Asianet Suvarna News Asianet Suvarna News

Bengaluru: ಚಕ್ರತೀರ್ಥ ಸಮಿತಿಯ ಪಠ್ಯಕ್ಕೆ ಬರಗೂರು ರಾಮಚಂದ್ರಪ್ಪ ಕಿಡಿ

ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಯು ಸಂಪೂರ್ಣ ಮೂಲಭೂತವಾದದ ಮನಸ್ಥಿತಿಯಲ್ಲಿ ಪಠ್ಯ ಪರಿಷ್ಕರಿಸಿದ್ದು, ಇದಕ್ಕೆ ರಾಜ್ಯಾದ್ಯಂತ ಎದ್ದಿರುವ ಪ್ರತಿರೋಧ ಹಾಗೂ ಮಕ್ಕಳಿಗೆ ಬೋಧಿಸಬಾರದೆಂಬ ಕೂಗಿಗೆ ನನ್ನ ಸಹಮತವಿದೆ ಎಂದು ಈ ಹಿಂದಿನ ಪಠ್ಯ ಪರಿಷ್ಕರಣಾ ಸಮಿತಿಯ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. 

baraguru ramachandrappa outraged rohit chakratheertha over textbook rivision gvd
Author
Bangalore, First Published Jul 7, 2022, 2:08 PM IST

ಬೆಂಗಳೂರು (ಜು.07): ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿಯು ಸಂಪೂರ್ಣ ಮೂಲಭೂತವಾದದ ಮನಸ್ಥಿತಿಯಲ್ಲಿ ಪಠ್ಯ ಪರಿಷ್ಕರಿಸಿದ್ದು, ಇದಕ್ಕೆ ರಾಜ್ಯಾದ್ಯಂತ ಎದ್ದಿರುವ ಪ್ರತಿರೋಧ ಹಾಗೂ ಮಕ್ಕಳಿಗೆ ಬೋಧಿಸಬಾರದೆಂಬ ಕೂಗಿಗೆ ನನ್ನ ಸಹಮತವಿದೆ ಎಂದು ಈ ಹಿಂದಿನ ಪಠ್ಯ ಪರಿಷ್ಕರಣಾ ಸಮಿತಿಯ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ. 

ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯು ಬುಧವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಕರ್ನಾಟಕ ಪಠ್ಯ ಪುಸ್ತಕ ಪರಿಷ್ಕರಣೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಕ್ರತೀರ್ಥ ಸಮಿತಿಯು ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ಒಬ್ಬ ದಲಿತ ಲೇಖಕನ ಪಾಠವನ್ನೂ ಬಿಟ್ಟಿಲ್ಲ.  ಮಹಿಳಾ ಲೇಖಕಿಯರ ಶೇ.90ರಷ್ಟು ಪಾಠಗಳನ್ನು ಕೈಬಿಟ್ಟಿದೆ. ಸಾವಿತ್ರಿ ಬಾ ಪುಲೆ, ಅಬ್ಬಕ್ಕದೇವಿ, ಯಶೋಧರ ದಾಸಪ್ಪ ಅವರಂತಹ ಮಹಿಳಾ ಸಮಾಜ ಸುಧಾಕರು, ಸ್ವಾತಂತ್ರ್ಯ ಹೋರಾಟಗಾರ್ತಿಯರ ಕುರಿತ ಪಾಠಗಳನ್ನು ಉಳಿಸಿಲ್ಲ. ಬೌದ್ಧ, ಜೈನ ಸೇರಿ ಬೇರೆ ಬೇರೆ ಧರ್ಮಗಳ ಪಾಠಗಳನ್ನು ತೆಗೆದಿದ್ದಾರೆ. 

Davanagere: ಪಠ್ಯಪುಸ್ತಕ ಲೋಪದ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಕನಕ ಸ್ವಾಮೀಜಿ

ಜಾತಿ, ವರ್ಣ, ಅಸ್ಪೃಶ್ಯತೆ, ವರ್ಗ ಸಮಾಜದ ವಿರುದ್ಧ ಹೋರಾಟದ ವಿಚಾರಗಳು ಹಾಗೂ ಇವುಗಳ ವಿರುದ್ಧ ದನಿಯಾಗಿರುವ ಲೇಖಕರ ಎಲ್ಲ ಪಾಠಗಳನ್ನು ತೆಗೆಯಲಾಗಿದೆ. ಒಟ್ಟಾರೆ ಇದು ಮೂಲಭೂತವಾದಿ ಮನಸ್ಥಿತಿಯಲ್ಲಿ ಮಾಡಿರುವ ದಲಿತ, ಮಹಿಳಾ, ಅಲ್ಪಸಂಖ್ಯಾತ ವಿರೋಧಿ ಪರಿಷ್ಕರಣೆಯಾಗಿದೆ. ಇದರ ವಿರುದ್ಧದ ಹೋರಾಟಕ್ಕೆ ನನ್ನ ಸಾಂಸ್ಕೃತಿಕ ಸಹಮತವಿದೆ ಎಂದರು. ಸಂವಾದದಲ್ಲಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್‌, ಪ್ರೊ.ರಾಜಪ್ಪ ದಳವಾಯಿ, ಬಿ.ಎಂ.ಹನೀಫ್‌, ಕೆ.ಆರ್‌.ಸೌಮ್ಯ, ಜಿ.ಟಿ.ಪಾಟೀಲ್‌ ವಿಷಯ ಮಂಡಿಸಿದರು.

ನಾವು ಗೂಡ್ಸೆ ಧರ್ಮ ಅನುಸರಿಸಲ್ಲ: ರೋಹಿತ್‌ ಚಕ್ರತೀರ್ಥ ನಮ್ಮ ಜೊತೆ ತಾಂತ್ವಿಕ ಸೈದ್ಧಾಂತಿಕ ಚರ್ಚೆ ನಡೆಸಲಾಗದೆ ವೈಯಕ್ತಿಕ ತೇಜೋವಧೆಗಿಳಿದರು. ಬರಗೂರು ಗ್ಯಾಂಗ್‌, ದೇಶದ್ರೋಹಿ ಎಂಬೆಲ್ಲಾ ಪಟ್ಟಕಟ್ಟುವ ಪ್ರಯತ್ನ ನಡೆಯಿತು. ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದವರಿಂದ, ನಾಡಗೀತೆಯನ್ನು ಅವಮಾನ ಮಾಡಿದವರಿಂದ ದೇಶಪ್ರೇಮದ ಪ್ರಮಾಣ ಪತ್ರ ಪಡೆಯಬೇಕಾಗಿಲ್ಲ. ಇಂಗ್ಲಿಷ್‌, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷಾ ವಿಷಯಗಳ ಪಠ್ಯಗಳಲ್ಲೂ ಕನ್ನಡ ನಾಡು, ನುಡಿ, ಸಾಹಿತ್ಯ, ಸಾಹಿತಿಗಳ ಕುರಿತು ಕನಿಷ್ಠ ಒಂದೊಂದು ಪಾಠವನ್ನು ನಮ್ಮ ಸಮಿತಿ ಸೇರಿಸಿತ್ತು. ಇದು ನಮ್ಮ ದೇಶಪ್ರೇಮ, ನಾಡ ಪ್ರೇಮ ಅಲ್ವಾ? ನಾವು ಗಾಂಧಿ, ವಿವೇಕಾನಂದರ ಹಿಂದೂ ಧರ್ಮ ಅನುಸರಿಸುವವರೇ ವಿನಃ ಗೂಡ್ಸೆ ಧರ್ಮ ಅನುಸರಿಸುವವರಲ್ಲ ಎಂದು ಬರಗೂರು ರಾಮಚಂದ್ರಪ್ಪ ತೀಕ್ಷ ತಿರುಗೇಟು ನೀಡಿದರು.

ಕೊನೆಗೆ ಯಾವ್ಯಾವ ಪಠ್ಯ ಪರಿಷ್ಕರಣಾ ಸಮಿತಿಗಳು ಎಷ್ಟೆಷ್ಟುವೆಚ್ಚ ಮಾಡಿವೆ ಎಂಬುದನ್ನು ಹೋಲಿಕೆ ಮಾಡಿ ನೈತಿಕವಾಗಿ ಕುಗ್ಗಿಸುವ ಕೆಲಸ ನಡೆದಿದೆ. ನಾವು ಕುಗ್ಗುವುದಿಲ್ಲ. ಕೇವಲ ಮೂರುವರೆ ತಿಂಗಳು ಕೆಲಸ ಮಾಡಿದ ಚಕ್ರತೀರ್ಥ ಅವರ ಒಂದು ಸಮಿತಿಗೂ, ನನ್ನ ಸರ್ವಾಧ್ಯಕ್ಷತೆಯಲ್ಲಿ 52 ಸಮಿತಿಗಳು ಮಾಡಿದ 153 ಪಠ್ಯ ಪುಸ್ತಕಗಳ ಪರಿಷ್ಕರಣೆಗೂ ಆಗಿರುವ ವೆಚ್ಚವನ್ನು ತಾಳೆ ಹಾಕುವುದೇ ಪ್ರಜ್ಞಾಪೂರ್ವಕವಾಗಿ ದಾರಿ ತಪ್ಪಿಸುವ ಕೆಲಸ. ನಮ್ಮ ಸಮಿತಿ ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ಪಠ್ಯ ಪರಿಷ್ಕರಣೆಗೆ ನೂರಾರು ಸಭೆ ನಡೆಸಿದೆ. ಸಮಿತಿಯಿಂದ ಹೊರಗಿರುವ ತಜ್ಞರೊಂದಿಗೂ 30ಕ್ಕೂ ಹೆಚ್ಚು ಸಮಾಲೋಚನೆ ನಡೆಸಿದೆ. ಅವರಿಗೆ ವಾಹನ ಭತ್ಯೆ, ಸಭಾ ಭತ್ಯೆ, ಟಿಟಿಪಿ ವೆಚ್ಚ ಎಲ್ಲವೂ ಸೇರಿಸಲಾಗಿದೆ. ಆದರೆ, ಚಕ್ರತೀರ್ಥ ಸಮಿತಿ ಎಷ್ಟುಸಭೆ ಮಾಡಿದೆ, ಯಾರಾರ‍ಯರ ಅಭಿಪ್ರಾಯ ಸಂಗ್ರಹಿಸಿದೆ ಬಹಿರಂಗಪಡಿಸಿಲಿ ಎಂದು ಸವಾಲು ಹಾಕಿದರು.

ಸದಸ್ಯರ ಅಭಿಪ್ರಾಯ ಮೀರಿ ಪರಿಷ್ಕರಣೆ: ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ಸುರೇಶ್‌ ಕುಮಾರ್‌ ಶಿಕ್ಷಣ ಸಚಿವರಾಗಿದ್ದಾಗ ಕೆಲವು ಪಠ್ಯಪುಸ್ತಕಗಳ ಪರಿಷ್ಕರಣೆಗೆ ರಚಿಸಲಾದ ಚಕ್ರತೀರ್ಥ ಸಮಿತಿಯು ಇಡೀ ಪಠ್ಯವನ್ನೇ ಪರಿಷ್ಕರಿಸಿ ಕೂತಿತ್ತು. ಅದರಲ್ಲೂ ಕನ್ನಡ ಪಠ್ಯಪುಸ್ತಕಗಳನ್ನು ಸಮಿತಿಯ ಶೇ.99ರಷ್ಟುಸದಸ್ಯರು ಅಭಿಪ್ರಾಯಕ್ಕೆ ವಿರುದ್ಧವಾಗಿ ಬದಲಿಸಿತ್ತು. ನಂತರ ಬಂದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಸರ್ಕಾರದ ಆದೇಶವಿಲ್ಲದೆ ಪರಿಷ್ಕರಿಸಿರುವ ಪಠ್ಯಕ್ರಮವನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳುವ ಕನಿಷ್ಠ ಪ್ರಜ್ಞೆ ಇಲ್ಲದೆ ಅದಕ್ಕೆ ಘಟನೋತ್ತರ ಅನುಮತಿ ನೀಡುವ ಅವಿವೇಕ ತೋರಿದ್ದರಿಂದ ಇಷ್ಟೆಲ್ಲಾ ವಿವಾದಕ್ಕೆ ಕಾರಣವಾಗಿದೆ ಎಂದರು.

ಭಾರತದಲ್ಲಿ ಇದುವರೆಗಿನ ಎಲ್ಲ ಪಠ್ಯ ರಚನೆ ಮತ್ತು ಪರಿಷ್ಕರಣೆಗೆ ಸ್ಪಷ್ಟಚೌಕಟ್ಟು ಹಾಕಲಾಗಿದೆ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ನಮ್ಮ ಪಠ್ಯಕ್ರಮ ರಚಿಸುತ್ತಾ ಬರಲಾಗಿತ್ತು. ಆದರೆ, ಬಿಜೆಪಿ ಸರ್ಕಾರ ಕೇಂದ್ರ-ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗೆಲ್ಲಾ ಶಿಕ್ಷಣ ಇಲಾಖೆಗೆ ಹಾರ್ಡ್‌ಕೋರ್‌ ಆರೆಸ್ಸೆಸ್‌ನ ಹಾರ್ಡ್‌ಕೋರ್‌ ಹಿಂದೂ ಮೂಲಭೂತವಾದಿಗಳನ್ನೇ ನೇಮಿಸಿ ಪಠ್ಯ ರಚನಾ ಚೌಕಟ್ಟು ಬದಲಿಸುವುದು, ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಪಠ್ಯ ರಚಿಸುವ, ಪರಿಷ್ಕರಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶಕ್ಕೆ ದೊಡ್ಡ ಗಂಡಾಂತರವಿದೆ ಎಂದರು.

ಕುವೆಂಪು ಕವನಗಳನ್ನು ನಾಡಗೀತೆ, ರೈತಗೀತೆ ಮಾಡಿದ್ದು ಬಿಜೆಪಿ: ಸದಾನಂದಗೌಡ

ಪಠ್ಯ ಮರು ಪರಿಷ್ಕರಣೆ ಸರಿಯಾಗಿದೆ ಜಾರಿ ಮಾಡಿ ಎಂದು ಸಾಮಾಜಿಕವಾಗಿ ರಾಜ್ಯದ ಯಾವೊಂದು ಸಂಘ ಸಂಸ್ಥೆಗಳಿಂದಲೂ ಅಭಿಪ್ರಾಯ ಬಂದಿಲ್ಲ. ಹಾಗಾಗಿ ಸರ್ಕಾರ ಹಠಮಾರಿತನ ಬಿಟ್ಟು ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಪರಿಷ್ಕೃತ ಪಠ್ಯವನ್ನು ಹಿಂಪಡೆಯಬೇಕು. ಮತ್ತೆ ಪಠ್ಯ ಮರು ಪರಿಷ್ಕರಿಸುವವರೆಗೆ ಬರಗೂರು ರಾಮಚಂದ್ರಪ್ಪ ಅವರ ಸಮಿತಿಯ ಪಠ್ಯವನ್ನೇ ಮುಂದುವರೆಸುವ ಮೂಲಕ ವಿಶ್ವಾಸಾರ್ಹತೆ ಹೆಚ್ಚಿಸಿಕೊಳ್ಳುವ ಕೆಲಸ ಮಾಡಬೇಕು. ತನ್ಮೂಲಕ ಮುಂದಿನ ಪೀಳಿಗೆಯ ಭವಿಷ್ಯವನ್ನು ಕಾಪಾಡಬೇಕು.
-ನಾಗಮೋಹನದಾಸ್‌, ಹೈಕೋರ್ಚ್‌ ನಿವೃತ್ತ ನ್ಯಾಯಮೂರ್ತಿ.

Follow Us:
Download App:
  • android
  • ios