5-8ನೇ ಕ್ಲಾಸ್ ಮಕ್ಕಳ ಪರೀಕ್ಷೆ, ಫಲಿತಾಂಶಕ್ಕೆ ಸಂಬಂಧಿಸಿ ಕೇಂದ್ರದಿಂದ ಬಹುದೊಡ್ಡ ನಿರ್ಧಾರ ಪ್ರಕಟ
5 ಮತ್ತು 8ನೇ ಕ್ಲಾಸ್ ಮಕ್ಕಳ ಪರೀಕ್ಷೆ- ಫಲಿತಾಂಶಕ್ಕೆ ಸಂಬಂಧಿಸಿ ಕೇಂದ್ರದಿಂದ ಬಹುದೊಡ್ಡ ನಿರ್ಧಾರ ಪ್ರಕಟವಾಗಿದೆ. ಏನದು?
ಕಳೆದ ವರ್ಷ 5, 8 ಮತ್ತು 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಸಂಬಂಧ ಆಗಿರುವ ಗಲಾಟೆ, ಕಾನೂನು ಹೋರಾಟ, ಪರೀಕ್ಷೆಯ ಸಮಯದಲ್ಲಿಯೇ ನ್ಯಾಯಾಲಯಗಳ ವಿಭಿನ್ನ ತೀರ್ಪುಗಳು ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು ದಂಗು ಬಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ. ಮೊದಲಿಗೆ ಸರ್ಕಾರ ಈ ಮೂರು ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡುತ್ತೇನೆ ಎಂದಿದ್ದು, ಕೊನೆಗೆ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದು, ಪರೀಕ್ಷೆಯ ಸಮಯದಲ್ಲಿ ಸರ್ಕಾರದ ಆದೇಶಕ್ಕೆ ತಡೆ ಬಂದಿದ್ದು, ನಂತರ ಪರೀಕ್ಷೆಗೆ ಅನುಮತಿ ಕೊಟ್ಟಿದ್ದು, ಮತ್ತೊಮ್ಮೆ ಪರೀಕ್ಷೆ ಮಾಡಬಾರದು ಎಂದಿದ್ದು, ವಿದ್ಯಾರ್ಥಿಗಳು ಮತ್ತು ಪಾಲಕರಲ್ಲಿ ತಲ್ಲಣ ಸೃಷ್ಟಿಸಿತ್ತು. ಸದ್ಯ ಈ ಗಲಾಟೆಗೆ ತೆರೆ ಬಿದ್ದಿದೆ.
5 ಮತ್ತು 8ನೇ ಕ್ಲಾಸ್ ವಿದ್ಯಾರ್ಥಿಗಳ ಜೀವನದಲ್ಲಿ ಬಹುದೊಡ್ಡ ಘಟ್ಟ ಎಂದೇ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಉನ್ನತ ತರಗತಿಗಳಿಗೆ ಹೋದಾಗ ಅಲ್ಲಿ ಪಬ್ಲಿಕ್ ಎಕ್ಸಾಮ್ ಭಯ ಪಡಬಾರದು ಎನ್ನುವ ಕಾರಣಕ್ಕೆ ಈ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ಮಾಡಲು ಯೋಚನೆ ಮಾಡಲಾಗಿತ್ತು. ಅದೇನೇ ಇದ್ದರೂ ಸಾಮಾನ್ಯವಾಗಿ, ಪ್ರೈಮರಿ ತರಗತಿಯಲ್ಲಿ ಕಲಿಯುವ ಮಕ್ಕಳಿಗೆ ಫೇಲ್ ಮಾಡುವುದು ಬಹಳ ಕಡಿಮೆ. ಆದರೂ ಕೆಲವು ಶಾಲೆಗಳು ಈ ಮಕ್ಕಳನ್ನು ಫೇಲ್ ಮಾಡುವುದೂ ಇದೆ. ಇದೇ ಕಾರಣಕ್ಕೆ ಇದೀಗ ಕೇಂದ್ರ ಸರ್ಕಾರ ಬಹುದೊಡ್ಡ ನಿರ್ಧಾರವನ್ನು ಪ್ರಕಟಿಸಿದೆ.
ಏಳೂವರೆ ಕೋಟಿ ಸಾಮ್ರಾಜ್ಯದ ಒಡೆಯ ಮುಂಬೈನ ಈ ಭಿಕ್ಷುಕ! ಈತನ ರೋಚಕ ಸ್ಟೋರಿ ಇಲ್ಲಿದೆ...
5 ಮತ್ತು 8ನೇ ತರಗತಿಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಎರಡು ತಿಂಗಳ ಒಳಗಡೆ ಮರು ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಒಂದು ವೇಳೆ ಮರುಪರೀಕ್ಷೆಯಲ್ಲಿ ಅವರು ಪುನಃ ಅನುತ್ತೀರ್ಣರಾದರೆ ಅವರಿಗೆ ಮುಂದಿನ ತರಗತಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲದ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ. ಮಕ್ಕಳ ಕಲಿಕೆಯ ಫಲಿತಾಂಶವನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದೆ. ಯಾವುದೇ ಶಾಲೆಯು ವಿದ್ಯಾರ್ಥಿಗಳನ್ನು ಎಂಟನೆಯ ತರಗತಿಯವರೆಗೆ ವಿದ್ಯಾರ್ಥಿಯನ್ನು ಹೊರಹಾಕುವುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ನಿರ್ಧಾರದಿಂದ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುವ ಸಾಧ್ಯತೆ ಕಡಿಮೆ ಇರುತ್ತದೆ. ಒಂದು ವೇಳೆ ಯಾವುದಾದರೂ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ಅಂಥ ವಿದ್ಯಾರ್ಥಿಗಳು ಇನ್ನೊಂದು ವರ್ಷ ಕಾಯಬೇಕಿತ್ತು. ಕೆಲವು ಶಾಲೆಗಳು ಇಂಥ ವಿದ್ಯಾರ್ಥಿಗಳನ್ನು ಹೊರಕ್ಕೆ ಹಾಕಿರುವ ಉದಾಹರಣೆಗಳೂ ಇವೆ. ಆದ್ದರಿಂದ ಕೇಂದ್ರದ ಈ ನಿರ್ಧಾರದಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗಿದೆ. ಯಾವುದಾದರೂ ಕಾರಣಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗಿರದಿದ್ದರೆ ಅಥವಾ ಅನಾರೋಗ್ಯ, ಇನ್ನಿತರೇ ಕಾರಣಗಳಿಂದ ಅನುತ್ತೀರ್ಣರಾಗಿದ್ದರೆ ಅಂಥವರು ಅದೇ ಸಾಲಿನಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ, ಜೊತೆಗೆ ಶಾಲೆಯಿಂದ ಹೊರಕ್ಕೆ ಹಾಕುವ ಭಯದಿಂದಲೂ ಮುಕ್ತರಾಗಿರಲಿದ್ದಾರೆ.
ಪ್ಯಾನ್ ಕಾರ್ಡ್ ಬಳಕೆದಾರರೇ ಎಚ್ಚರ! 10 ಸಾವಿರ ದಂಡ ತಪ್ಪಿಸಿಕೊಳ್ಳಲು ಕೊನೆಯ ಅವಕಾಶ, ಇಲ್ಲಿದೆ ಡಿಟೇಲ್ಸ್