ಕೋವಿಡ್ ವೇಳೆ ಶೇ.70ರಷ್ಟು ಮಕ್ಕಳು ಓದಿಗೆ ಗುಡ್‌ಬೈ
- ಕೋವಿಡ್ ಹಾಗೂ ಲಾಕ್‌ಡೌನ್ ಅವಧಿಯಲ್ಲಿ ಶಾಲೆಗಳು ಮುಚ್ಚಿದ್ದರಿಂದ ಶೇ.70 ರಷ್ಟುಮಕ್ಕಳು ಆನ್‌ಲೈನ್ ಸೇರಿದಂತೆ ಯಾವುದೇ ರೀತಿಯಲ್ಲೂ ಕಲಿಕೆಯಲ್ಲಿ ಪಾಲ್ಗೊಂಡಿಲ್ಲ
- ಬಹಳಷ್ಟುಮಕ್ಕಳು ಓದು ಬರಹದಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ
ಬೆಂಗಳೂರು (ಡಿ.11): ಕೋವಿಡ್ (Covid) ಹಾಗೂ ಲಾಕ್ ಡೌನ್ (Lock Down) ಅವಧಿಯಲ್ಲಿ ಶಾಲೆಗಳು (School) ಮುಚ್ಚಿದ್ದರಿಂದ ಶೇ.70 ರಷ್ಟುಮಕ್ಕಳು ಆನ್‌ಲೈನ್ (Online) ಸೇರಿದಂತೆ ಯಾವುದೇ ರೀತಿಯಲ್ಲೂ ಕಲಿಕೆಯಲ್ಲಿ ಪಾಲ್ಗೊಂಡಿಲ್ಲ. ಕೃಷಿ ಮತ್ತಿತರ ಕೆಲಸದಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ಬಹಳಷ್ಟು ಮಕ್ಕಳು ಓದು ಬರಹದಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ. ಇದು ಕರ್ನಾಟಕ (karnataka) ರಾಜ್ಯ ಮಕ್ಕಳ ನಿಗಾ ಕೇಂದ್ರ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಮಕ್ಕಳ ಪರಿಸ್ಥಿತಿ ಕುರಿತು ನಡೆಸಿದ ತೌಲನಿಕ ಅಧ್ಯಯನ ವರದಿಯಲ್ಲಿ ಕಂಡುಬಂದಿರುವ ಅಂಶಗಳು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ಶುಕ್ರವಾರ ಈ ವರದಿಯನ್ನು ಬಿಡುಗಡೆ ಮಾಡಿದರು.
ಅಧ್ಯಯನ ಹೇಗೆ?: ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 20 ಜಿಲ್ಲೆಗಳ ತಲಾ ಎರಡು ಪ್ರದೇಶ ಹಾಗೂ ಗ್ರಾಮಗಳಲ್ಲಿ ವಯಸ್ಕರು, ಮಹಿಳೆಯರು, ಹದಿಹರೆಯದವರನ್ನೊಳಗೊಂಡ 47 ಕೇಂದ್ರೀಕೃತ ಗುಂಪುಗಳಿಂದ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ವರದಿಯಲ್ಲೇನಿದೆ?: ವರದಿಯಲ್ಲಿನ ಪ್ರಮುಖ ಅಂಶಗಳೆಂದರೆ ಕೋವಿಡ್, ಲಾಕ್‌ಡೌನ್ ಅವಧಿಯಲ್ಲಿ ಶೇ.30 ರಷ್ಟುವಿದ್ಯಾರ್ಥಿಗಳು (Students) ಮಾತ್ರ ಆನ್‌ಲೈನ್ ಶಿಕ್ಷಣದಲ್ಲಿ (Education) ತೊಡಗಿದ್ದರು, ಉಳಿದ ಶೇ.70 ರಷ್ಟು ಮಕ್ಕಳು ಕೆಲಸ, ಆಟ, ಮೊಬೈಲ್ ಗೀಳಿಗೆ ಒಳಗಾಗಿದ್ದರು. ಶಿಕ್ಷಣ (Education) ವಂಚಿತರೆಲ್ಲರ ಸಮೀಕ್ಷೆ ನಡೆಸಿ ಅವರು ಶಾಲೆಗೆ (School) ಬರುತ್ತಿರುವ ಬಗ್ಗೆ ಖಾತರಿ ಮೂಲಕ ಕಲಿಕೆಯ ಅಂತರ ಸರಿದೂಗಿಸಲು ಹೆಚ್ಚಿನ ಒತ್ತು ನೀಡಬೇಕು. ಮೊಬೈಲ್ ಗೀಳು ಬಿಡಿಸಲು ಕೌನ್ಸೆಲಿಂಗ್ ನಡೆಸಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಆಹಾರ, ಹಣ ಕೊರತೆ: ಅದೇ ರೀತಿ ಮಕ್ಕಳಿಗೆ ಬಿಸಿಯೂಟ (Mid Day Meal) ಪಡಿತರ (Ration) ತಲುಪಿದೆ ಎಂದು ಶೇ.85 ರಷ್ಟುಜನ ಹೇಳಿದ್ದರೂ, ಆಹಾರ ಅಲಭ್ಯತೆಯಿಂದ ಸಾಕಷ್ಟು ಮಕ್ಕಳು ಪೌಷ್ಟಿಕಾಹಾರ ಕೊರತೆ ಎದುರಿಸಿದ್ದಾರೆ ಎಂದು ಶೇ.35ರಷ್ಟುಜನ ಹೇಳಿದ್ದಾರೆ. ಇನ್ನು ಈ ವೇಳೆ ಮಕ್ಕಳ ಪೋಷಕರ ಆರ್ಥಿಕ ಸ್ಥಿತಿ ಕುಸಿದಿದೆ. ಕೆಲಸ ಇಲ್ಲದೆ ಸಾಲ ಮಾಡಿಕೊಂಡಿದ್ದಾಗಿ ಶೇ.34 ರಷ್ಟುಜನ, ತಮ್ಮ ಖಾಯಂ ವಾಸ ಸ್ಥಳಗಳಿಗೆ ವಾಪಸ್ ಬಂದ ಕಾರಣ ಪರಿಸ್ಥಿತಿ ಕಷ್ಟಕರವಾಗಿತ್ತು ಎಂದು ಶೇ.36 ರಷ್ಟು ಮಂದಿ ಹೇಳಿದ್ದಾರೆ. ಅಲ್ಲದೆ ಒಟ್ಟು 94 ಮಕ್ಕಳು ತಂದೆ ತಾಯಿ ಕಳೆದುಕೊಂಡು ಅನಾಥ, ಅರೆ ಅನಾಥರಾಗಿದ್ದಾರೆ ಎಂಬುದು ಅಧ್ಯಯನದ ವೇಳೆ ಕಂಡುಬಂದಿದೆ. ಕೋವಿಡ್ ಅವಧಿಯಲ್ಲಿ ಮಕ್ಕಳು ದುಡಿಮೆಯಲ್ಲಿ ತೊಡಗಿದ್ದರು ಎಂದು ಶೇ.48 ರಷ್ಟುಮಂದಿ, ಈ ಅವಧಿಯಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿದೆ ಎಂದು ಶೇ.43ರಷ್ಟುಜನ ಹೇಳಿದ್ದಾರೆ.
ಇನ್ನು ಕೋವಿಡ್ (Covid) ಅವಧಿಯಲ್ಲಿ ಕೂಡ ಮಕ್ಕಳಿಗೆ ತುರ್ತು ಆರೋಗ್ಯ ಸೇವೆ (Emergency), ಹೆರಿಗೆ ಸೌಲಭ್ಯ ದೊರೆಯುತ್ತಿತ್ತು ಎಂದು ಕ್ರಮವಾಗಿ ಶೇ.80 ಹಾಗೂ ಶೇ.90 ರಷ್ಟುಜನ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರದಿ ಹೇಳಿದೆ. ನಿಗಾ ಕೇಂದ್ರದ ವಾಸುದೇವ ಶರ್ಮಾ, ಮಕ್ಕಳ ಹಕ್ಕುಗಳ ನಿರ್ದೇಶನಾಲಯದ ನಿರ್ದೇಶಕರಾದ ಪಲ್ಲವಿ ಅಕುರಾತಿ, ಯೂನಿಸೆಫ್‌ನ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕೋವಿಡ್(Covid) ಹಿನ್ನೆಲೆ ಕರ್ನಾಟಕ (karnataka) ರಾಜ್ಯ ಮಕ್ಕಳ ನಿಗಾ ಕೇಂದ್ರ ಮಕ್ಕಳ ಪರಿಸ್ಥಿತಿ ಕುರಿತು ನಡೆಸಿದ ಅಧ್ಯಯನ ವರದಿಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ ಬಿಡುಗಡೆಗೊಳಿಸಿದರು.