2nd PUC Annual Exam: ದ್ವಿತೀಯ ಪಿಯುಸಿ ಮಾದರಿ ಉತ್ತರ ಪ್ರಕಟ
ಮಾ.3ರಿಂದ 23ರವರೆಗೆ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮಾದರಿ ಉತ್ತರಗಳನ್ನು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ.
ಬೆಂಗಳೂರು (ಮಾ.26): ಮಾ.3ರಿಂದ 23ರವರೆಗೆ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮಾದರಿ ಉತ್ತರಗಳನ್ನು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದೆ. ಆಕ್ಷೇಪಣೆಗಳಿದ್ದರೆ ಪಾಲಕರು ಮತ್ತು ವಿದ್ಯಾರ್ಥಿಗಳು ಮಾ.27 ರ ಸಂಜೆ 5 ಗಂಟೆಯೊಳಗೆ ಆನ್‌ಲೈನ್ ಮೂಲಕ ಆಕ್ಷೇಪಣೆಗಳನ್ನು Kseab.Karanataka.gov.in ಇಲ್ಲಿಗೆ ಸಲ್ಲಿಸಬೇಕು. ಮಾ.25 ರಿಂದ 29ರವರೆಗೆ ನಡೆಯುವ ಪರೀಕ್ಷೆಗಳ ಮಾದರಿ ಉತ್ತರಗಳನ್ನು ಬಳಿಕ ಬಿಡುಗಡೆ ಮಾಡಲಾಗುತ್ತದೆ ಎಂದು ಮಂಡಳಿ ಪ್ರಕಟಣೆ ತಿಳಿಸಿದೆ.
ಮೊದಲ ಬಾರಿಗೆ ಪರೀಕ್ಷಾ ಕೇಂದ್ರವಾಗಿರುವ ಸುಂಟಿಕೊಪ್ಪ ಪಪೂ ಕಾಲೇಜು: ದ್ವಿತೀಯ ಪಿಯುಸಿ ಪರೀಕ್ಷೆ ಗುರುವಾರದಿಂದ ಆರಂಭವಾಗಿದ್ದು, ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಇದೇ ಪ್ರಥಮ ಬಾರಿಗೆ ಪರೀಕ್ಷಾ ಕೇಂದ್ರವನ್ನಾಗಿ ಮಾಡಲಾಗಿದ್ದು, ಇದರಿಂದ ಸುತ್ತಲಿನ 4 ಪದವಿ ಪೂರ್ವ ಕಾಲೇಜುಗಳ 255 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಕೊಡಗಿನಲ್ಲಿ 19 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾ ಪದವಿಪೂರ್ವ ಕಾಲೇಜು ಮಂಡಳಿ ಉಪನಿರ್ದೇಶಕರಾದ ಪುಟ್ಟರಾಜು ತಿಳಿಸಿದ್ದಾರೆ.
ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎದುರು ವಿಜಯೇಂದ್ರ ಸ್ಪರ್ಧೆ ಮಾಡ್ತಾರಾ?
ಈ ಹಿಂದೆ ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಡಿಕೇರಿ ಸಂತ ಮೈಕಲರ ಶಾಲೆಯಲ್ಲಿ ಪರೀಕ್ಷಾ ಕೇಂದ್ರವಿತ್ತು. ಮಾದಾಪುರ ಚೆನ್ನಮ್ಮ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹೋಗಬೇಕಿತ್ತು. ಗರಗಂದೂರು ಮೊರಾರ್ಜಿ ದೇಸಾಯಿ ವಿಜ್ಞಾನ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪರೀಕ್ಷೆ ನಡೆಯುತ್ತಿತು. ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಸಂತ ಮೈಕಲರ ಶಾಲೆಯಲ್ಲಿ ಪರೀಕ್ಷೆ ನಡೆಯುತ್ತಿತು.
ಆದರೆ ಈ ಬಾರಿ ಕೊಡಗು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯವರು ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸಿರುವುದರಿಂದ ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಪದವಿ ಪೂರ್ವ ಕಾಲೇಜು, ಮಾದಾಪುರ ಚೆನ್ನಮ್ಮ ಕಾಲೇಜು, ಗರಗಂದೂರು ಮೊರಾರ್ಜಿ ವಸತಿ ವಿಜ್ಞಾನ ಪದವಿ ಕಾಲೇಜು ಹಾಗೂ ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಅನೂಕೂಲವಾಗಿದೆ.
ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳನ್ನು ಕಾಲೇಜಿನ ವತಿಯಿಂದ ಸ್ವಾಗತಿಸಲಾಯಿತು. ಸುಂಟಿಕೊಪ್ಪ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರಾದ ಪಿ.ಎಸ್. ಜಾನ್ ಸಂದರ್ಭ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಅಹಿತಕರ ಚಟುವಟಿಕೆಗಳಲ್ಲಿ ತೊಡಗದೆ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಲು ಶಿಸ್ತು ಬದ್ಧತೆಯಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿ ಶುಭಹಾರೈಸಿದರು. ಸಂತ ಮೇರಿ ಆಂಗ್ಲ ಮಾಧ್ಯಮ ಪದವಿ ಕಾಲೇಜಿನ ಪ್ರಾಂಶುಪಾಲ ಸೆಲ್ವರಾಜ್, ಗರಗಂದೂರು ಮೊರಾರ್ಜಿ ವಸತಿ ವಿಜ್ಞಾನ ಪದವಿ ಕಾಲೇಜಿನ ಪ್ರಾಂಶುಪಾಲ ನವೀನ ಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಗೋರ್ಟಾ ಹುತಾತ್ಮರ ಸ್ಮಾರಕ ಇಂದು ಅಮಿತ್ ಶಾ ಉದ್ಘಾಟನೆ: ಬೆಂಗಳೂರಲ್ಲಿ ಬಸವಣ್ಣ, ಕೆಂಪೇಗೌಡ ಪುತ್ಥಳಿ ಅನಾವರಣ
ಉಪನ್ಯಾಸಕಿ ಸುನೀತಾ ಗಿರೀಶ್ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವ ಸಂದರ್ಭದ ಮಾರ್ಗಸೂಚಿಗಳನ್ನು ತಿಳಿಸಿಕೊಟ್ಟರು. ಸುಂಟಿಕೊಪ್ಪ ಸ.ಪ.ಪೂ. ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಪರೀಕ್ಷಾ ನಿರ್ವಹಕರಾದ ಸುನೀತ, ಉತ್ತರ ಪತ್ರಿಕೆಗಳ ಪಾಲಕರಾದ ಕವಿತಾ ಕೆ.ಸಿ., ಸಹಮುಖ್ಯ ಅಧೀಕ್ಷಕಿ ಭವಾನಿ, ಸಹ ಶಿಕ್ಷಕರು ಹಾಗೂ ಕೊಠಡಿ ಮೇಲ್ವಿಚಾರಕರು ಇದ್ದರು. ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು. ಪೊಲೀಸರು ಹಾಗೂ ಆರೋಗ್ಯ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು.