ಯಾದಗಿರಿ: ಮಕ್ಕಳ ಸಮವಸ್ತ್ರ ಅನುದಾನದಲ್ಲೂ ಗೋಲ್ಮಾಲ್..!
* ಕಳಪೆ ಗುಣಮಟ್ಟದ ಸಮವಸ್ತ್ರ
* ಪ್ರತಿ ವಿದ್ಯಾರ್ಥಿಗೆ 250 ರು.ಗಳ ದರದಲ್ಲಿ ಖರೀದಿಸಿ ನೀಡಬೇಕು ಅನ್ನೋದು ಸರ್ಕಾರದ ಆದೇಶ
* ಪರಿಚಿತ ಕಂಪನಿಯೊಂದರ ಜೊತೆ ಒಳ ಒಪ್ಪಂದ ಮಾಡಿಕೊಂಡ ತಾಲೂಕು ಶಿಕ್ಷಣಾಧಿಕಾರಿ
ಯಾದಗಿರಿ(ಸೆ.25): 1ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ(Uniform) ವಿತರಣೆ ಅನುದಾನದಲ್ಲಿ ಲಕ್ಷಾಂತ ರು.ಗಳ ಹಣ ದುರ್ಬಳಕೆಯಾಗಿದ್ದು, ತಮಗೆ ಪರಿಚಿತರೊಬ್ಬರ ಟೆಕ್‌ಸ್ಟೈಲ್ ಕಂಪನಿಯಿಂದ ಶಿಕ್ಷಣ ಇಲಾಖೆಯ ತಾಲೂಕು ಅಧಿಕಾರಿಗಳು ಕಿಕ್ ಬ್ಯಾಕ್ ಪಡೆದ್ದಿದಾರೆಂಬ ಗಂಭೀರ ಆರೋಪಗಳು ಮೂಡಿಬಂದಿವೆ.
2019-20ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಶಾಲೆಯ 1 ರಿಂದ 8ನೇ ತರಗತಿವರೆಗೆ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತವಾಗಿ 2ನೇ ಜೊತೆ ಸಮವಸ್ತ್ರವನ್ನು ವಿತರಿಸುವ ಬಗ್ಗೆ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ, ಪ್ರತಿ ವಿದ್ಯಾರ್ಥಿಗೆ 250 ರು.ಗಳ ದರದಲ್ಲಿ ಖರೀದಿಸಿ ನೀಡಬೇಕು ಅನ್ನೋದು ಸರ್ಕಾರದ ಆದೇಶ. ಆದರೆ, ಯಾದಗಿರಿ ತಾಲೂಕಿನಲ್ಲಿ ಸಮವಸ್ತ್ರ ವಿತರಣೆ ಬಗ್ಗೆ ಅಪಸ್ವರಗಳು ಕೇಳಿಬಂದಿವೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ತಮಗೆ ಪರಿಚಿತ, ಕಲಬುರಗಿ(Kalaburagi) ಜಿಲ್ಲೆಯ ಸೇಡಂನಲ್ಲಿನ ಟೆಕ್‌ಸ್ಟೈಲ್‌ಸ್ ಕಂಪನಿಯೊಂದರ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕಳಪೆ ಗುಣಮಟ್ಟದ ಸಮವಸ್ತ್ರಗಳನ್ನು ವಿತರಿಸುತ್ತಿರುವ ಮೂಲಕ, ಸರ್ಕಾರದ ಆದೇಶವನ್ನೇ ಉಲ್ಲಂಸಿ ಹಸ್ತಕ್ಷೇಪ ಮಾಡುತ್ತಿದ್ದಾರೆಂದು ಖುದ್ದು ಶಿಕ್ಷಕರ ವಲಯದಲ್ಲೇ ಅಸಮಾಧಾನ ಮೂಡಿಸಿದೆ. ಯಾದಗಿರಿ ಜಿಲ್ಲೆಯಲ್ಲಿ, 1 ರಿಂದ 8ನೇ ತರಗತಿವರೆಗಿನ ಸರ್ಕಾರಿ ಶಾಲೆಗಳಲ್ಲಿ 1,50,650 ಮಕ್ಕಳಿದ್ದಾರೆ. ಇದರಲ್ಲಿ ಯಾದಗಿರಿ ತಾಲೂಕಿನ 45,097 ಮಕ್ಕಳಿದ್ದು(Children), ಸದ್ಯ ಯಾದಗಿರಿ ತಾಲೂಕಿನಲ್ಲಿ ಮಾತ್ರ ಇಂತಹ ಒತ್ತಾಯಪೂರ್ವಕ ವಿತರಣೆ ನಡೆಯುತ್ತಿದೆ ಎನ್ನಲಾಗಿದೆ.
6-12ನೇ ಕ್ಲಾಸ್ ವಾರದಲ್ಲಿ 5 ದಿನ : 100% ಹಾಜರಿ ಓಕೆ
ಅರ್ಹ ವಿದ್ಯಾರ್ಥಿಗಳ ಸಮವಸ್ತ್ರ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಹೊಲಿದ ಸಮವಸ್ತ್ರಗಳನ್ನು 250 ರು.ಗಳ ವೆಚ್ಚದ ದರದಲ್ಲಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ)ಗೆ ನೀಡಿದೆ. ಆದರೆ, ತಾಲೂಕು ಶಿಕ್ಷಣಾಧಿಕಾರಿಗಳು ತಮಗೆ ಪರಿಚಿತ ಕಂಪನಿಯೊಂದರ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದು, ಕಳಪೆ ಮಟ್ಟದ ಸಮವಸ್ತ್ರಗಳನ್ನು ವಿತರಿಸುತ್ತಿದ್ದಾರೆ ಎಂಬ ಆರೋಪವಿದೆ.
ಇದು ಬಹುತೇಕ ಶಿಕ್ಷಕರ ವಲಯದಲ್ಲಿ ಅಸಮಾಧಾನ ಮೂಡಿಸಿದೆಯಂತೆ. 250 ರು.ಗಳಂತೆ, ಒಟ್ಟು 45097 ಮಕ್ಕಳ ಸುಮಾರು ಒಂದು ಕೋಟಿ ಹನ್ನೊಂದು ಲಕ್ಷ ರು.ಗಳಿಗೂ ಹೆಚ್ಚು ಮೊತ್ತದ ಹಣವನ್ನು ಇದಕ್ಕೆ ಖರ್ಚಾಗಲಿದೆ. ಮಕ್ಕಳ ಅಳತೆ ಪಡೆಯದೆ, ಯಾವ ನಿಯಮವನ್ನೂ ಪಾಲಿಸದೆ ಈ ಹಣವನ್ನು ಲಪಟಾಯಿಸುವ ಸಂಚು ನಡೆದಿದ್ದು, ಪಾಲಕರುಗಳೂ ಸಹ ಶಿಕ್ಷಕರೆದುರು ಸಮವಸ್ತ್ರಗಳ ಬಗ್ಗೆ ಮೌಖಿಕ ದೂರು ನೀಡಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮೇಲಧಿಕಾರಿಗಳ ಬಗ್ಗೆ ಗಮನ ಸೆಳೆಯಲು ಮುಂದಾಗಿದೆ. ಅಲ್ಲದೆ, ಕೆಲವೇ ದಿನಗಳಲ್ಲಿ 2020-21 ನೇ ಸಾಲಿನ ಅನುದಾನ ಸಹ ಬಿಡುಗಡೆಯಾಗಲಿದ್ದು, ಇದರಲ್ಲಿಯೂ ವಂಚನೆ ನಡೆಯಬಹುದು ಎಂಬ ಅನುಮಾನ ಸಂಘದಲ್ಲಿ ಮೂಡಿದೆ.
ಶಿಕ್ಷಣಾಧಿಕಾರಿಗಳಿಗೆ ಕಿಕ್ ಬ್ಯಾಕ್ ಆರೋಪ ಸರ್ಕಾರಿ ಹಣವನ್ನು ಲಪಟಾಯಿಸುವ ಸಂಚು ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ವಿತರಿಸಲಾಗಿದೆ ಎಂಬ ಮೌಖಿಕ ದೂರುಗಳು ಶಿಕ್ಷಕರಿಗೆ ಬರುತ್ತಿವೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಯಾದಗಿರಿ ತಾಲೂಕು ಅಧ್ಯಕ್ಷ ವೆಂಕಪ್ಪ ತಿಳಿಸಿದ್ದಾರೆ.