5, 8, 9ನೇತರಗತಿ ಮಕ್ಕಳಿಗೆ ಇಂದಿನಿಂದ ಬೋರ್ಡ್ ಪರೀಕ್ಷೆ: 28.14 ಲಕ್ಷ ವಿದ್ಯಾರ್ಥಿಗಳು ಭಾಗಿ
ಸರ್ಕಾರ ಮತ್ತು ಖಾಸಗಿ ಶಾಲಾ ಸಂಘಟನೆಗಳ ನಡುವೆ ಮುಂದುವರೆದ ಕಾನೂನಿನ ಹೋರಾಟ, ಮಕ್ಕಳಲ್ಲಿ ಗೊಂದಲದ ನಡುವೆಯೇ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ (ಮಾ.11) ಮಂಡಳಿ ಪರೀಕ್ಷೆಗಳು ಆರಂಭವಾಗಲಿವೆ.
ಬೆಂಗಳೂರು (ಮಾ.11): ಸರ್ಕಾರ ಮತ್ತು ಖಾಸಗಿ ಶಾಲಾ ಸಂಘಟನೆಗಳ ನಡುವೆ ಮುಂದುವರೆದ ಕಾನೂನಿನ ಹೋರಾಟ, ಮಕ್ಕಳಲ್ಲಿ ಗೊಂದಲದ ನಡುವೆಯೇ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ (ಮಾ.11) ಮಂಡಳಿ ಪರೀಕ್ಷೆಗಳು ಆರಂಭವಾಗಲಿವೆ. ಸರ್ಕಾರ ಸಿದ್ದಪಡಿಸಿರುವ ಪ್ರಶ್ನೆ ಪತ್ರಿಕೆಗೆ ಆಯಾ ಶಾಲೆಗಳಲ್ಲೇ ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 69,137 ಶಾಲೆಗಳಿಂದ 28.14 ಲಕ್ಷ ವಿದ್ಯಾರ್ಥಿಗಳಿಗೆ ಮಾ.18ರವರೆಗೆ ಮೌಲ್ಯಾಂಕನ ಪರೀಕ್ಷೆಗಳು ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದೆ.
5ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ಮಾ.11ರಿಂದ 14ರ ವರೆಗೆ, 8 ಮತ್ತು 9ನೇ ತರಗತಿಗೆ ಮಾ.11ರಿಂದ 18ರವರೆಗೆ ಪರೀಕ್ಷೆಗಳು ನಡೆಯಲಿವೆ. ಎಲ್ಲ ಮಕ್ಕಳಿಗೂ ಮಧ್ಯಾಹ್ನ 2.30ಕ್ಕೆ ಪರೀಕ್ಷೆಗಳು ಆರಂಭವಾಗಲಿದ್ದು ಕ್ರಮವಾಗಿ 4.30ರವರೆಗೆ, ಸಂಜೆ 5 ಹಾಗೂ 5.15ಕ್ಕೆ ಮುಕ್ತಾಯವಾಗಲಿವೆ. 5ನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ಗಣಿತ ಮತ್ತು ಪರಿಸರ ಅಧ್ಯಯನ ಸೇರಿ 4 ವಿಷಯಗಳು, 8 ಮತ್ತು 9ನೇ ತರಗತಿಗೆ ಪ್ರಥಮ ಭಾಷೆ, ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.
ಮಂಡಳಿಯು ಈಗಾಗಲೇ ಸಿದ್ಧಪಡಿಸಿರುವ ಪ್ರಶ್ನೆ ಪತ್ರಿಕೆಗಳನ್ನು ಅತ್ಯಂತ ಬಿಗಿ ಭದ್ರತೆಯಲ್ಲಿ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಸ್ಟ್ರಾಂಗ್ ರೂಂಗಳಿಗೆ ತಲುಪಿಸಿದ್ದು, ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಇಡಲಾಗಿದೆ. ಪ್ರಶ್ನೆ ಪತ್ರಿಕೆಗಳು ಪರೀಕ್ಷೆ ಆರಂಭಕ್ಕೂ ಮುನ್ನ ಆಯಾ ಪರೀಕ್ಷಾ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿಯ ಉಸ್ತುವಾರಿಯಲ್ಲಿ ಸರಬರಾಜಾಗಲಿವೆ. ಶಾಲಾ ಮಟ್ಟದಲ್ಲೇ ಪರೀಕ್ಷೆಗಳು ನಡೆಯಲಿದ್ದು ಉತ್ತರ ಬರೆಯುವ ಹಾಳೆಗಳನ್ನೂ ಮಂಡಳಿಯಿಂದಲೇ ವಿತರಿಸಲಾಗುತ್ತದೆ.
Loksabha Elections 2024: ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಶೆಟ್ಟರ್‌ಗೋ, ಬೊಮ್ಮಾಯಿಗೋ?
5, 8 ಮತ್ತು 9ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ವಿವಿಧ ಖಾಸಗಿ ಶಾಲಾ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಏಕ ಸದಸ್ಯ ಪೀಠ ಪರೀಕ್ಷೆ ರದ್ದು ಪಡಿಸಿ ಆದೇಶಸಿತ್ತು, ಆದರೆ ಸರ್ಕಾರ ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ ನಿಗದಿತ ಪಟ್ಟಿಯಂತೆ ಪರೀಕ್ಷೆ ನಡೆಸಲು ಆದೇಶಿಸಿತ್ತು. ಈ ಮಧ್ಯೆ, ಹೈಕೋರ್ಟ್ ಆದೇಶ ಪ್ರಶ್ನಿಸಿ ಈಗ ಖಾಸಗಿ ಶಾಲೆಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ. ಹಾಗಾಗಿ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಿದರೂ ಅದು ಊರ್ಜಿತವಾಗಲಿದೆಯೇ ಎಂಬುದು ಸುಪ್ರೀಂ ಕೋರ್ಟ್‌ನ ತೀರ್ಪಿನ ಮೇಲೆ ನಿಂತಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮಕ್ಕಳು ಸೋಮವಾರದಿಂದ ಪರೀಕ್ಷೆ ಬರೆಯಲಿದ್ದಾರೆ.