Asianet Suvarna News Asianet Suvarna News

ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಅಗ್ನಿಪಥ್‌ ಸೈನಿಕ ಶಾಲೆ: ಸಚಿವ ಕೋಟ

ದೇಶದ ರಕ್ಷಣೆಯಲ್ಲಿ ಭಾಗವಹಿಸಲಿಚ್ಛಿಸುವ ಯುವಜನರಿಗಾಗಿಯೇ ಕೇಂದ್ರ ಸರ್ಕಾರ ಅಗ್ನಿಪಥ್‌ ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕೆ ಪೂರಕವಾಗಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಯುವಜನತೆಗೆ ಇದರ ಲಾಭ ಪಡೆಯಬೇಕು ಎಂದ ಎಸ್‌.ಅಂಗಾರ 

Agnipath Sainik School in every district in Karnataka Says Minister Kota Shrinivas Poojari grg
Author
First Published Sep 6, 2022, 11:32 PM IST

ಉಡುಪಿ(ಸೆ.06): ದೇಶದ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ಪ್ರತಿ ಮನೆಯಿಂದ ಕನಿಷ್ಠ ಒಬ್ಬರಾದರೂ ಸೈನ್ಯಕ್ಕೆ ಸೇರುವುದಕ್ಕೆ ಮುಂದೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ ಹೇಳಿದರು. ಅವರು ಸೋಮವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಕೋಟಿ ಚೆನ್ನಯ - ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದ ರಕ್ಷಣೆಯಲ್ಲಿ ಭಾಗವಹಿಸಲಿಚ್ಛಿಸುವ ಯುವಜನರಿಗಾಗಿಯೇ ಕೇಂದ್ರ ಸರ್ಕಾರ ಅಗ್ನಿಪಥ್‌ ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕೆ ಪೂರಕವಾಗಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಯುವಜನತೆಗೆ ಇದರ ಲಾಭ ಪಡೆಯಬೇಕು ಎಂದರು.

ಇನ್ಫೋಸಿಸ್ ಜೊತೆ ಉನ್ನತ ಶಿಕ್ಷಣ ಇಲಾಖೆ ಒಡಂಬಡಿಕೆ, 12300 ಉಚಿತ ಕೋರ್ಸ್

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ಯುವಕರಿಗೆ ಸೈನಿಕ ಪೂರ್ವ ತರಬೇತಿ ನೀಡಲು ಉಡುಪಿಯಲ್ಲಿ ಕೋಟಿ ಚೆನ್ನಯ್ಯ ತರಬೇತಿ ಶಾಲೆ, ದ.ಕನ್ನಡ ಜಿಲ್ಲೆಯಲ್ಲಿ ವೀರ ರಾಣಿ ಅಬ್ಬಕ್ಕ ತರಬೇತಿ ಶಾಲೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಂಜಾ ನಾಯ್ಕ ತರಬೇತಿ ಶಾಲೆ ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲಿಯೂ ವೀರವ್ಯಕ್ತಿಗಳ ಹೆಸರಿನಲ್ಲಿ ಉಚಿತ ಊಟ - ವಸತಿಯೊಂದಿಗೆ ತರಬೇತಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ, ಸೇನಾ ನೇಮಕಾತಿಯಲ್ಲಿ ಯಾವುದೇ ರೀತಿಯ ಮೀಸಲಾತಿಗಳು ಇರುವುದಿಲ್ಲ ಅರ್ಹತೆಯೊಂದೇ ಮಾನದಂಡ, ಆದ್ದರಿಂದ ಇಂತಹ ತರಬೇತಿಗಳು ಆಯ್ಕೆಗೆ ಸಹಾಯ ಮಾಡುತ್ತವೆ ಎಂದರು.

ಸೇನಾ ಶಿಬಿರಕ್ಕೆ ಆಯ್ಕೆಯಾದ ಶಿಕ್ಷಣಾರ್ಥಿಗಳಿಗೆ ಅರ್ಹತಾ ಪತ್ರವನ್ನು ಹಾಗೂ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಿಸ್ಡ್ ಕಾಲ್ ಕೊಡಿ; ಪಾಠ ಕೇಳಿ ಖ್ಯಾತಿಯ ಶಿಕ್ಷಕ ಉಮೇಶ್‌ಗೆ ರಾಷ್ಟ್ರಪತಿಯಿಂದ ಪ್ರಶಸ್ತಿ ಪ್ರದಾನ

ನಿವೃತ್ತ ಸೇನಾಧಿಕಾರಿ ಕ್ಯಾ.ಗಣೇಶ್‌ ಕಾರ್ಣಿಕ್‌, ಕ.ಅ.ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿಯ ಅಧ್ಯಕ್ಷ ಉದಯಕುಮಾರ್‌ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್‌ ಕೊಡ್ಗಿ, ಉ.ನ.ಅ.ಪ್ರಾಧಿಕಾರದ ಅಧ್ಯಕ್ಷ ಮನೋಹರ್‌ ಎಸ್‌. ಕಲ್ಮಾಡಿ, ಹಿಂ.ವರ್ಗಗಳ ಇಲಾಖೆಯ ಪ್ರ.ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್‌. ಮತ್ತಿತರರು ಉಪಸ್ಥಿತರಿದ್ದರು.

ಮಹಿಳೆಯರಿಗೆ ಪ್ರತ್ಯೇಕ ತರಬೇತಿ ಶಾಲೆ-ಕೋಟ

ಅಗ್ನಿವೀರರಾಗಿ ಸೇವೆ ಸಲ್ಲಿಸಿದ ರಾಜ್ಯದ ಯುವಕರಿಗೆ ರಾಜ್ಯದ ಸರ್ಕಾರಿ ಹುದ್ಧೆಗಳಲ್ಲಿ ಶೇ.50 ರಷ್ಟು ಮೀಸಲಾತಿ ನೀಡುವ ಮತ್ತು ಮಹಿಳೆಯರಿಗೆ ಪ್ರತ್ಯೇಕ ತರಬೇತಿ ಶಾಲೆ ಆರಂಭಿಸುವ ಚಿಂತನೆ ಇದೆ ಅಂತ ಹಿ.ವ.ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.  
 

Follow Us:
Download App:
  • android
  • ios