ಬೆಂಗಳೂರು(ನ.14): ಕೋವಿಡ್‌ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಪ್ರಕ್ರಿಯೆಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಿದ್ದು, ಅರ್ಜಿ ಸಲ್ಲಿಕೆಯಿಂದ ಹಿಡಿದು ಸೀಟು ಹಂಚಿಕೆವರೆಗೂ ಎಲ್ಲವನ್ನೂ ಆನ್‌ಲೈನ್‌ನಲ್ಲೇ ನಡೆಸಲು ತೀರ್ಮಾನಿಸಿದೆ.

ಈಗಾಗಲೇ ವಿವಿಯ ಜ್ಞಾನಭಾರತಿ ಕ್ಯಾಂಪಸ್‌, ರಾಮನಗರ ಪಿಜಿ ಕೇಂದ್ರ ಮತ್ತು ಸಂಯೋಜಿತ ಕಾಲೇಜುಗಳಲ್ಲಿನ 2020-21ನೇ ಸಾಲಿನ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು ನ.21 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಈಗಾಗಲೇ ಸ್ನಾತಕೋತ್ತರ ಕಾನೂನು ಪದವಿ ಕೋರ್ಸುಗಳಿಗೆ ಆನ್‌ಲೈನ್‌ನಲ್ಲೇ ಪ್ರವೇಶ ಪ್ರಕ್ರಿಯೆ ಆರಂಭಿಸಿರುವ ವಿವಿಯು ಇದರ ಯಶಸ್ಸಿನ ಆಧಾರದ ಮೇಲೆ ಉಳಿದ ಸ್ನಾತಕೋತ್ತರ ಕೋರ್ಸುಗಳ ಪ್ರವೇಶವನ್ನೂ ಆನ್‌ಲೈನ್‌ನಲ್ಲೇ ನಡೆಸಲು ನಿರ್ಧರಿಸಿದೆ. ಇದಕ್ಕೆ ಅಗತ್ಯ ಸಾಫ್ಟ್‌ವೇರ್‌ ಕೂಡ ಸಿದ್ಧಪಡಿಸಿಕೊಂಡಿದ್ದೇವೆ ಎಂದು ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದ ಪಿಜಿ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನ

ಆನ್‌ಲೈನ್‌ ಪ್ರಕ್ರಿಯೆ ಹೇಗೆ:

ಆನ್‌ಲೈನ್‌ ಪ್ರವೇಶ ಪ್ರಕ್ರಿಯೆ ವೃತ್ತಿಪರ ಕೋರ್ಸುಗಳ ಪ್ರವೇಶದ ಮಾದರಿಯಲ್ಲಿರುತ್ತದೆ. ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಅರ್ಹತಾ ಪಟ್ಟಿಯನ್ನು ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಲಾಗಿನ್‌ ಐಡಿ ನೀಡಿ ಅದರ ಮೂಲಕ ಅವರು ಸೀಟು ಆಯ್ಕೆಗೆ ಅವಕಾಶ ನೀಡಲಾಗುತ್ತದೆ. ನಂತರ ಅಣಕು ಹಂಚಿಕೆ ನಡೆಸಿ ಆಯ್ಕೆಯನ್ನು ಬದಲಾಯಿಸಲು ಅವಕಾಶ ನೀಡಲಾಗುತ್ತದೆ. ಕೊನೆಯದಾಗಿ ಅರ್ಹತೆಯ ಆಧಾರದ ಮೇಲೆ ನೈಜ ಸೀಟು ಹಂಚಿಕೆಯನ್ನು ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗುತ್ತದೆ. ಇದರ ಸಂದೇಶವನ್ನು ವಿದ್ಯಾರ್ಥಿಗಳ ಮೊಬೈಲ್‌, ಇಮೇಲ್‌ಗೆ ಕಳುಹಿಸಿ ದಾಖಲಾತಿಗೆ ಸೂಚಿಸಲಾಗುತ್ತದೆ.