ಬಿಬಿಎಂಪಿ ಶಾಲೆ ಕಾಲೇಜಿಗೆ ಗುತ್ತಿಗೆ ಶಿಕ್ಷಕರೇ ಗತಿ..!
* ಪಾಲಿಕೆಯ ಶಾಲೆ, ಕಾಲೇಜುಗಳಿಗೆ ಹೆಚ್ಚಿದ ದಾಖಲಾತಿ ಪ್ರಮಾಣ
* ಶಿಕ್ಷಕರ ನೇಮಕಕ್ಕೆ ಸರ್ಕಾರ ಮಿನಮೇಷ
* ಗುತ್ತಿಗೆ ಶಿಕ್ಷಕರ ನಂಬಿಕೊಂಡಿರುವ ಪಾಲಿಕೆ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು(ಜೂ.05): ಕೊರೋನಾ ಸೋಂಕು ಶುರುವಾದ ಬಳಿ ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ, ಈ ಶಾಲಾ ಕಾಲೇಜುಗಳಿಗೆ ಶಿಕ್ಷಕರ ನೇಮಕ ಮಾಡದೇ ಆಡಳಿತ ವ್ಯವಸ್ಥೆ ಕಡೆಗಣಿಸಿದಂತೆ ಕಾಣುತ್ತಿದೆ.
ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಬರೋಬ್ಬರಿ 23 ಸಾವಿರಕ್ಕೆ ಏರಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.5ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಆದರೆ, ಹೊರ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಂಡ ಶಿಕ್ಷಕರನ್ನು ನಂಬಿಕೊಂಡು ಬಿಬಿಎಂಪಿ ಶಾಲಾ-ಕಾಲೇಜುಗಳ ಮುನ್ನೆಡೆಸಬೇಕಾದ ಸ್ಥಿತಿ ಇದೆ.
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ: ಸಚಿವ ನಾಗೇಶ್ ಮನೆಗೆ ಮುತ್ತಿಗೆ
ಸದ್ಯ 680 ಶಿಕ್ಷಕರನ್ನು ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಪೈಕಿ ಶೇ.30ರಿಂದ 40ರಷ್ಟುಶಿಕ್ಷಕರು ಮಾತ್ರ ಕಳೆದ 10 ವರ್ಷದಿಂದ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಶಿಕ್ಷಕರು ಪದೇ ಪದೇ ಬದಲಾಗುತ್ತಿರುತ್ತಾರೆ. ಇದು ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಖಾಯಂ ಶಿಕ್ಷಕರ ನೇಮಕಕ್ಕೆ ಸಾಕಷ್ಟು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ.
6 ತಿಂಗಳ ಹಿಂದೆ ಸರ್ಕಾರಕ್ಕೆ ಪ್ರಸ್ತಾಪ
ಕಳೆದ ಡಿಸೆಂಬರ್‌ನಲ್ಲಿ 65 ಪ್ರಾಥಮಿಕ ಶಾಲೆ ಸಹ ಶಿಕ್ಷಕರು, 139 ಪ್ರೌಢ ಶಾಲೆ ಸಹ ಶಿಕ್ಷಕರು, 6 ದೈಹಿಕ ಶಿಕ್ಷಕರು ಸೇರಿದಂತೆ ಒಟ್ಟು 210 ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನೇಮಕಾತಿ ಪ್ರಕ್ರಿಯೆಯಲ್ಲಿ ಹತ್ತಾರು ವರ್ಷದಿಂದ ಪಾಲಿಕೆ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಸೇವಾ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ಮಾಡಿ ನೇಮಕಾತಿ ನಡೆಸುವಂತೆ ಪ್ರಸ್ತಾವನೆಯಲ್ಲಿ ಹೇಳಲಾಗಿತ್ತು. ಇದು ನೇಮಕಾತಿ ಪ್ರಕ್ರಿಯೆಗೆ ತೊಡಕಾಗಿದ್ದು, ನೇಮಕಾತಿ ವಿಳಂಬವಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧಿಸಿದಂತೆ ಆರ್ಥಿಕ ಇಲಾಖೆ, ಕಾನೂನು ಇಲಾಖೆಯಿಂದ ಅನುಮೋದನೆ ಕೇಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
27 ವರ್ಷದಿಂದ ನೇಮಕಾತಿ ಇಲ್ಲ
ಬಿಬಿಎಂಪಿ ಶಾಲೆಗಳಿಗೆ 1994-95ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಆದಾದ ಬಳಿಕ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. 1994-95ರಲ್ಲಿ ನೇಮಕಗೊಂಡ ಬಹುತೇಕ ಶಿಕ್ಷಕರು ಈಗಾಗಲೇ ನಿವೃತ್ತಿ ಹಂತಕ್ಕೆ ಬಂದಿದ್ದಾರೆ. ಸದ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ 71 ಮಂದಿ ಖಾಯಂ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂರ್ನಾಲ್ಕು ವರ್ಷದಲ್ಲಿ ಈ ಶಿಕ್ಷಕರು ನಿವೃತ್ತಿ ಹೊಂದಲಿದ್ದಾರೆ.
ಮುಖ್ಯ ಶಿಕ್ಷಕರ ನೇಮಕದ ಚಿಂತೆ
ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಖಾಯಂ ಶಿಕ್ಷಕರನ್ನು ಮುಖ್ಯಸ್ಥರಾಗಿ ನೇಮಿಸಲಾಗುತ್ತಿದೆ. ಆದರೆ, ಮೂರ್ನಾಲ್ಕು ವರ್ಷದಲ್ಲಿ ಬಹುತೇಕ ಎಲ್ಲ ಖಾಯಂ ಶಿಕ್ಷಕರು ನಿವೃತ್ತಿ ಹೊಂದಲಿದ್ದಾರೆ. ಅದಕ್ಕೂ ಮುನ್ನವೇ ನೇಮಕಾತಿ ಪ್ರಕ್ರಿಯೆ ನಡೆಯಬೇಕಿದೆ. ಇಲ್ಲವಾದರೆ, ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರನ್ನೇ ನೇಮಿಸಬೇಕಾಗಲಿದೆ ಎಂದು ಪಾಲಿಕೆ ಶಿಕ್ಷಣ ವಿಭಾಗ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದರು.
ಪಠ್ಯದಲ್ಲಿ ಬಸವಣ್ಣನವರಿಗೆ ಅಪಮಾನ ಮಾಡಿದ ವಿಚಾರದ ಬಗ್ಗೆ ಸಿಎಂ ಗಂಭೀರವಾಗಿ ಪರಿಗಣಿಸಬೇಕು: ಜಗದೀಶ್ ಶೆಟ್ಟರ್!
ಗುತ್ತಿಗೆ ಶಿಕ್ಷಕರನ್ನು ನಂಬಿ ಗುಣಮಟ್ಟ ಶಿಕ್ಷಣ ಕನಸು
ಪಾಲಿಕೆ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ದಾಖಲಾಗುತ್ತಿರುವ ಸಂಖ್ಯೆ ಅಧಿಕಗೊಳ್ಳುತ್ತಿರುವುದರಿಂದ ಗುಣಮಟ್ಟದ ಶಿಕ್ಷಣಕ್ಕೆ ಒತ್ತಡ ಹೆಚ್ಚಾಗುತ್ತಿದೆ. ಹೊರ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡ ಶಿಕ್ಷಕರನ್ನು ನಂಬಿಕೊಂಡು ಗುಣಮಟ್ಟದ ಶಿಕ್ಷಣ ನೀಡುವುದು ಕಷ್ಟವಾಗಿದೆ. ಆದರೂ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಫಲಿತಾಂಶ ಪ್ರಕಟವಾದ ಶಾಲಾ ಕಾಲೇಜುಗಳ ಗುತ್ತಿಗೆ ಶಿಕ್ಷಕರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತಿದೆ. ಖಾಯಂ ಶಿಕ್ಷಕರನ್ನು ಬೇರೆ ಸ್ಥಳಗಳಿಗೆ ನಿಯೋಜನೆ ಮಾಡುವ ಮೂಲಕ ಬಡ್ತಿಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದು ಪಾಲಿಕೆ ಶಿಕ್ಷಣ ವಿಭಾಗ ಸಹಾಯ ಆಯುಕ್ತ ಉಮೇಶ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಹಲವಾರು ವರ್ಷದಿಂದ ಪಾಲಿಕೆ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಸೇವಾ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಮುಂದಿನ ಕ್ರಮ ಕೈಗೊಳ್ಳಬೇಕಿದೆ ಅಂತ ಪಾಲಿಕೆ ಶಿಕ್ಷಣ ವಿಭಾಗದ ಸಹಾಯ ಆಯುಕ್ತ ಉಮೇಶ್ ತಿಳಿಸಿದ್ದಾರೆ.
ಶಿಕ್ಷಕರ ನೇಮಕಾತಿ ಪ್ರಸ್ತಾವನೆ
ಪ್ರಾಥಮಿಕ ಶಾಲೆ ಸಹ ಶಿಕ್ಷಕರು 65
ಪ್ರೌಢ ಶಾಲೆ ಸಹ ಶಿಕ್ಷಕರು 139
ದೈಹಿಕ ಶಿಕ್ಷಕರು 6
ಒಟ್ಟು 210
ಟೇಬಲ್
ಪಾಲಿಕೆ ಶಾಲಾ-ಕಾಲೇಜು ವಿವರ
ನರ್ಸರಿ 91
ಪ್ರಾಥಮಿಕ ಶಾಲೆ 16
ಪ್ರೌಢ ಶಾಲೆ 33
ಪದವಿ ಪೂರ್ವ ಕಾಲೇಜು 17
ಪದವಿ 4
ಸ್ನಾತಕೋತ್ತರ ಪದವಿ 2
ಒಟ್ಟು 162