Asianet Suvarna News Asianet Suvarna News

ಠಾಣೆ ಮೆಟ್ಟಿಲೇರಿದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ-ಕುಲಸಚಿವರ ತಿಕ್ಕಾಟ

ಆಡಳಿತಾತ್ಮಕ ವಿಚಾರಗಳಿಗೆ ಕುಲಪತಿ ಮತ್ತು ಕುಲಸಚಿವರ ನಡುವೆ ತಿಕ್ಕಾಟ|  ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಂತಕ್ಕೂ ತಲುಪಿದ ವೈಮನಸ್ಸು| ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸದಂತೆ ಕಠಿಣ ಸೂಚನೆ ನೀಡುವಂತೆ ಕೋರಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದ ವಿವಿಯ ಕುಲಸಚಿವ ಐಎಎಸ್‌ ಅಧಿಕಾರಿ ಕೆ.ಜ್ಯೋತಿ| 

Bengaluru Uiniversity Registrar Letter to CM and Governor grg
Author
Bengaluru, First Published Oct 9, 2020, 10:50 AM IST
  • Facebook
  • Twitter
  • Whatsapp

ಬೆಂಗಳೂರು(ಅ.09): ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಸ್ಥಾನಕ್ಕೆ ಐಎಎಸ್‌ ಅಧಿಕಾರಿ ನೇಮಕವಾದ ಬಳಿಕ ಕುಲಪತಿ ಮತ್ತು ಕುಲಸಚಿವರ ನಡುವೆ ಆಡಳಿತಾತ್ಮಕ ವಿಚಾರಗಳಿಗೆ ತಿಕ್ಕಾಟ ದಿನೇ ದಿನೆ ಹೆಚ್ಚುತ್ತಿದ್ದು, ಇದೀಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಅಲ್ಲದೆ, ಕುಲಾಧಿಪತಿಗಳಾದ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಂತಕ್ಕೂ ತಲುಪಿದೆ.

ಬೆಂ.ವಿವಿ ಕುಲಪತಿ ಪ್ರೊ.ಕೆ.ಆರ್‌. ವೇಣುಗೋಪಾಲ್‌, ಕುಲಸಚಿವರು ನಿಯಮಾನುಸಾರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸುತ್ತಿದ್ದಾರೆ. ಕುಲಪತಿ ಅವರ ಚಿತಾವಣೆಯಿಂದ ನನ್ನ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆಯೊಡ್ಡುವ ಪ್ರಯತ್ನಗಳು ನಡೆದಿವೆ. ವಿಶ್ವವಿದ್ಯಾಲಯ ಅಧಿನಿಯಮ ಅನ್ವಯ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸದಂತೆ ಕಠಿಣ ಸೂಚನೆ ನೀಡುವಂತೆ ಕೋರಿ ವಿವಿಯ ಕುಲಸಚಿವರಾದ ಐಎಎಸ್‌ ಅಧಿಕಾರಿ ಕೆ.ಜ್ಯೋತಿ ಅವರು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಈ ಪತ್ರದ ಪ್ರತಿಯನ್ನು ಕುಲಾಧಿಪತಿಗಳಾದ ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯಕಾರ್ಯದರ್ಶಿ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ ಅವರಿಗೂ ಸಲ್ಲಿಸಿದ್ದಾರೆ. ಜ್ಞಾನಭಾರತಿ ಪೊಲೀಸ್‌ ಠಾಣೆಗೂ ದೂರಿನ ಪ್ರತಿ ನೀಡಿ ಕುಲಪತಿ ವಿರುದ್ಧ ಕ್ರಮಕ್ಕೆ ಕೋರಿದ್ದಾರೆ.

ಯಾಕೀ ತಿಕ್ಕಾಟ?: 

ಸಹ ಪ್ರಾಧ್ಯಾಪಕರ, ಪ್ರಾಧ್ಯಾಪಕರ ಮುಂಬಡ್ತಿ ಪ್ರಕರಣ ಹಾಗೂ ಶಿಕ್ಷಕರ, ಇತರೆ ಸಿಬ್ಬಂದಿ ಸೇವಾ ವಿಷಯ ಮತ್ತು ಮುಂಬಡ್ತಿಗಳಲ್ಲಿ ನಿಯಮ ಬಾಹಿರ ಕ್ರಮ ಕೈಗೊಳ್ಳಲಾಗಿದೆ. ಯುವಿಸಿಇ ಎಂಜಿನಿಯರಿಂಗ್‌ ಕಾಲೇಜಿನ ಶಿಕ್ಷಕೇತರ ಸಿಬ್ಬಂದಿ ವಿವಿ ವಿರುದ್ಧ ಹೈಕೋರ್ಟ್‌ಗೆ ಹೋಗಿ ತಮ್ಮನ್ನು ಶಿಕ್ಷಕರೆಂದು ಪರಿಗಣಿಸಿ ಹೆಚ್ಚುವರಿ ಸೇವಾವಧಿ ಮತ್ತು ಎಐಸಿಟಿಇ ವೇತನ ಶ್ರೇಣಿ ನೀಡಬೇಕೆಂದು ಆದೇಶ ತಂದಿದ್ದಾರೆ. ಈ ಹಿಂದೆ ಯಾವ ಪ್ರಕರಣದಲ್ಲೂ ವಕೀಲರು ಸರಿಯಾಗಿ ವಾದ ಮಂಡಿಸಿಲ್ಲ. ಮೇಲ್ಮನವಿಗೂ ಕ್ರಮ ಕೈಗೊಂಡಿಲ್ಲ. ಇನ್ನು, ರಾಜ್ಯದ ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಲ್ಯಾಬ್‌ ಸಿಬ್ಬಂದಿಯನ್ನು ಶಿಕ್ಷಕೇತರ ಸಿಬ್ಬಂದಿ ಎಂದೇ ಪರಿಗಣಿಸಿದ್ದರೆ ಯುವಿಸಿಯಲ್ಲಿ ವ್ಯತಿರಿಕ್ತವಾಗಿ ನಡೆದುಕೊಳ್ಳಲಾಗುತ್ತಿದೆ. ಇದರಲ್ಲಿ ಅಪೀಲು ದಾಖಲಿಸಲು ಮಂಡಿಸುತ್ತಿದ್ದರೂ ಕುಲಪತಿಗಳು ಅದನ್ನು ತಿರಸ್ಕರಿಸುತ್ತಿದ್ದಾರೆ. ಸರ್ಕಾರಕ್ಕೆ ಸಲ್ಲಿಸಬೇಕಾದ ಟಿಪ್ಪಣಿಗಳನ್ನೂ ತಮ್ಮ ಹಂತದಲ್ಲೇ ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಕುಲಸಚಿವ ಹುದ್ದೆಯ ಕಾರ್ಯಗಳಿಗೆ ಕುಲಪತಿ ಮೂಗು ತೂರಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೆಂಗಳೂರು ವಿವಿಯಲ್ಲಿ ಒಂದೇ ಕುರ್ಚಿಗಾಗಿ ಇಬ್ಬರ ಫೈಟ್; ವಿದ್ಯಾರ್ಥಿಗಳಿಗೆ ಸಂಕಷ್ಟ

ಕಳೆದ 47 ವರ್ಷಗಳ ನನ್ನ ವೃತ್ತಿ ಜೀವನದಲ್ಲಿ ನಾನು ಯಾರ ಕರ್ತವ್ಯಕ್ಕೂ ಅಡ್ಡಿಪಡಿಸಿಲ್ಲ. ಈಗಲೂ ಅಷ್ಟೇ ಯಾರ ಕೆಲಸಕ್ಕೂ ಅಡ್ಡಿಪಡಿಸುವ ಕೆಲಸ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ. ವಿಶ್ವವಿದ್ಯಾಲಯದ ಶೈಕ್ಷಣಿಕ, ಆಡಳಿತ ವಿಚಾರಗಳಲ್ಲಿ ವಿವಿಯ ಸಿಂಡಿಲೇಟ್‌ನಲ್ಲಿ ಕೈಗೊಳ್ಳಲಾಗಿರುವ ನಿರ್ಣಯಗಳೇ ಅಂತಿಮ. ಅದರಂತೆ ಕರ್ತವ್ಯ ನಿರ್ವಹಿಸಿಕೊಂಡು ಬಂದಿದ್ದೇನೆ. ಲೋಪಗಳಾಗಿದ್ದರೆ ಸರ್ಕಾರ ಪರಿಶೀಲಿಸಲಿದೆ ಎಂದು ಬೆಂ.ವಿವಿ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ಅವರು ತಿಳಿಸಿದ್ದಾರೆ. 

ದೂರಿನಲ್ಲಿ ಏನಿದೆ: 

ಕುಲಪತಿ ಅವರು ವಿಶ್ವವಿದ್ಯಾಲಯದ ಅಧಿನಿಯಮಗಳ ವಿರುದ್ಧವಾದ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ವಿವಿಯ ಆಡಳಿತದಲ್ಲಿ ಕುಲಸಚಿವರಿಗೆ ಅಧಿಕಾರವಿಲ್ಲ, ಕೇವಲ ಕುಲಪತಿ ಆದೇಶ ಪಾಲಿಸಬೇಕೆಂದು ಹೇಳುವ ಮೂಲಕ ಕುಲಸಚಿವರ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ. ಸಿಬ್ಬಂದಿಗಳ ಕರ್ತವ್ಯ ಲೋಪಗಳಿಗೆ ನೀಡುವ ನೋಟಿಸ್‌ಗಳನ್ನು ವಾಪಸ್‌ ಪಡೆದು ಕುಲಸಚಿವ ಹುದ್ದೆಯ ಘನತೆಗೆ ಧಕ್ಕೆ ತರುತ್ತಿದ್ದಾರೆ. ವಿವಿಯ ಶಿಕ್ಷಕೇತರ ನೌಕರರ ಸಂಘ/ ಅನುಸೂಚಿತ ಜಾತಿ, ಪಂಗಡಗಳ ಶಿಕ್ಷಕೇತರ ಸಂಘಗಳ ಹೆಸರು ಬಳಕೆ ಮಾಡುತ್ತಾ ನನಗೆ ಬೆದರಿಕೆ ಒಡ್ಡುವಂತಹ ಸೂಚನೆಗಳನ್ನು ಸಿಬ್ಬಂದಿ ಮೂಲಕ ತಿಳಿಸಿ ಭಯದ ವಾತಾವರಣ ಸೃಷ್ಟಿಗೆ ಪ್ರಯತ್ನಿಸಿದ್ದಾರೆ. ಕುಲಪತಿಗಳ ನಡವಳಿಕೆಯಿಂದ ನನ್ನ ಮತ್ತು ನನ್ನ ಕುಟುಂಬದ ರಕ್ಷಣೆಗೆ ಧಕ್ಕೆ ಬರಬಹುದೆಂಬ ಭಾವನೆ ಇದೆ. ಹಾಗಾಗಿ ಸರ್ಕಾರದ ಗಮನಕ್ಕೆ ಈ ವಿಷಯ ತರುತ್ತಿದ್ದೇನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
 

Follow Us:
Download App:
  • android
  • ios