ಎಸ್ಎಸ್ಎಲ್‌ಸಿ, ಪಿಯುಸಿ ಮುಖ್ಯ ಪರೀಕ್ಷೆಗೆ ಭದ್ರತೆ ವಿಚಾರ: ಶಿಕ್ಷಣ ಸಚಿವರಿಂದ ಸಭೆ
ಮಾರ್ಚ್ 9ರಿಂದ ಏಪ್ರಿಲ್ 15ರವರೆಗೆ ನಡೆಯಲಿರುವ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು.
ಬೆಂಗಳೂರು: ಮಾರ್ಚ್ 9ರಿಂದ ಏಪ್ರಿಲ್ 15ರವರೆಗೆ ನಡೆಯಲಿರುವ ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಗಳನ್ನು ಸುಸೂತ್ರವಾಗಿ ನಡೆಸಲು ಎಲ್ಲ ರೀತಿಯ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ತಿಳಿಸಿದರು. ಮುಖ್ಯ ಪರೀಕ್ಷೆಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಗೃಹ ಸಚಿವರು, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳವಾರ (ಫೆ.21) ಪ್ರತ್ಯೇಕ ಸಭೆಗಳನ್ನು ನಡೆಸಿದ ಸಚಿವರು, ಈ ಕುರಿತು ಮಾಹಿತಿ ನೀಡಿದರು.
ರಾಜ್ಯದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ (examination centers) ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತದೆ. ಸಿಸಿ ಕ್ಯಾಮೆರಾ ಕಣ್ಗಾವಲು ಇರುತ್ತದೆ. ಪರೀಕ್ಷಾ ಕೇಂದ್ರದ ಸುತ್ತಲಿನ ಜೆರಾಕ್ಸ್ ಕೇಂದ್ರಗಳನ್ನು ಪರೀಕ್ಷೆಯ ಅವಧಿಯಲ್ಲಿ ಬಂದ್ ಮಾಡಲಾಗುತ್ತದೆ. ಸೈಬರ್ ಸೆಂಟರ್(Cyber officers), ಟ್ಯೂಷನ್ ಕೇಂದ್ರಗಳು, ಕಂಪ್ಯೂಟರ್, ಗೇಮ್ಸ್ ಕೇಂದ್ರಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ. ಈ ಹಿಂದೆ ಪರೀಕ್ಷಾ ಅಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಳ್ಳುವುದು ಸೇರಿದಂತೆ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಶಂಕಿತ ವ್ಯಕ್ತಿಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ಟಾರ್ಚರ್: ಲಕ್ಷ-ಲಕ್ಷಕ್ಕೆ ಬೇಡಿಕೆ
ಹಿಂದಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮ ವರದಿಯಾಗಿರುವ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಮೊಬೈಲ್‌ಫೋನ್ (mobile phones), ಸ್ಮಾರ್ಟ್‌ವಾಚ್, ಇಯರ್‌ಫೋನ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ಪರೀಕ್ಷಾ ಕೇಂದ್ರಗಳಲ್ಲಿ ನಿಷೇಧಿಸಲಾಗುತ್ತದೆ. ವಿದ್ಯಾರ್ಥಿಗಳು ಸಮಯ ನೋಡಿಕೊಳ್ಳಲು ಗೋಡೆ ಗಡಿಯಾರದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸದಂತೆ ಹಾಗೂ ವದಂತಿಗಳನ್ನು ಹಬ್ಬಿಸುವ ಕಿಡಿಗೇಡಿಗಳ ಮೇಲೆ ಸೈಬರ್ ಅಧಿಕಾರಿಗಳು, ಸ್ಥಳೀಯ ಪೊಲೀಸರು ಹಾಗೂ ಇನ್ನಿತರ ತಂಡಗಳು ವಿಶೇಷ ನಿಗಾ ಇರಿಸಲಿವೆ. ಈ ಸಂಬಂಧ ಪೊಲೀಸರು, ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಂಯೋಜನೆ, ಸಹಯೋಗದಿಂದ ಕಾರ್ಯ ನಿರ್ವಹಿಸಲಿವೆ ಎಂದು ಸಚಿವ ನಾಗೇಶ್ ಅವರು ಮಾಹಿತಿ ನೀಡಿದರು.
2nd PUC Practical Exam: ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳಿಗೆ ಕೊನೆ ಅವಕಾಶ
ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳ ಸಾಗಣೆ, ಸಂಗ್ರಹಣೆ, ಮೌಲ್ಯಮಾಪನ ಕೇಂದ್ರಗಳು (evaluation centers) 24/7 ಪೊಲೀಸ್ ಭದ್ರತೆ ಮತ್ತು ಸಿಸಿ ಕ್ಯಾಮೆರಾ (CC camera) ನಿಗಾದಲ್ಲಿರುತ್ತವೆ. ಪರೀಕ್ಷಾ ಕೇಂದ್ರಗಳಲ್ಲಿ ಭದ್ರತಾ ಕಾರ್ಯ ಮತ್ತು ಪರೀಕ್ಷಾ ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವ ಅಧಿಕಾರಿ ಮತ್ತು ಸಿಬ್ಬಂದಿಗೆ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರದ ಅಧೀಕ್ಷಕರು ಮಾತ್ರ ಕ್ಯಾಮೆರಾ ಸೌಲಭ್ಯ ಇಲ್ಲದ ಬೆಸಿಕ್ ಮೊಬೈಲ್‌ಫೋನ್ ಬಳಕೆಗೆ ಅನುಮತಿ ಇರುತ್ತದೆ ಎಂದು ಸಚಿವರು ತಿಳಿಸಿದರು.
ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ(Araga Gyanendra), ಶಿಕ್ಷಣ ಇಲಾಖೆ, ಗೃಹ ಇಲಾಖೆ ಮತ್ತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು. ವಿಕಾಸಸೌಧದಲ್ಲಿ ಶಿಕ್ಷಣ ಮತ್ತು ಕಂದಾಯ ಇಲಾಖೆಯ ಉನ್ನತ ಅಧಿಕಾರಿಗಳು, ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು, ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ವಿಡಿಯೊ ಕಾನ್ಫರೆನ್ಸ್ ನಡೆಸಿದರು.
ಅಂಕಿ-ಅಂಶಗಳು
ದ್ವಿತೀಯ ಪಿಯುಸಿ*
ಒಟ್ಟು ಪರೀಕ್ಷಾ ಕೇಂದ್ರಗಳು: 1,109
ಒಟ್ಟು ವಿದ್ಯಾರ್ಥಿಗಳು: 7,27,387
ಎಸ್ಎಸ್ಎಲ್‌ಸಿ*
ಒಟ್ಟು ಪರೀಕ್ಷಾ ಕೇಂದ್ರಗಳು : 3,307
ಒಟ್ಟು ವಿದ್ಯಾರ್ಥಿಗಳು- 8,69,490