Asianet Suvarna News Asianet Suvarna News

Chikkaballapur News: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 496 ಮಕ್ಕಳು

ಜಿಲ್ಲೆಯಲ್ಲಿ 2022-2023 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 6 ರಿಂದ 14 ವರ್ಷದ ವಯೋಮಾನದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬರೋಬ್ಬರಿ 496 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಬೆಳಕಿಗೆ ಬಂದಿದೆ.

496 children are out of school in Chikkaballapur distric rav
Author
First Published Dec 29, 2022, 12:08 AM IST

ಕಾಗತಿ ನಾಗರಾಜಪ್ಪ.

 ಚಿಕ್ಕಬಳ್ಳಾಪುರ (ಡಿ.29) : ಜಿಲ್ಲೆಯಲ್ಲಿ 2022-2023 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 6 ರಿಂದ 14 ವರ್ಷದ ವಯೋಮಾನದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಬರೋಬ್ಬರಿ 496 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಆದೇಶದಂತೆ ರಾಜ್ಯಾದ್ಯಂತ ಡಿ.30 ರಿಂದ ಜನವರಿ 5 ವರೆಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಪತ್ತೆಗಾಗಿ ವಿಸ್ತೃತವಾದ ಹಾಗೂ ಪರಿಣಾಮಕಾರಿ ಸಮೀಕ್ಷೆ ನಡೆಸಲು ಸೂಚಿಸಿದ್ದು ಶುಕ್ರವಾರದಿಂದ ಜಿಲ್ಲಾದ್ಯಂತ ಶಾಲಾ ಮುಖ್ಯ ಶಿಕ್ಷಕರ ನೇತೃತ್ವವದಲ್ಲಿ ಸಮೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ರಾಜ್ಯದಲ್ಲಿ 64,003 ಮಕ್ಕಳು ಹೊರಗೆ

ರಾಜ್ಯದಲ್ಲಿ ಬರೋಬ್ಬರಿ 64,003 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವುದು ಕಂಡು ಬಂದಿದೆ. ಇತ್ತೀಚೆಗೆ ಪ್ರಾಯೋಗಿಕವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಬಗ್ಗೆ ವಿಶೇಷ ಸಮೀಕ್ಷೆ ಕೈಗೊಂಡಾಗ ಶಾಲೆಯಲ್ಲಿ ನಿರ್ವಹಿಸಿರುವ ದಾಖಲಾತಿಯಲ್ಲಿನ ಮಕ್ಕಳ ಸಂಖ್ಯೆ ಹಾಗೂ ವಿವರಗಳಿಗೂ ಹಾಗೂ ಇಲಾಖೆ ವೈಬ್‌ಸೆಟ್‌ನಲ್ಲಿ ದಾಖಲಾಗಿದ್ದ ವಿವರಗಳಿಗೂ ಸಾಕಷ್ಟುವ್ಯತ್ಯಾಸ ಕಂಡು ಬಂದಿದೆ.

 

Education: ಪ್ರಯೋಗ ಶೀಲತೆಯ ಅಧ್ಯಯನ ಅಗತ್ಯ; ಚುಂಚಶ್ರೀ ಅಭಿಮತ

ಈ ಹಿನ್ನೆಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು, ಕ್ಲಸ್ಟರ್‌ ಹಾಗೂ ಶಾಲಾ ಹಂತದಲ್ಲಿ ಸಮೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಜಿಲ್ಲೆಗಳ ಉಪ ನಿರ್ದೇಶಕರಿಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಡಿ.30 ರಿಂದ ಜನವರಿ 5 ರ ವರೆಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡಲು ವಿಶೇಷ ಸಮೀಕ್ಷೆ ನಡೆಸಲು ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಜ.14ರೊಳಗೆ ಮಾಹಿತಿ ಸಲ್ಲಿಸಬೇಕು

2022ರಲ್ಲಿ ದಾಖಲಾದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು. ಜ.14 ರೊಳಗೆ ಸಮೀಕ್ಷೆ ಮೂಲಕ ಗುರುತಿಸುವ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಕಡ್ಡಾಯವಾಗಿ ರಾಜ್ಯ ಕಚೇರಿಗೆ ನೀಡುವಂತೆ ಸೂಚಿಸಲಾಗಿದೆ. ಅಲ್ಲದೇ ಜನವಸತಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸುವುದರ ಜೊತೆಗೆ ಹೋಟೆಲ್‌, ಕಾರ್ಖಾಣೆ, ಇಟ್ಟಿಗೆ ಪ್ಯಾಕ್ಟರಿ, ಕಟ್ಟಡ ಹಾಗೂ ಇತರೇ ನಿರ್ಮಾಣ ಕಾಮಗಾರಿ ಸ್ಥಳಗಳಲ್ಲಿ, ಚಿತ್ರ ಮಂದಿರ, ಕಲ್ಯಾಣ ಮಂಟಪಗಳು, ಗ್ಯಾರೇಜ್‌, ಗಣಿಗಾರಿಕೆ ಪ್ರದೇಶ, ಕೃಷಿ, ತೋಟಗಾರಿಕಾ, ಕೊಳಗೇರಿ, ಗುಡ್ಡಗಾಡು ಪ್ರದೇಶಗಳಿಗೆ ಬೇಟಿ ನೀಡಿ ಾಲೆಯಿಂದ ಹೊರಗುಳಿದ ಮಕ್ಕಳನ್ನು ಪತ್ತೆ ಮಾಡುವಂತೆ ಆದೇಶದಲ್ಲಿ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.

ಚಿಂತಾಮಣಿ ತಾಲೂಕಿನಲ್ಲೇ ಹೆಚ್ಚು

ಶಾಲೆಯಿಂದ ಹೊರಗುಳಿದ ಒಟ್ಟು 496 ಮಕ್ಕಳ ಪೈಕಿ ಚಿಂತಾಮಣಿ ತಾಲೂಕಿನ ಒಂದರಲ್ಲಿಯೆ 385 ಮಕ್ಕಳು ಇದ್ದಾರೆ. ಎಡನೇ ಸ್ಥಾನದಲ್ಲಿ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರದಲ್ಲಿ 57 ಮಕ್ಕಳು ಹಾಗೂ ಮೂರನೇ ಸ್ಥಾನದಲ್ಲಿ ಶಿಡ್ಲಘಟ್ಟತಾಲೂಕಿನಲ್ಲಿ ಒಟ್ಟು 37 ಮಕ್ಕಳು ಶಾಲೆಯಿಂದ ಹೊರಗೆ ಇರುವುದು ಕಂಡು ಬಂದಿದೆ. ಅವರನ್ನೆಲ್ಲಾ ಪತ್ತೆ ಹಚ್ಚಿ ಮತ್ತೆ ಶಾಲೆಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶುಕ್ರವಾರಿಂದ ಜಿಲ್ಲೆಯಲ್ಲಿ ಪರಿಣಾಮಕಾರಿ ಸಮೀಕ್ಷೆ ಮೂಲಕ ಮಕ್ಕಳ ಪತ್ತೆಗೆ ಮುಂದಾಗಿದೆ.

ಆಂಧ್ರದ 5 ಲಕ್ಷ ವಿದ್ಯಾರ್ಥಿಗಳಿಗೆ ಇ-ಕಂಟೆಂಟ್ ಆಧರಿತ ಟ್ಯಾಬ್ ವಿತರಣೆ!

ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ

ತಾಲೂಕು ಗಂಡು ಹೆಣ್ಣು

  • ಬಾಗೇಪಲ್ಲಿ 3 4
  • ಚಿಕ್ಕಬಳ್ಳಾಪುರ 27 30
  • ಚಿಂತಾಮಣಿ 190 195
  • ಗೌರಿಬಿದನೂರು 7 3
  • ಗುಡಿಬಂಡೆ 0 0
  • ಶಿಡ್ಲಘಟ್ಟ 15 22
Follow Us:
Download App:
  • android
  • ios