ಸಿಬಿಎಸ್‌ಇ ಸಿಲಬಸ್‌ ಹೊಂದಿದ ಶಾಲೆಯೆಂದು ಪೋಷಕರಿಂದ ಲಕ್ಷಾಂತರ ರೂ. ಹಣವನ್ನು ಪಡೆದು ಮಕ್ಕಳ ದಾಖಲಾಗಿ ಮಾಡಿಕೊಂಡಿರುವ ಆರ್ಕಿಡ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ 9 ಮತ್ತು 10 ನೇ ತರಗತಿ ನಡೆಯುತ್ತಿಲ್ಲ ಎಂದು ಡಿಡಿಪಿಐ ಹೇಳಿದ್ದಾರೆ.

ಬೆಂಗಳೂರು (ಜ.25): ಕೇಂದ್ರ ಸರ್ಕಾರದಿಂದ ಸೆಂಟ್ರಲ್‌ ಬೋರ್ಡ್‌ ಆಫ್‌ ಸೆಕೆಂಟರಿ ಎಜುಕೇಶನ್‌ (ಸಿಬಿಎಸ್‌ಇ) ಅನುಮತಿ ಪಡೆಯದಿದ್ದರೂ, ತಮ್ಮದು ಸಿಬಿಎಸ್‌ಇ ಸಿಲಬಸ್‌ ಹೊಂದಿದ ಶಾಲೆಯೆಂದು ಪೋಷಕರಿಂದ ಲಕ್ಷಾಂತರ ರೂ. ಹಣವನ್ನು ಪಡೆದು ಮಕ್ಕಳ ದಾಖಲಾಗಿ ಮಾಡಿಕೊಂಡಿರುವ ಆರ್ಕಿಡ್‌ ಇಂಟರ್‌ನ್ಯಾಷನಲ್‌ ಶಾಲೆಯ ಕರ್ಮಕಾಂಡ ಹೊರಬಿದ್ದಿದೆ. ಆದರೆ, ಶಾಲೆ ಪರಿಶೀಲನೆಗೆ ಬಂದಿರುವ ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ (ಡಿಡಿಪಿಐ) ಶಾಲೆಯಲ್ಲಿ 9 ಮತ್ತು 10 ನೇ ತರಗತಿ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಲಕ್ಷಾಂತರ ರೂ. ಹಣ ಪಾವತಿಸಿ ಮಕ್ಕಳನ್ನು ದಾಖಲು ಮಾಡಿರುವ ಪೋಷಕರು ಹಾಗೂ ಮಕ್ಕಳ ಭವಿಷ್ಯ ಅತಂತ್ರವಾಗಿದೆ. 

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಬೋರ್ಡ್‌ ಪರೀಕ್ಷೆಗಳು ಬಂದಾಗ ಕೆಲವು ಖಾಸಗಿ ಶಾಲೆಗಳು ಗೋಲ್‌ಮಾಲ್‌ ಮಾಡಿ ಲಕ್ಷಾಂತರ ರೂ. ಹಣ ವಸೂಲಿ ಮಾಡಿಕೊಂಡು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಂಕು ಬೂದಿ ಎರಚುತ್ತಿರುವ ಪ್ರಕರಣ ಪತ್ತೆಯಾಗುತ್ತಿದೆ. ನಿನ್ನೆಯೂ ಕೂಡ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿರುವ ನಾಗರಬಾವಿ ಆರ್ಕಿಡ್ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಸಿಬಿಎಸ್‌ಇ ಸಿಲೆಬಸ್‌ ಇದೆ ಎಂದು ಮಕ್ಕಳನ್ನ ಲಕ್ಷಾಂತರ ರೂ. ಶುಲ್ಕ ಪಾವತಿಸಿಕೊಂಡು ದಾಖಲು ಮಾಡಿಕೊಂಡಿದೆ. ಶಾಲೆಯಲ್ಲಿ ವರ್ಷಪೂರ್ತಿ ಸಿಬಿಎಸ್‌ಇ ಪಠ್ಯಕ್ರಮ ಆಧರಿಸಿ ಪಾಠ ಬೋಧನೆ ಮಾಡಿದ್ದು, ಈಗ ಪರೀಕ್ಷೆ ವೇಳೆ ರಾಜ್ಯದ ಸಿಲೆಬಸ್‌ ಆಧರಿಸಿ ಪರೀಕ್ಷೆ ಬರೆಯುವಂತೆ ಶಾಲೆ ಆಡಳಿತ ಮಂಡಳಿ ತಿಳಿಸಿತ್ತು. ಇದರಿಂದ ಆಕ್ರೋಶಗೊಂಡಿದ್ದ ಪೋಷಕರು ಶಾಲೆಯ ಮುಂದೆ ಪ್ರತಿಭಟನೆಗೆ ಮುಂದಾಗಿದ್ದರು.

ಸರ್ಕಾರದ ಅನುಮತಿ ಇಲ್ಲದ ಆರ್ಕಿಡ್‌ ಶಾಲೆ: ಸಿಬಿಎಸ್‌ಇ ಹೆಸರಲ್ಲಿ ಮಕ್ಕಳ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಶಾಲೆ

ಡಿಡಿಪಿಐ ಹೇಳಿಕೆಗೆ ಆತಂಕಗೊಂಡ ಪೋಷಕರು: ನಾಗರಬಾವಿಯ ಆರ್ಕಿಡ್‌ ಶಾಲೆಯ ಮುಂದೆ ಪೋಷಕರು ನಡೆಸಿದ ಪ್ರತಿಭಟನೆಗೆ ಮಣಿದು, ಸ್ಥಳಕ್ಕೆ ಬಂದ ಜಿಲ್ಲಾ ಶಿಕ್ಷಣ ಉಪನಿರ್ದೇಶಕ (DDPI) ಹಾಗೂ ಕ್ಷೇತ್ರ ಶಿಕ್ಷಣ ಅಧಿಕಾರಿ (BEO) ಶಾಲೆಯನ್ನು ಪರಿಶೀಲನೆ ಮಾಡಿದ್ದಾರೆ. ಡಿಡಿಪಿಐ ಬೈಲಾಂಜನಪ್ಪ ಅವರು ಶಾಲೆಯ ಆಡಳಿತ ಮಂಡಳಿ ಅವರೊಂದಿಗೆ ಚರ್ಚೆ ಮಾಡಿದ್ದಾರೆ. ನಂತರ ಶಾಲೆಯ ದಾಖಲೆಗಳನ್ನು ಪರಿಶೀಲನೆ ನಡೆಸಿದ ನಂತರ ಮಕ್ಕಳ ಪೋಷಕರೊಂದಿಗೆ ಮಾತನಾಡಿದ ಡಿಡಿಪಿಐ ಆರ್ಕಿಡ್‌ ಶಾಲೆಯಲ್ಲಿ 9 ಮತ್ತು 10 ನೇ ತರಗತಿ ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಉದ್ರಿಕ್ತಗೊಂಡ ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನಕ್ಕೊಂದು ಹೇಳಿಕೆ ಕೊಡುತ್ತಿರುವ ಅಧಿಕಾರಿಗಳು: ಆರ್ಕಿಡ್ ಶಾಲೆಗೆ ಬಂದಿದ್ದ ಶಿಕ್ಷಣ ಸಂಯೋಜಕ ಶ್ರೀರಂಗ ಅವರು ನಿನ್ನೆ 9 ಮತ್ತು 10ನೇ ತರಗತಿ ನಡೆಯುತ್ತಿತ್ತು ಎಂದು ಹೇಳಿದ್ದರು. ಆದರೆ, ಇಂದು ಡಿಡಿಪಿಐ ಬಂದು ತರಗತಿ ನಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಹೇಳಿಕೆಗಳೇ ಗೊಂದಲ ಸೃಷ್ಟಿ ಮಾಡುತ್ತಿದೆ. ದಿನಕ್ಕೊಂದು ಹೇಳಿಕೆ ಕೊಡೋ ಇಲಾಖೆ ಖಾಸಗಿ ಸಂಸ್ಥೆಗೆ ತಲೆಬಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇನ್ನು ಪೋಷಕರು ಶಾಲೆಯ ಒಳಗಡೆ ನುಗ್ಗಿ ಗಲಾಟೆ DDPI ಹಾಗೂ ಶಾಲೆ ಆಡಳಿತ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. 

ಲಂಚ ಪಡೆದು ಸುಮ್ಮನಾದರೇ ಡಿಡಿಪಿಐ: ಆರ್ಕಿಡ್‌ ಶಾಲೆಯಲ್ಲಿ 9 ಮತ್ತು 10ನೇ ತರಗತಿ ನಡೆಯುತ್ತಿಲ್ಲ ಎಂದು ಹೇಳಿದ ಡಿಡಿಪಿಐ ಬೈಲಾಂಜನಪ್ಪ ಅವರನ್ನ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಶಾಲೆಯ ಆಡಳಿತ ಮಂಡಳಿಯಿಂದ ಲಂಚ ತೆಗೆದುಕೊಂಡು ಸುಮ್ಮನಿದ್ದೀರಾ ಎಂದು ಕಿಡಿಕಾರಿದ್ದಾರೆ. ಶಾಲೆಯ ಪ್ರಿನ್ಸಿಪಲ್‌ ಬಳಿ ಮಕ್ಕಳ ದಾಖಲಾತಿಗಳನ್ನು ಪಡೆದು ಪರಿಶೀಲನೆ ಮಾಡಿ ಹೇಳುತ್ತೇನೆ ಎಂದು ಸಬೂಬು ಹೇಳುತ್ತಿದ್ದ BEO ಅವರನ್ನೂ ಪೋಷಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲೆಗೆ ಅನುಮತಿ ಇಲ್ಲದಿದ್ದರೂ ಇಷ್ಟ ದಿನ ಏನು ಮಾಡುತ್ತಿದ್ದೀರಿ.? ನೀವು ಈ ಶಾಲೆ ನಡೆಸಲು ಹೇಗೆ ಅನುಮತಿ ಕೊಟ್ಟಿದ್ದೀರಿ ಎಂದು ಕಿಡಿಕಾರಿದ್ದಾರೆ. 

7ನೇ ಕ್ಲಾಸ್‌ಗೆ ಶಾಲೆ ಬಿಟ್ಟು, ಯೂಟ್ಯೂಬ್‌ನಲ್ಲಿ ಖೋಟಾ ನೋಟು ಮಾಡೋದು ಕಲಿತ ಖದೀಮ..!

ತಾರಕಕ್ಕೆ ಏರುತ್ತಿರುವ ಗಲಾಟೆ: ಆರ್ಕಿಡ್‌ ಶಾಲೆಯ ಬಳಿ ನೂರಾರು ಮಕ್ಕಳ ಪೋಷಕರು ಜಮಾಯಿಸಿದ್ದು, ಮಕ್ಕಳ ಭವಿಷ್ಯ ಅತಂತ್ರವಾಗಲಿದೆ ಎಂದು ಆತಂಕಕ್ಕೆ ಒಳಗಾಗಿದ್ದಾರೆ. ವರ್ಷಪೂರ್ತಿ ಅಭ್ಯಾಸ ಮಾಡಿದ ಎಲ್ಲ ಪರಿಶ್ರಮ ಹಾಳಾಗುತ್ತದೆ. ಬೆವರು ಸುರಿಸಿ ದುಡಿದು, ಸಾಲ ಸೋಲ ಮಾಡಿ ಹೊಂದಿಸಿ ಲಕ್ಷಾಂತರ ರೂ. ಹಣವನ್ನು ಕಟ್ಟಿದ್ದರೂ ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ಹೀಗಾಗಿ, ಕ್ಷಣ ಕ್ಷಣಕ್ಕೂ ಪೋಷಕರ ಗಲಾಟೆ ತಾರಕಕ್ಕೆ ಏರುತ್ತಿದೆ. ಶಾಲೆಯಿಂದ ಹೊರ ಹೋಗುವಂತೆ ಪೋಷಕರ ಬಳಿ ಮನವಿ ಮಾಡುತ್ತಿದ್ದಾರೆ. ಇದಕ್ಕೆ ಕ್ಯಾರೇ ಅನ್ನದ ಹೆತ್ತವರು, ಡಿಡಿಪಿಐ ವಿರುದ್ಧ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ. ಶಾಲೆಯ ಆಡಳಿತ ಮಂಡಳಿಯವರು ಒಂದು ದಾಖಲೆ ತರಲು ಇಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಆದರೆ, ನಾವು ಮಕ್ಕಳ ಫೀಸ್ ಕಟ್ಟಿಲ್ಲ ಎಂದಾರೆ ಮೂಟೆಗಟ್ಟಲೆ ನೋಟಿಸ್‌ಗಳನ್ನು ಕಳುಹಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.