Asianet Suvarna News Asianet Suvarna News

ಕನ್ನಡದಲ್ಲಿ ಎಂಜಿನಿಯರಿಂಗ್‌ ಶಿಕ್ಷಣಕ್ಕೆ ಕ್ರಮ: ಸಿಎಂ ಬೊಮ್ಮಾಯಿ

*  ಹುಬ್ಬಳ್ಳಿಯಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮಕ್ಕೆ ಚಾಲನೆ
*  ಕನ್ನಡ ಬಾವುಟ ಹಾರಿಸಿ, ಕನ್ನಡ ಹಾಡು ಹಾಡಿ ಸಂಭ್ರಮಿಸಿದ ಸಿಎಂ
*  ಭಾಷೆ ಬೆಳೆಯಬೇಕಾದರೆ ಬಳಕೆ ಮುಖ್ಯ
 

Action for Engineering Education in Kannada Says CM Basavaraj Bommai grg
Author
Bengaluru, First Published Oct 29, 2021, 6:17 AM IST
  • Facebook
  • Twitter
  • Whatsapp

ಹುಬ್ಬಳ್ಳಿ(ಅ.29):  ಕನ್ನಡ(Kannada) ಭಾಷೆಗೆ ಉಜ್ವಲ ಭವಿಷ್ಯ ನೀಡುವ ಜವಾಬ್ದಾರಿ ನಮ್ಮದ್ದೆಲ್ಲರದ್ದಾಗಿದ್ದು ಕನ್ನಡ ಅಭಿವೃದ್ಧಿಗೆ ಸರ್ಕಾರ ಸದಾ ಬದ್ಧ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಘೋಷಿಸಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಎಂಜನಿಯರಿಂಗ್‌(Engineering) ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿರುವ ಅವರು ಪದವಿಯಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯದ ಬಗ್ಗೆ ಕಾನೂನಾತ್ಮಕ ಹೋರಾಟ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.

ನಗರದ ಡಾ.ಡಿ.ಎಸ್‌.ಕರ್ಕಿ ಕನ್ನಡಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಮತ್ತು ಹುಬ್ಬಳ್ಳಿ-ಧಾರವಾಡ(Dharwad) ಮಹಾನಗರ ಪಾಲಿಕೆ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಲಕ್ಷ ಕಂಠಗಳಿಂದ ಕನ್ನಡದ ಶ್ರೇಷ್ಠತೆ ಸಾರುವ ‘ಗೀತ ಗಾಯನ’, ‘ಮಾತಾಡ್‌ ಮಾತಾಡ್‌ ಕನ್ನಡ’ ಅಭಿಯಾನಕ್ಕೆ ಕನ್ನಡದ ಹಾಡು(Kananda Song) ಹಾಡುವ ಹಾಗೂ ಕನ್ನಡ ಬಾವುಟ ಹಾರಿಸುವ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪುರಾತನ ಭಾಷೆಯಾಗಿರುವ(AncientLanguage) ಕನ್ನಡ ವಿಶ್ವದ ಶ್ರೀಮಂತ ಭಾಷೆಗಳಲ್ಲಿ ಒಂದಾಗಿದೆ. ಕನ್ನಡ ಭಾಷೆಗೆ ಭವ್ಯ ಇತಿಹಾಸವಿದೆ(History). ಇದಕ್ಕೆ ಉಜ್ವಲ ಭವಿಷ್ಯ ನೀಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಕನ್ನಡ ಉಳಿದರೆ ನಾವು ಉಳಿಯುತ್ತೇವೆ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಎಲ್ಲರೂ ಕನ್ನಡ ಭಾಷೆಯನ್ನೇ ಬಳಕೆ ಮಾಡಬೇಕು ಎಂದರು.

ಶಿಕ್ಷಣ ವ್ಯವಸ್ಥೆ ಡಿಜಿಟಲ್ ರೂಪಾಂತರ; ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವರು

ಹೊಸ ಶಿಕ್ಷಣ ನೀತಿಯಲ್ಲಿ(New Education Policy) ಮಾತೃಭಾಷೆಗೆ ಹೆಚ್ಚಿನ ಮಹತ್ವ ಕೊಟ್ಟು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಹಂತದಲ್ಲಷ್ಟೇ ಅಲ್ಲದೇ ಪದವಿ ಕಲಿಕೆಯಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಅದರ ಬಗ್ಗೆ ಕಾನೂನಾತ್ಮಕ ಹೋರಾಟ ಜಾರಿಯಲ್ಲಿದೆ. ಎಂಜಿನಿಯರಿಂಗ್‌ ಪದವಿಯನ್ನೂ ಕನ್ನಡದಲ್ಲೇ ಕಲಿಯುವಂತೆ ಆಗಲಿದೆ. ಈಗಾಗಲೇ 15 ಎಂಜಿನಿಯರಿಂಗ್‌ ಕಾಲೇಜುಗಳು ಕನ್ನಡದಲ್ಲಿ ಕಲಿಸಲು ಮುಂದೆ ಬಂದಿವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯವಾಗುತ್ತದೆ ಎಂದು ತಿಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡ ಭಾಷೆ ಬೆಳವಣಿಗೆಗೆ ಮಾಡುವ ಪ್ರತಿಯೊಂದು ಶಿಫಾರಸುಗಳನ್ನು ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧ ಎಂದರು.

ಭಾಷೆ ಬೆಳೆಯಬೇಕಾದರೆ ಬಳಕೆ ಮುಖ್ಯ: 

ನಾವು ಕನ್ನಡಿಗರು(Kannadigas) ಎಂಬುದು ನಮ್ಮ ಹೆಮ್ಮೆಯ ಗುರುತಾಗಿರಬೇಕು. ಯಾವ ಭಾಷೆ ತನ್ನ ಬೇರುಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತದೆಯೋ ಅದನ್ನು ಕಡೆಗಣಿಸಲು ಯಾರಿಂದಲೂ ಸಾಧ್ಯವಿಲ್ಲ. ಕಡೆಗಣನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಭಾಷೆ ಬೆಳೆಯಬೇಕಾದರೆ ಅದರ ಬಳಕೆ ಮುಖ್ಯ. ದೇಶದ ಹಲವು ಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆ ಉತ್ತುಂಗಕ್ಕೆ ಏರುವಂತೆ ಮಾಡುವುದು ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ನಾವು ಸಮರ್ಥವಾಗಿ ನಿಭಾಯಿಸಿದರೆ ಮುಂದಿನ ಪೀಳಿಗೆಗೆ ನಮ್ಮ ಶ್ರೀಮಂತ ಭಾಷೆ ಉಳಿಸಿಕೊಡಲು ಸಾಧ್ಯ. ಇದನ್ನೇ ನಮ್ಮ ಹಿಂದಿನವರು ಅಚ್ಚುಕಟ್ಟಾಗಿ ಮಾಡಿ ನಮಗೆ ಸಿರಿವಂತ ಭಾಷೆ ಕೊಟ್ಟು ಹೋಗಿದ್ದಾರೆ ಎಂದರು.
ಮಾತಾಡ್‌ ಮಾತಾಡ್‌ ಕನ್ನಡ ಎಂಬ ಒಂದು ವಾರದ ಅಭಿಯಾನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ಹೊರ ರಾಜ್ಯದಿಂದ ಬರುವ ಜನರಿಗೆ ಅತ್ಯಂತ ಪ್ರೀತಿಪೂರ್ವಕವಾಗಿ ನಮ್ಮ ಭಾಷೆಯನ್ನು ಕಲಿಸಿಕೊಡುವ ಕೆಲಸ ಮಾಡಬೇಕು ಎಂದರು.

ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವ ವಿಶೇಷ ಕೊಡುಗೆ

ಈ ಸಂದರ್ಭದಲ್ಲಿ ಕುವೆಂಪು ಅವರ ಬಾರಿಸು ಕನ್ನಡ ಡಿಂಡಿಮವಾ, ಡಾ.ಕೆ.ಎಸ್‌.ನಿಸಾರ್‌ ಅಹ್ಮದ್‌ ಅವರ ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹಂಸಲೇಖ ಅವರ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಎಂಬ ಗೀತೆಗಳನ್ನು ಸಾಮೂಹಿಕವಾಗಿ ಹಾಡಲಾಯಿತು. ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಯ ಉಳಿವು ಬೆಳವಣಿಗೆಯ ಸಂಕಲ್ಪ ಬೋಧಿಸಿದರು.

ಬಾವುಟ ಹಿಡಿದು, ಹಾಡು ಹಾಡಿದ ಸಿಎಂ

ಮೊದಲಿಗೆ ನಾಡಗೀತೆ ಬಳಿಕ ಕನ್ನಡ ಡಿಂಡಿಮವಾ, ಜೋಗದ ಸಿರಿ ಬೆಳಕಿನಲ್ಲಿ ಹಾಡಿಗೆ ಧ್ವನಿಗೂಡಿಸಿದ ಸಿಎಂ ಬೊಮ್ಮಾಯಿ, ಬಳಿಕ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡುವಾಗ ತಾವೂ ಸ್ವತಃ ಗಟ್ಟಿಧ್ವನಿಯಿಂದ ಹಾಡಿದರು ಅಲ್ಲದೇ, ಕನ್ನಡ ಬಾವುಟವನ್ನು ಹಾಡು ಮುಗಿಯುವ ವರೆಗೂ ಹೆಮ್ಮೆಯಿಂದ ಹಾರಿಸುವ ಮೂಲಕ ಸಂಭ್ರಮಿಸಿದರು. ಬಳಿಕ ತಮ್ಮ ಭಾಷಣ ಮುಗಿದ ಮೇಲೆ ಮತ್ತೊಮ್ಮೆ ಎಲ್ಲರೂ ಸೇರಿಕೊಂಡು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡೋಣ’ ಎಂದು ಕೋರಿಕೆ ವ್ಯಕ್ತಪಡಿಸಿದರು. ಆಮೇಲೆ ಮತ್ತೊಮ್ಮೆ ಈ ಹಾಡನ್ನು ಹಾಡಲಾಯಿತು.

Follow Us:
Download App:
  • android
  • ios