ದ್ವಿತೀಯ ಪಿಯುಸಿ ರಿಸಲ್ಟ್: ಫೇಲಾಯ್ತ? ಅಂತ ಚಿಂತೆ ಬೇಡ. ಮೇಗೆ ಪೂರಕ ಪರೀಕ್ಷೆ ಬರೆಯಿರಿ
ಪರೀಕ್ಷೆಗೆ ಇಂದಿನಿಂದಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಮಾಸಾಂತ್ಯಕ್ಕೆ ವೇಳಾಪಟ್ಟಿ, ಪರೀಕ್ಷಾ ಶುಲ್ಕ ಪಾವತಿಗೆ 26 ಕೊನೆ ದಿನ.
ಬೆಂಗಳೂರು(ಏ.22): ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮೇ ತಿಂಗಳಲ್ಲಿ ನಡೆಯುವ ಪೂರಕ ಪರೀಕ್ಷೆಗೆ ಈಗಿನಿಂದಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷ ಆರ್.ರಾಮಚಂದ್ರನ್ ತಿಳಿಸಿದರು.
ಫಲಿತಾಂಶ ಪ್ರಕಟಿಸಿದ ಬಳಿಕ ಈ ಮಾಹಿತಿ ನೀಡಿದ ಅವರು, ಮೇ ಅಂತ್ಯಕ್ಕೆ ಪೂರಕ ಪರೀಕ್ಷೆ ನಡೆಯುವ ಸಾಧ್ಯತೆ ಇದೆ. ಏಪ್ರಿಲ್ ಮಾಸಾಂತ್ಯದಲ್ಲಿ ವೇಳಾಪಟ್ಟಿಪ್ರಕಟಿಸಲಾಗುವುದು. ವಾರ್ಷಿಕ ಪರೀಕ್ಷಾ ಫಲಿತಾಂಶದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಕೂಡ ಫಲಿತಾಂಶಕ್ಕಾಗಿ ಕಾಯದೇ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ದಂಡ ಶುಲ್ಕವಿಲ್ಲದೆ ಏ.26ರವರೆಗೆ ಹಾಗೂ ದಂಡ ಶುಲ್ಕದೊಂದಿಗೆ ಮೇ 2ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
2nd PUC ಜಿಲ್ಲಾವಾರು ಲಿಸ್ಟ್, ಕಳೆದ ಬಾರಿ ಕೊನೆ ಸ್ಥಾನದಲ್ಲಿದ್ದು ಉಗಿಸಿಕೊಂಡ ಚಿತ್ರದುರ್ಗಕ್ಕೆ ಎಷ್ಟನೇ ಸ್ಥಾನ?
ಪೂರಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಲು ಒಂದು ವಿಷಯಕ್ಕೆ 140 ರು., ಎರಡು ವಿಷಯಕ್ಕೆ 270 ರು., ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ 400 ರು. ನಿಗದಿ ಮಾಡಲಾಗಿದೆ. ಪರಿಶಿಷ್ಟಜಾತಿ/ಪಂಗಡ ಮತ್ತು ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ. ಅವರು ಅಂಕಪಟ್ಟಿಶುಲ್ಕ 50 ರು. ಮಾತ್ರ ಪಾವತಿಸಬೇಕು. ಪ್ರಸಕ್ತ ಫಲಿತಾಂಶ ಸಮಾಧಾನ ತಾರದಿದ್ದಲ್ಲಿ ಸಂಪೂರ್ಣ ಫಲಿತಾಂಶ ತಿರಸ್ಕರಿಸಿ ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶವಿದೆ. ಪ್ರಥಮ ಬಾರಿಗೆ ಒಂದು ವಿಷಯವನ್ನು ತಿರಸ್ಕರಿಸಲು 175 ರು., ದ್ವಿತೀಯ ಹಾಗೂ ಅಂತಿಮ ಬಾರಿಗೆ ಒಂದು ವಿಷಯಕ್ಕೆ 350 ರು. ನಿಗದಿ ಮಾಡಲಾಗಿದೆ ಎಂದರು.
ಸ್ಕ್ಯಾನ್ ಪ್ರತಿ ಅರ್ಜಿಗೆ ಏ.27ರವರೆಗೆ ಅವಕಾಶ
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಇಚ್ಛಿಸಿದವರಿಗೆ ಶುಕ್ರವಾರದಿಂದಲೇ ಆನ್‌ಲೈನ್ ಮೂಲಕ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಏ.27ರವರೆಗೆ ಅರ್ಜಿ ಸಲ್ಲಿಸಬಹುದು. ಮಂಡಳಿಯಿಂದ ಹಂತ ಹಂತವಾಗಿ ವಿದ್ಯಾರ್ಥಿಗಳ ಸ್ಕ್ಯಾನಿಂಗ್ ಪ್ರತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅಪ್‌ಲೋಡ್ ಆದ ಪ್ರತಿಗಳ ಬಗ್ಗೆ ವಿದ್ಯಾರ್ಥಿಗಳ ಇ-ಮೇಲ್ ಹಾಗೂ ಮೊಬೈಲ್‌ಗೆ ಸಂದೇಶ ರವಾನಿಸಲಾಗುತ್ತದೆ.
ಏ.26ರಿಂದ ಮೇ 2ರ ವರೆಗೆ ಸ್ಕ್ಯಾನ್ ಮಾಡಿದ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಸ್ಕ್ಯಾನ್ ಪ್ರತಿ ಪಡೆದವರು ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಮೇ 3ರಿಂದ 8ರ ವರೆಗೆ ಅರ್ಜಿ ಸಲ್ಲಿಸಬಹುದು. ಸ್ಕಾ್ಯನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರು. ಮತ್ತು ಮರುಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರು.ಗಳ ಶುಲ್ಕವನ್ನು ನಿಗದಿ ಮಾಡಿದೆ. ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ.