ಸೂಚನೆ
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಸಂಬಂಧ ಶಿಕ್ಷಣ ಇಲಾಖೆ ಪ್ರಿನ್ಸಿಪಾಲ್ ಸೆಕ್ರೆಟರಿಯಿಂದ ಪ್ರಮಾಣ ಪತ್ರ ಸಲ್ಲಿಕೆಗೆ ಸೂಚನೆ ನೀಡಿರುವ ಹೈಕೋರ್ಟ್ ವಿಭಾಗೀಯ ಪೀಠ ಮುಂದಿನ ವಿಚಾರಣೆಯನ್ನು ನಾಳೆ 4 ಗಂಟೆಗೆ ಮುಂದೂಡಿದೆ.
ಬೆಂಗಳೂರು (ಮಾ.14): ರಾಜ್ಯ ಪಠ್ಯಕ್ರಮದ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ರದ್ದು ಪಡಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠದ ನಿರ್ಧಾರವನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿರುವ ಮೇಲ್ಮನವಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದ್ದು, ಶಿಕ್ಷಣ ಇಲಾಖೆ ಪ್ರಿನ್ಸಿಪಾಲ್ ಸೆಕ್ರೆಟರಿಯಿಂದ ಬೋರ್ಡ್ ಎಕ್ಸಾಂ ಸಂಬಂಧ ಪ್ರಮಾಣ ಪತ್ರ ಸಲ್ಲಿಕೆಗೆ ಸೂಚನೆ ನೀಡಿದೆ. ಈ ಮೂಲಕ ಮುಂದಿನ ವಿಚಾರಣೆಯನ್ನು ಮಾರ್ಚ್ 15 ರ ಸಂಜೆ 4 ಗಂಟೆಗೆ ಮುಂದೂಡಿದೆ.
ನ್ಯಾ.ನರೇಂದರ್ ಹಾಗು ನ್ಯಾ. ಅಶೋಕ್ ಕಿಣಗಿ ಅವರಿದ್ದ ನ್ಯಾಯ ಪೀಠದಲ್ಲಿ ಈ ಮಹತ್ವದ ನಿರ್ಧಾರ ಪ್ರಕಟಿಸಿದೆ. ಕುಸ್ಮಾ ಪರವಾಗಿ ವಕೀಲ ಕೆ.ವಿ.ಧನಂಜಯ ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ಎಎಜಿ ಧ್ಯಾನ್ ಚಿನ್ನಪ್ಪ ವಾದ ಮಂಡಿಸುತ್ತಿದ್ದಾರೆ.
5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್:
ಮಾ. 13ರಿಂದ ಆರಂಭವಾಗಬೇಕಿದ್ದ ರಾಜ್ಯ ಮಟ್ಟದ ಮೌಲ್ಯಾಂಕನ (ಬೋರ್ಡ್) ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶಿಸಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆಯು ಪರೀಕ್ಷೆಗಳನ್ನು ಮುಂದೂಡಿದೆ. ‘ಹೈಕೋರ್ಟ್ ಆದೇಶದಂತೆ ಪರೀಕ್ಷೆ ಮುಂದೂಡಿದ್ದು ನ್ಯಾಯಾಲಯ ಅನುಮತಿ ನೀಡಿದರೆ ಮೌಲ್ಯಾಂಕನ ಪರೀಕ್ಷೆ ನಡೆಸುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು’ ಎಂದು ಹೇಳಿದೆ.
ನಾಳಿನ 5, 8ನೇ ಕ್ಲಾಸ್ ಪರೀಕ್ಷೆ ಮುಂದೂಡಿಕೆ: ಪರೀಕ್ಷೆ ತಡೆಹಿಡಿಯಲು ಹೈಕೋರ್ಟ್
ರಾಜ್ಯ ಸರ್ಕಾರದ 5 ಮತ್ತು 8 ನೇ ತರಗತಿ ಬೋರ್ಡ್ ಎಕ್ಸಾಂ ಆದೇಶ ರದ್ದು ಪಡಿಸಿ ಕೋರ್ಟ್ ತೀರ್ಪು ಪ್ರಕಟಿಸಿತ್ತು. ಅನುದಾನರಹಿತ ಶಾಲೆಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ಏಕ ಸದಸ್ಯ ಪೀಠ ಈ ತೀರ್ಮಾನ ಪ್ರಕಟಿಸಿತ್ತು. ನ್ಯಾ.ಪ್ರದೀಪ್ ಸಿಂಗ್ ಯೆರೂರ್ ಅವರಿದ್ದ ಪೀಠದಿಂದ ಈ ಮಹತ್ವದ ಆದೇಶ ಹೊರ ಬಿದ್ದಿತ್ತು. ಈ ಮೂಲಕ ಸದ್ಯ 5 ಮತ್ತು 8ನೇ ತರಗತಿ ಮಕ್ಕಳಿಗೆ ಇದ್ದ ಪಬ್ಲಿಕ್ ಎಕ್ಸಾಂ ಆತಂಕ ದೂರವಾಗಿದೆ. ಸದ್ಯ ಸರಕಾರದ ಮೇಲ್ಮನವಿ ವಿಚಾರಣೆ ನಡೆಯುತ್ತಿದ್ದು, ನಾಳೆ ನ್ಯಾಯಾಲಯ ಯಾವ ನಿರ್ಧಾರ ಪ್ರಕಟಿಸಬಹುದೆಂದು ಕಾದು ನೋಡಬೇಕಿದೆ.