*  ಹೈಕೋರ್ಟ್‌ ತೀರ್ಪು, ಸರ್ಕಾರದ ಆದೇಶ ಉಲ್ಲಂಘಿಸಿದ ವಿದ್ಯಾರ್ಥಿನಿಯರ ಮೇಲೆ ಶಿಸ್ತು ಕ್ರಮ*  ವಿದ್ಯಾರ್ಥಿಗಳ ಗುಂಪು ಘರ್ಷಣೆ*  ಸಿಡಿಸಿ ಸಭೆ ಮಧ್ಯೆಯೇ ಪ್ರಾಂಶುಪಾಲರಿಗೆ ಬುಲಾವ್‌  

ಉಪ್ಪಿನಂಗಡಿ(ಜೂ.02): ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸತತ ಮನವಿಗಳ ಹೊರತಾಗಿಯೂ ಹಿಜಾಬ್‌ ಧರಿಸಿಕೊಂಡು ತರಗತಿ ಪ್ರವೇಶಿಸಿ ಉಚ್ಚ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿದ 6 ಮಂದಿ ವಿದ್ಯಾರ್ಥಿನಿಯರನ್ನು ಮುಂದಿನ ಆದೇಶದ ವರೆಗೆ ಪ್ರಾಂಶುಪಾಲರು ಅಮಾನತುಗೊಳಿಸಿದ್ದಾರೆ.

ಯಾವುದೇ ಕಾರಣಕ್ಕೂ ತರಗತಿಗೆ ಹಿಜಾಬ್‌ ಧರಿಸಿಕೊಂಡು ಬರಬಾರದೆಂಬ ಸರ್ಕಾರದ ಆದೇಶ ಹಾಗೂ ಹೈಕೋರ್ಟ್‌ ತೀರ್ಪನ್ನು ಪಾಲಿಸದೆ ಪದೇ ಪದೇ ಆದೇಶ ಉಲ್ಲಂಘಿಸುತ್ತಿದ್ದರು. ಕಾಲೇಜಿನ ಕಲಿಕಾ ವಾತಾವರಣಕ್ಕೆ ವಿರುದ್ಧವಾಗಿ ವರ್ತಿಸಿದ್ದ 6 ಮಂದಿ ವಿದ್ಯಾರ್ಥಿನಿಯರನ್ನು ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತು ಮಾಡಲಾಗಿದೆ.

ಮಂಗಳೂರು ವಿವಿ ಹಿಜಾಬ್‌ ವಿವಾದ: 15 ವಿದ್ಯಾರ್ಥಿನಿಯರ ಗೈರು

ಸಿಡಿಸಿ ಸಭೆ ಮಧ್ಯೆಯೇ ಪ್ರಾಂಶುಪಾಲರಿಗೆ ಬುಲಾವ್‌: 

ಕಾಲೇಜಿನಲ್ಲಿ ನಡೆಯುತ್ತಿರುವ ಅನಪೇಕ್ಷಿತ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಹಾಗೂ ಅಗತ್ಯ ಕ್ರಮ ಕೈಗೊಳ್ಳುವ ಸಲುವಾಗಿ ಮಂಗಳವಾರ ಸಂಜೆ ಕಾಲೇಜು ಅಭಿವೃದ್ಧಿ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಸಭೆ ಪ್ರಾರಂಭವಾಗುತ್ತಿದ್ದಂತೆಯೇ ದೂರವಾಣಿ ಕರೆಯೊಂದನ್ನು ಸ್ವೀಕರಿಸಿದ ಪ್ರಾಂಶುಪಾಲ ಶೇಖರ್‌ ಅವರು, ಮಂಗಳೂರಿಗೆ ತೆರಳಲು ಆದೇಶ ಬಂದಿದೆ ಎಂದು ತಿಳಿಸಿ ಸಭೆಯನ್ನು ಮೊಟಕುಗೊಳಿಸಿದರು. ತಮ್ಮೆಲ್ಲಾ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಭೆಗೆ ಬಂದಿದ್ದ ಸಿಡಿಸಿ ಸದಸ್ಯರು ಪ್ರಾಂಶುಪಾಲರ ನಡೆಯನ್ನು ಆಕ್ಷೇಪಿಸಿ ಪ್ರಶ್ನಿಸಿದಾಗ, ಮಂಗಳೂರು ವಿಶ್ವ ವಿದ್ಯಾನಿಲಯದ ಜಂಟಿ ನಿರ್ದೇಶಕರು ಸಭೆಯನ್ನು ನಿಲ್ಲಿಸಿ ಬೇರೊಬ್ಬರಿಗೆ ಚಾಜ್‌ರ್‍ ಕೊಟ್ಟು ತಕ್ಷಣ ಬರಬೇಕೆಂದು ಮೌಖಿಕ ಆದೇಶ ಹೊರಡಿಸಿದ್ದಾರೆಂದು ತಿಳಿಸಿದರು.

ವಿದ್ಯಾರ್ಥಿಗಳ ಗುಂಪು ಘರ್ಷಣೆ: 

ಬುಧವಾರದಂದು ಉಪ್ಪಿನಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ಕೋಮಿನ ವಿದ್ಯಾರ್ಥಿನಿಯರನ್ನು ಇನ್ನೊಂದು ಕೋಮಿನ ವಿದ್ಯಾರ್ಥಿಗಳು ಚುಡಾಯಿಸಿದಾಗ ವಿದ್ಯಾರ್ಥಿಗಳ ನಡುವೆ ಹೊೖ -ಕೈ ನಡೆಯಿತು. ಪರಿಸ್ಥಿತಿ ಕೈ ಮೀರುವ ಲಕ್ಷಣ ಕಂಡು ಬಂದಾಗ ಕಾಲೇಜು ಪ್ರಾಂಶುಪಾಲರು ಪೊಲೀಸರಿಗೆ ತಿಳಿಸಿದ್ದು, ತಕ್ಷಣವೇ ಕಾಲೇಜಿಗೆ ದೌಡಾಯಿಸಿದ ಪೊಲೀಸ್‌ ಪಡೆ ಘರ್ಷಣೆ ನಿರತ ವಿದ್ಯಾರ್ಥಿಗಳನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.