ಮಂಗಳೂರು ವಿವಿ ಹಿಜಾಬ್ ವಿವಾದ: 15 ವಿದ್ಯಾರ್ಥಿನಿಯರ ಗೈರು
* ಕಾನೂನು ಸುವ್ಯವಸ್ಥೆಗೆ ಭಂಗ ತಾರದಂತೆ ಸೂಚಿಸಿದ್ದ ಜಿಲ್ಲಾಧಿಕಾರಿ
* ಮುಂದಿನ ನಡೆ ಅಸ್ಪಷ್ಟ
* ವಿದ್ಯಾರ್ಥಿನಿಯರ ಆರೋಪ ಸುಳ್ಳು: ಖಾದರ್ ಸ್ಪಷ್ಟನೆ
ಮಂಗಳೂರು(ಜೂ.01): ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜಿನಲ್ಲಿ ಹಿಜಾಬ್ ವಿವಾದ ಮುಂದುವರಿಯುತ್ತಲೇ ಇದೆ. ಹಿಜಾಬ್ ಧರಿಸಲು ಅವಕಾಶ ಇಲ್ಲದ ಕಾರಣಕ್ಕೆ ಮಂಗಳವಾರ 15 ಮಂದಿ ಹಿಜಾಬ್ ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿಲ್ಲ.
ಈ ವಿದ್ಯಾರ್ಥಿನಿಯರು ಸೋಮವಾರ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರನ್ನು ಭೇಟಿಯಾಗಿದ್ದರು. ಆಗ ಜಿಲ್ಲಾಧಿಕಾರಿ ನಿಯಮ ಪಾಲಿಸುವಂತೆ ವಿದ್ಯಾರ್ಥಿನಿಯರಿಗೆ ಮನವರಿಕೆ ಮಾಡಿದ್ದರು. ಅಲ್ಲದೆ ಕಾಲೇಜಿಗೆ ಹಿಜಾಬ್ ಧರಿಸಿ ಹೋಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಸೂಚಿಸಿದ್ದರು. ಹೀಗಾಗಿ ವಿದ್ಯಾರ್ಥಿನಿಯರು ಮಂಗಳವಾರ ಕಾಲೇಜಿಗೆ ಆಗಮಿಸಿಲ್ಲ ಎಂದು ಹೇಳಲಾಗಿದೆ. ವಿದ್ಯಾರ್ಥಿನಿಯರು ಮುಂದಿನ ನಡೆ ಏನೆಂಬುದು ಸ್ಪಷ್ಟವಾಗಿಲ್ಲ.
ಹಿಜಾಬ್ ವಿಷಯದಲ್ಲಿ ಕೋರ್ಟ್‌ನ ಆದೇಶ ಪಾಲನೆ ಕಡ್ಡಾಯ: ಸಿಎಂ ಬೊಮ್ಮಾಯಿ
ಕಳೆದ ಒಂದು ವಾರದಿಂದ ಈ ಕಾಲೇಜಿನಲ್ಲಿ ಹಿಜಾಬ್ ವಿವಾದ ಕಾಣಿಸಿದೆ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ, ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ವಿ.ವಿ. ಕುಲಪತಿಗಳೊಂದಿಗೆ ಸಭೆ ನಡೆದಿದೆ. ಈ ಸಭೆಯಲ್ಲಿ ಹೈಕೋರ್ಚ್ ಆದೇಶ ಪಾಲಿಸುವಂತೆ ಮಂಗಳೂರು ವಿ.ವಿ. ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿರುವುದನ್ನು ವಿ.ವಿ. ಕುಲಪತಿ ತಿಳಿಸಿದ್ದಾರೆ. ಅಲ್ಲದೆ ಕಾಲೇಜು ಪ್ರಾಂಶುಪಾಲರು ಹಿಜಾಬ್ ವಿದ್ಯಾರ್ಥಿನಿಯರಿಗೆ ತಿಳಿಹೇಳಿದ್ದು, ನಿಯಮ ಪಾಲಿಸುವಂತೆ ಸೂಚಿದ್ದಾರೆ. ಇದರ ಹೊರತೂ ವಿದ್ಯಾರ್ಥಿನಿಯರು ತರಗತಿ ಪ್ರವೇಶಕ್ಕೆ ಮುಂದಾದಾಗ ಪ್ರಾಂಶುಪಾಲರು ವಾಪಸ್ ಕಳುಹಿಸಿದ್ದಾರೆ. ಮುಂದಿನ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿ ಬಳಿಗೆ ಹಿಜಾಬ್ ವಿದ್ಯಾರ್ಥಿನಿಯರು ತೆರಳಿದ್ದು, ಅಲ್ಲಿಯೂ ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಇದೀಗ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ತರಗತಿಗೇ ಆಗಮಿಸಿಲ್ಲ.
ವಿದ್ಯಾರ್ಥಿನಿಯರ ಆರೋಪ ಸುಳ್ಳು: ಖಾದರ್ ಸ್ಪಷ್ಟನೆ
ಕಳೆದ ಒಂದು ವಾರದಿಂದ ಹಿಜಾಬ್ ವಿಚಾರದಲ್ಲಿ ಹೋರಾಟ ನಡೆಯುತ್ತಿದ್ದರೂ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಸ್ಪಂದಿಸದೆ, ಕ್ರಿಕೆಟ್ ಆಡುತ್ತಿದ್ದರು ಎಂದು ಹಿಜಾಬ್ ವಿದ್ಯಾರ್ಥಿನಿಯೊಬ್ಬಾಕೆ ಆರೋಪಿಸಿದ್ದಾರೆ. ಆದರೆ ಆಕೆ ಸುಳ್ಳು ಹೇಳುತ್ತಿದ್ದು, ನಾನು ಈ ಬಗ್ಗೆ ಸಾಕಷ್ಟುಪ್ರಯತ್ನ ನಡೆಸಿದ್ದೇನೆ ಎಂದು ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.
ಆ ವಿದ್ಯಾರ್ಥಿನಿ ಸುಳ್ಳು ಹೇಳುತ್ತಿದ್ದಾಳೆ, ಸುಳ್ಳು ಹೇಳಿದ ವಿದ್ಯಾರ್ಥಿನಿಗೆ ದೇವರು ಒಳ್ಳೆಯದು ಮಾಡಲಿ. ಆ ವಿದ್ಯಾರ್ಥಿನಿಗೆ ದೇವರು ಒಳ್ಳೆ ಬುದ್ಧಿ ಕೊಡಲಿ, ನಾನು ಆ ವಿದ್ಯಾರ್ಥಿನಿಯ ಸುಳ್ಳನ್ನು ಕ್ಷಮಿಸುತ್ತೇನೆ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಮಂಗ್ಳೂರಲ್ಲಿ ಹಿಜಾಬ್ ವಿವಾದ: ವಿದ್ಯಾರ್ಥಿಗಳ ಪ್ರತಿಭಟನೆ
ಹಿಜಾಬ್ ಸಮಸ್ಯೆ ಪರಿಹರಿಸಲು ನಾನು ಸಾಕಷ್ಟುಪ್ರಯತ್ನ ಮಾಡಿದ್ದೇನೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಮಾತನಾಡಿದ್ದೇನೆ. ಜಿಲ್ಲಾಧಿಕಾರಿ ಜತೆಯೂ ಚರ್ಚೆ ಮಾಡಿದ್ದೇನೆ. ಕಾಲೇಜಿನ ಪ್ರಾಂಶುಪಾಲರು ವಿಶ್ವವಿದ್ಯಾನಿಲಯದ ಕುಲಪತಿ ಜತೆಯಲ್ಲೂ ಮಾತನಾಡಿದ್ದೇನೆ. ದುರುದ್ದೇಶಪೂರಿತ, ರಾಜಕೀಯ ಪ್ರೇರಿತ ಯಾರು ಹೇಳಿಕೊಟ್ಟದ್ದು ಗೊತ್ತಿಲ್ಲ. ಆ ವಿದ್ಯಾರ್ಥಿನಿಗೆ ಹಲವು ಬಾರಿ ಫೋನ್ ಮಾಡಿದರೂ ಕರೆ ಸ್ವೀಕರಿಸಿಲ್ಲ. ಕೊನೆಗೂ ನನ್ನ ಫೋನ್ ರಿಸೀವ್ ಮಾಡಿ ರಾಂಗ್ ನಂಬರ್ ಹೇಳಿದ್ದರು ಎಂದಿದ್ದಾರೆ.
ಮಕ್ಕಳಿಗೆ ಬಟ್ಟೆತೆಗೆದುಕೊಡುವವರು ಪೋಷಕರು, ಕಾಲೇಜಿನ ಶುಲ್ಕ ಕಟ್ಟುವವರು ಪೋಷಕರು, ವಿದ್ಯಾರ್ಥಿಗಳಿಗೆ ಪುಸ್ತಕ ತೆಗೆದು ಕೊಡುವವರು ಮಕ್ಕಳನ್ನು ಕಾಲೇಜಿಗೆ ಸೇರಿಸಿದ್ದು ಪೋಷಕರು, ವಿದ್ಯಾರ್ಥಿನಿಯರು ಶಿಕ್ಷಣದ ಕಡೆ ಗಮನ ಕೊಡಲಿ, ಪೋಷಕರು ಕೂಡ ವಿದ್ಯಾರ್ಥಿನಿಯರ ಶಿಕ್ಷಣದ ಕಡೆ ಗಮನ ಕೊಡಲಿ. ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳಬೇಕಾದವರು ಪೋಷಕರು, ಈಗ ಹೊರಗಿನವರು ಹಸ್ತಕ್ಷೇಪ ಮಾಡುವುದು ಯಾಕೆ ಎಂದು ಯು.ಟಿ.ಖಾದರ್ ಮಂಗಳವಾರ ಉಳ್ಳಾಲದಲ್ಲಿ ಸುದ್ದಿಗಾರರಲ್ಲಿ ಖಾರವಾಗಿ ಪ್ರಶ್ನಿಸಿದ್ದಾರೆ.