ಬೆಂಗಳೂರು(ನ.09): ಬೆಂಗಳೂರು ವಿಶ್ವವಿದ್ಯಾಲಯವು ಜ್ಞಾನಭಾರತಿ ಕ್ಯಾಂಪಸ್‌, ರಾಮನಗರ ಸ್ನಾತಕೋತ್ತರ ಕೇಂದ್ರ ಹಾಗೂ ವಿವಿಯ ಎಲ್ಲಾ ಸಂಯೋಜಿತ ಕಾಲೇಜುಗಳಲ್ಲಿ 2020-21ನೇ ಸಾಲಿನಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ನಿಕಾಯಗಳಲ್ಲಿ ಲಭ್ಯವಿರುವ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ.

ವಿವಿಯ ವೆಬ್‌ಸೈಟ್‌ www.bangaloreuniversity.ac.in ಮೂಲಕ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದಾಗಿದ್ದು ನ.6ರಿಂದಲೇ ಈ ಸಂಬಂಧ ಪ್ರತ್ಯೇಕ ಪೋರ್ಟಲ್‌ ತೆರೆಯಲಾಗಿದ್ದು ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಕೆಗೆ ನ.21 ಮತ್ತು 200 ರು. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಕೆಗೆ ನ.30 ಕೊನೆಯ ದಿನವಾಗಿರುತ್ತದೆ. ಬಂದ ಅರ್ಜಿಗಳನ್ನು ಪರಿಶೀಲಿಸಿ ಡಿ.4ರಂದು ಜೇಷ್ಠತಾ ಪಟ್ಟಿ ಪ್ರಕಟಿಸಲಾಗುವುದು. ಈ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿ.7ರವರೆಗೆ ಅವಕಾಶ ಇರುತ್ತದೆ. ಆಕ್ಷೇಪಣೆ ಪರಿಶೀಲಿಸಿ ಡಿ.9ಕ್ಕೆ ಅಂತಿಮ ಜೇಷ್ಠತಾ ಪಟ್ಟಿ ಪ್ರಕಟಿಸಲಾಗುವುದು ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

ಠಾಣೆ ಮೆಟ್ಟಿಲೇರಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ-ಕುಲಸಚಿವರ ತಿಕ್ಕಾಟ

ಕಲಾನಿಕಾಯ (ಜ್ಞಾನಭಾರತಿ ಕ್ಯಾಂಪಸ್‌) - ಎಂ.ಎ. ಕನ್ನಡ, ಇಂಗ್ಲೀಷ್‌, ಹಿಂದಿ, ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಂವಹನ, ತತ್ವಶಾಸ್ತ್ರ, ರಾಜ್ಯಶಾಸ್ತ್ರ, ದೃಶ್ಯಕಲೆ, ಪ್ರದರ್ಶನ ಕಲೆ ಸೇರಿದಂತೆ 24ಕ್ಕೂ ಹೆಚ್ಚು ಕೋರ್ಸ್‌ಗಳು, ವಿಜ್ಞಾನ ನಿಕಾಯ- ಎಂಎಸ್ಸಿ ಅನ್ವಯಿಕ ತಳಿಶಾಸ್ತ್ರ, ಅನ್ವಯಿಕ ಭೂಗರ್ಭಶಾಸ್ತ್ರ, ಜೀವರಸಾಯನಶಾಸ್ತ್ರ, ಜೀವತಂತ್ರಜ್ಞಾನ, ಸಸ್ಯಶಾಸ್ತ್ರ, ರಸಾಯನಶಾಸ್ತ್ರ, ಗಣಕ ವಿಜ್ಞಾನ, ವಿದ್ಯುನ್ಮಾನ ಮಾಧ್ಯಮ ಸೇರಿ 50ಕ್ಕೂ ಹೆಚ್ಚು ಕೋರ್ಸ್‌ಗಳು, ವಾಣಿಜ್ಯ ನಿಕಾಯ- ಎಂ.ಕಾಂ, ಎಂ.ಕಾಂ (ಎಫ್‌ಎ), ಎಂಟಿಟಿಎಂ. ಶಿಕ್ಷಣ ನಿಖಾಯ- ಎಂ.ಎಡ್‌, ಬಿಪಿಎಡ್‌ ಮತ್ತು ಎಂಪಿಎಡ್‌ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅಲ್ಲದೆ, ರಾಮನಗರ ಕೇಂದ್ರದಲ್ಲಿ ಆರಂಭಿಸಿರುವ ವಿವಿಧ ಪಿಜಿ ಕೋರ್ಸ್‌ಗಳು, ಜ್ಞಾನಭಾರತಿಯಲ್ಲಿ ವಿವಿಧ ಪಿಜಿ ಡಿಪ್ಲೊಮಾ ಕೋರ್ಸುಗಳಿಗೂ ಅರ್ಜಿ ಆಹ್ವಾನಿಸಿದ್ದು, ಡಿಪ್ಲೊಮಾ ಕೋರ್ಸುಗಳಿಗೆ ಕನಿಷ್ಠ 20 ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಮಾತ್ರ ನಡೆಸಲಾಗುತ್ತದೆ. ಇಲ್ಲದಿದ್ದಲ್ಲಿ ಪ್ರವೇಶ ಶುಲ್ಕ ವಾಪಸ್‌ ನೀಡಲಾಗುತ್ತದೆ ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ವಿವಿಯ ಸಂಯೋಜನೆ ಪಡೆದಿರುವ 54 ಕಾಲೇಜುಗಳಲ್ಲಿ ಲಭ್ಯವಿರುವ ಕೋರ್ಸುಗಳ ಮಾಹಿತಿಯನ್ನೂ ವಿವಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ವಿವರಗಳಿಗೆ ವಿವಿಯ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.