ಬಿಇ ಸೀಟು ರದ್ದಾಗಿ 9,500 ವಿದ್ಯಾರ್ಥಿಗಳು ಅತಂತ್ರ..!

ಶುಲ್ಕ ಪಾವತಿಸಿ ಬಿಇ ಸೀಟು ಕಾಯ್ದಿರಿಸಿದ್ದರೂ ರದ್ದು ಪಡಿಸಿದ ಕೆಇಎ, ವೈದ್ಯ ಸೀಟಿಗೆ ಶುಲ್ಕ ಕಟ್ಟಲಾಗದೆ ವಾಪಸ್‌ ಬಂದವರಿಗೆ ಬಿಇ ಸೀಟೂ ಇಲ್ಲ, ಸಚಿವ ಅಶ್ವತ್ಥ ಮೊರೆ ಹೋದ ವಿದ್ಯಾರ್ಥಿಗಳು

9500 Students Faces Problems Due to Cancel the BE Seat in Karnataka grg

ಬೆಂಗಳೂರು(ನ.30):  ಕರ್ನಾಟಕ ಪರೀಕ್ಷಾ ಪ್ರಾಧಿಕಾರದ(ಕೆಇಎ) ಎಡವಟ್ಟಿನಿಂದ ಸುಮಾರು 9500ಕ್ಕೂ ಹೆಚ್ಚು ಎಂಜಿನಿಯರಿಂಗ್‌ ಸೀಟುಗಳ ಆಕಾಂಕ್ಷಿಗಳಿಗೆ ಪ್ರವೇಶಾವಕಾಶವಿಲ್ಲದೆ ಡೋಲಾಯಮಾನವಾಗಿದೆ. ಇದರಿಂದ ಆಕ್ರೋಶಗೊಂಡ ಆ ವಿದ್ಯಾರ್ಥಿಗಳು ಮಲ್ಲೇಶ್ವರದ ಕೆಇಎ ಕಚೇರಿ ಮುಂದೆ ಜಮಾಯಿಸಿ ತಮಗಾಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರಿಗೂ ಪತ್ರ ಬರೆದು ತಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

ಈ ಮನವಿ ಪರಿಶೀಲಿಸಿದ ಸಚಿವರು ವಿದ್ಯಾರ್ಥಿಗಳು ಆಗ್ರಹಿಸಿರುವಂತೆ ಎಂಜಿನಿಯರಿಂಗ್‌ ಸೀಟು ಪ್ರವೇಶಕ್ಕೆ ಸಿಇಟಿ ಎರಡನೇ ಮುಂದುವರೆದ ಸುತ್ತಿನ ಕೌನ್ಸೆಲಿಂಗ್‌ ನಡೆಸಲು ಪರಿಶೀಲಿಸಬೇಕು. ನಿಯಮಾನುಸಾರ ಅಗತ್ಯ ಕ್ರಮ ವಹಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಗೆ ತಮ್ಮ ಖಾಸಗಿ ಕಾರ್ಯದರ್ಶಿ ಅವರ ಮೂಲಕ ಪತ್ರ ರವಾನಿಸಿ ಸೂಚನೆ ನೀಡಿದ್ದಾರೆ.

CET: ವಿದ್ಯಾರ್ಥಿಗಳಿಗೆ ಡಬಲ್‌ ಶುಲ್ಕದ ಹೊರೆ ಈ ವರ್ಷ ಇಲ್ಲ: ಸಚಿವ ಅಶ್ವತ್ಥ ನಾರಾಯಣ

ಏನಿದು ಎಡವಟ್ಟು?:

ಸಿಇಟಿ ಕೌನ್ಸೆಲಿಂಗ್‌ನಲ್ಲಿ ಎಂಜಿನಿಯರಿಂಗ್‌ ಸೀಟು ಆಯ್ಕೆ ಮಾಡಿಕೊಂಡು ಶುಲ್ಕವನ್ನೂ ಪಾವತಿಸಿದ್ದ ಒಂದಷ್ಟುವಿದ್ಯಾರ್ಥಿಗಳು ನೀಟ್‌ ರಾರ‍ಯಂಕಿಂಗ್‌ ಮೂಲಕ ವೈದ್ಯಕೀಯ ಸೀಟು ಪ್ರವೇಶಕ್ಕೆ ಅರ್ಹತೆ ಪಡೆದಿದ್ದರು. ಕೆಇಎ ನೀಡಿದ ಅವಕಾಶದ ಅನುಸಾರವೇ ಎಂಜಿನಿಯರಿಂಗ್‌ ಸೀಟನ್ನು ಕಾಯ್ದಿರಿಸಿ ಜತೆಗೆ ವೈದ್ಯಕೀಯ ಸೀಟು ಪ್ರವೇಶ ಕೌನ್ಸೆಲಿಂಗ್‌ನಲ್ಲೂ ಪಾಲ್ಗೊಂಡಿದ್ದರು.

ಈ ವೇಳೆ ವೈದ್ಯಕೀಯ ಸೀಟು ಹಂಚಿಕೆಯಾದ ವಿದ್ಯಾರ್ಥಿಗಳಿಗೆ ಮೊದಲು ಕಾಯ್ದಿರಿಸಿದ್ದ ಎಂಜಿನಿಯರಿಂಗ್‌ ಸೀಟನ್ನು ಕೆಇಎ ತಂತಾನೇ ರದ್ದುಪಡಿಸಿದೆ. ಆದರೆ, ಈಗ ವೈದ್ಯಕೀಯ ಸೀಟು ಪ್ರವೇಶಕ್ಕೆ ಇರುವ ದುಬಾರಿ ಶುಲ್ಕ ಪಾವತಿಸಲು ಸಾಧ್ಯವಾಗದ ಸಾವಿರಾರು ವಿದ್ಯಾರ್ಥಿಗಳು ವಾಪಸ್‌ ಎಂಜಿನಿಯರಿಂಗ್‌ ಸೀಟು ಪಡೆಯಲು ಬಂದಾಗ, ಕೆಇಎ ರದ್ದುಪಡಿಸಿದ್ದರಿಂದ ಸೀಟು ಪಡೆಯಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಂಜಿನಿಯರಿಂಗ್‌ ಸೀಟು ಶುಲ್ಕ 10% ಹೆಚ್ಚಳಕ್ಕೆ ಸರ್ಕಾರ ಸಿದ್ಧತೆ?

ವಿದ್ಯಾರ್ಥಿಯೊಬ್ಬರು ಹೇಳಿದ ಪ್ರಕಾರ, ವೈದ್ಯಕೀಯ ಸೀಟು ಆಯ್ಕೆಗೆ ಅವಕಾಶ ನೀಡಿದಾಗ ನಮಗೆ ಶುಲ್ಕದ ಮಾಹಿತಿ ನೀಡಿರಲಿಲ್ಲ. ಸೀಟು ಆಯ್ಕೆ ಮಾಡಿಕೊಂಡ ಬಳಿಕ ದುಬಾರಿ ಶುಲ್ಕದ ಅರಿವಾಗಿದೆ. ಲಕ್ಷಾಂತರ ರು. ಶುಲ್ಕ ಪಾವತಿಸುವ ಚೈತನ್ಯ ನಮ್ಮ ಕುಟುಂಬಕ್ಕೆ ಇಲ್ಲ. ಹಾಗಾಗಿ ನಾವು ಎಂಜಿನಿಯರಿಂಗ್‌ ಸೀಟಿಗೆ ಪ್ರವೇಶ ಪಡೆಯೋಣ ಎಂದರೆ ಕೆಇಎ ನಮ್ಮ ಅನುಮತಿ ಇಲ್ಲದೆ ತಾನೇ ಸೀಟು ರದ್ದುಪಡಿಸಿದೆ ಎಂದು ದೂರಿದ್ದಾರೆ.

ವೈದ್ಯಕೀಯ ಕಾಲೇಜುಗಳೊಂದಿಗೆ ಶಾಮೀಲಾಗಿ ಅವರಿಗೆ ಅನುಕೂಲ ಮಾಡಿಕೊಡಲು ಕೆಇಎ ಈ ರೀತಿ ಮಾಡಿರುವ ಅನುಮಾನವಿದೆ. ಈ ಎಡವಟ್ಟಿನಿಂದ ನಾವು ನಮ್ಮದಲ್ಲದ ತಪ್ಪಿಗೆ ಒಂದು ವರ್ಷ ವ್ಯರ್ಥವಾಗಲಿದೆ. ಅಧಿಕಾರಿಗಳು ನಮಗಾಗಿರುವ ಅನ್ಯಾಯ ಕೇಳಲು ಸಿದ್ಧರಿಲ್ಲ. ನಮ್ಮನ್ನು ಗೇಟ್‌ನಿಂದ ಒಳಗೂ ಬಿಡುತ್ತಿಲ್ಲ. ಹಾಗಾಗಿ ಈ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಅವರ ಖಾಸಗಿ ಕಾರ್ಯದರ್ಶಿ ಮೂಲಕ ಮನವಿ ಪತ್ರ ನೀಡಿದ್ದು ಅವರು ಮಧ್ಯಪ್ರವೇಶಿಸಿ ನ್ಯಾಯ ಕೊಡಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
 

Latest Videos
Follow Us:
Download App:
  • android
  • ios