ಆತಂಕದ ಮಧ್ಯೆ 5, 8, 9ನೇ ತರಗತಿ ಬೋರ್ಡ್ ಪರೀಕ್ಷೆ ಆರಂಭ
ಎಲ್ಲ ಕೇಂದ್ರಗಳಿಗೂ ಮಂಡಳಿಯು ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರದ ಹಾಳೆಗಳನ್ನು ಸರಬರಾಜು ಮಾಡಿದ್ದು ಯಾವುದೇ ಪರೀಕ್ಷಾ ಅಕ್ರಮಗಳಿಲ್ಲದೆ ಪರೀಕ್ಷೆ ನಡೆದಿದೆ.
ಬೆಂಗಳೂರು(ಮಾ.12): ಆತಂಕದ ನಡುವೆಯೇ ರಾಜ್ಯಾದ್ಯಂತ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆಗಳು ಆರಂಭವಾಗಿದ್ದು, ರಾಜ್ಯದ ಎಲ್ಲಾ ಶಾಲೆಗಳಲ್ಲೂ ಸೋಮವಾರ ಮೊದಲ ದಿನದ ಪ್ರಥಮ ಭಾಷೆ ಕನ್ನಡ ಭಾಷಾ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.
ಮೂರು ತರಗತಿಗಳಗಳಲ್ಲಿ ವ್ಯಾಸಂಗ ಮಾಡುತ್ತಿರುವ 24.14 ಲಕ್ಷ ವಿದ್ಯಾರ್ಥಿಗಳಲ್ಲಿ ಬಹುತೇಕ ಎಲ್ಲರೂ ಮೌಲ್ಯಾಂಕನ ಪರೀಕ್ಷೆ ಬರೆದಿದ್ದಾರೆ. ಹಾಜರಾತಿಯ ನಿಖರ ಮಾಹಿತಿ ಮಂಗಳವಾರ ಲಭ್ಯವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ. ಎಲ್ಲ ಕೇಂದ್ರಗಳಿಗೂ ಮಂಡಳಿಯು ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರದ ಹಾಳೆಗಳನ್ನು ಸರಬರಾಜು ಮಾಡಿದ್ದು ಯಾವುದೇ ಪರೀಕ್ಷಾ ಅಕ್ರಮಗಳಿಲ್ಲದೆ ಪರೀಕ್ಷೆ ನಡೆದಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಹೊರಡಿಸಿದ್ದ ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್, 5,8,9,11ನೇ ತರಗತಿ ಬೋರ್ಡ್ ಪರೀಕ್ಷೆಗೆ ಅನುಮತಿ!
ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡುತ್ತಿರುವುದರಿಂದ ಆತಂಕ ಇದ್ದೇ ಇದೆ. ಆದರೆ, ಶಾಲಾ ಹಂತದಲ್ಲೇ ಪರೀಕ್ಷೆ ನಡೆಸುತ್ತಿರುವುದರಿಂದ ಸಮಾಧಾನವಿದೆ. ಮೊದಲ ದಿನ ಕನ್ನಡ ಪ್ರಶ್ನೆ ಪತ್ರಿಕೆ ಸುಲಭವಾಗಿತ್ತು. ಮುಂದಿನ ಪರೀಕ್ಷೆಗಳು ಹೇಗೋ ಗೊತ್ತಿಲ್ಲ. ಇದರ ನಡುವೆ ಈ ಮೌಲ್ಯಾಂಕನ ಪರೀಕ್ಷೆ ರದ್ದಿಗಾಗಿ ನಡೆಯುತ್ತಿರುವ ಕಾನೂನು ಹೋರಾಟ ಏನಾಗುತ್ತದೋ ಮತ್ತೆ ಪರೀಕ್ಷೆ ಬರೆಯಬೇಕಾಗುತ್ತದಾ ಎಂಬ ಭಯವೂ ಇದೆ. ಸರ್ಕಾರ ಸರಿಯಾದ ಕ್ರಮದಲ್ಲಿ ಪರೀಕ್ಷೆ ನಡೆಸಲು ಕ್ರಮ ವಹಿಸಿದ ಕಾರಣ ನಾವು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಪರೀಕ್ಷೆ ಬರೆದ 8 ಮತ್ತು 9ನೇ ತರಗತಿಯ ಕೆಲ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು. 5ನೇ ತರಗತಿ ಮಕ್ಕಳಿಗೆ ಈ ಆತಂಕದ ಬಗ್ಗೆ ಅಷ್ಟಾಗಿ ಮಾಹಿತಿಯೇ ಇಲ್ಲದಿರುವುದು ಕಂಡುಬಂತು.
ಇಂದು ಸುಪ್ರಿಂನಲ್ಲಿ ಅರ್ಜಿ ವಿಚಾರಣೆ:
ಮಂಗಳವಾರ ಎರಡನೇ ದಿನ ದ್ವಿತೀಯ ಭಾಷೆ ಇಂಗ್ಲೀಷ್ ಭಾಷಾ ಪರೀಕ್ಷೆ ನಡೆಯಲಿದ್ದು, ಇದೇ ದಿನ ಮೌಲ್ಯಾಂಕನ ಪರೀಕ್ಷೆ ರದ್ದು ಪಡಿಸಬೇಕೆಂದು ಖಾಸಗಿ ಶಾಲಾ ಸಂಘಟನೆಗಳು ಸಲ್ಲಿಸಿರುವ ಮೇಲ್ಮನವಿ ಅರ್ಜಿ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ.
5, 8,9 ಮತ್ತು 11 ನೇ ತರಗತಿ ಬೋರ್ಡ್ ಎಕ್ಸಾಂ ರದ್ದು, ಹೈಕೋರ್ಟ್ ಆದೇಶ
ರಾಜ್ಯ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಮೌಲ್ಯಾಂಕನ ಪರೀಕ್ಷೆಯನ್ನು ರದ್ದು ಪಡಿಸಿದ್ದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ದ್ವಿಸದಸ್ಯ ನ್ಯಾಯಪೀಠ ಪರೀಕ್ಷೆಗೆ ಅವಕಾಶ ಕಲ್ಪಿಸಿತ್ತು. ಈಗ ಇದನ್ನು ಪ್ರಶ್ನಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಸುಪ್ರೀಂ ಕೋರ್ಟ್‌ಗೆ ಹೋಗಿವೆ.
ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಅರ್ಜಿ ವಿಚಾರಣೆ ನಿಗದಿಯಾಗುತ್ತಿದ್ದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ಅಡ್ವಾಕೇಟ್ ಆನ್ ರೆಕಾರ್ಡ್ ವೇಲನ್ ಅವರು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಇ-ಮೇಲ್ ಕಳುಹಿಸಿ ಮೌಲ್ಯಾಂಕನ ಪರೀಕ್ಷೆಯನ್ನು ಮುಂದೂಡುವಂತೆ ಕೋರಿದ್ದರು. ಆದರೆ, ಇಲಾಖೆ ನಿಗದಿಯಂತೆ ಪರೀಕ್ಷೆಗಳನ್ನು ಆರಂಭಿಸಿದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮುಂದುವರೆದಿದೆ.