ಬೆಳಗಾವಿ: ಫೆ.24ರಂದು ವಿಟಿಯು 22ನೇ ಘಟಿಕೋತ್ಸವ
700 ಸಂಶೋಧನಾರ್ಥಿಗಳಿಗೆ ಪಿಎಚ್‌ಡಿ ಪ್ರದಾನ, ರಾಜ್ಯಪಾಲ ಗೆಹ್ಲೋಟ್ ಆಗಮನಫೆ. 24ರಂದು ವಿಟಿಯು 22ನೇ ಘಟಿಕೋತ್ಸವ.
ಬೆಳಗಾವಿ(ಫೆ.21): ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 22ನೇ ವಾರ್ಷಿಕ ಘಟಿಕೋತ್ಸವ ಫೆ.24 ರಂದು ವಿಟಿಯು ಜ್ಞಾನ ಸಂಗಮ ಆವರಣದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಭವನದಲ್ಲಿ ನಡೆಯಲಿದೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್ ತಿಳಿಸಿದರು. ವಿಟಿಯುದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ರಾಜ್ಯಪಾಲ್ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಉಪಸ್ಥಿತರಿರುವರು. ನವದೆಹಲಿಯ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡುವರು.
ಘಟಿಕೋತ್ಸವ ಸಮಾರಂಭದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಟೋಯೋಟಾ ಕಿರ್ಸೋಸ್ಕರ್ ಮೋಟರ್ಸ್‌ನ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ (ಮರಣೋತ್ತರ), ವಾಬ್ಕೋ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಎಂ.ಲಕ್ಷ್ಮೇನಾರಾಯಣ ಹಾಗೂ ಬೆಳಗಾಂ ಫೆರೋಕಾಸ್ಟ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸಚಿನ್ ಸಬ್ಸಿಸ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುವುದು.
ಮಕ್ಕಳಿಗೆ ಕೆಮ್ಮು, ನೆಗಡಿ ಹೆಚ್ಚಳ: ಮೂರು ದಿನ ಶಾಲೆಗೆ ರಜೆ ಘೋಷಿಸಿದ ಮೇಗಲಹುಂಡಿ ಸರ್ಕಾರಿ ಪ್ರೌಢಶಾಲೆ
ಬಿಇ,ಬಿಟೆಕ್- 51905, ಬಿಪ್ಲಾನ್-9, ಬಿ ಆರ್ಚ 1032, ಎಂಬಿಎ- 4279, ಎಂಸಿಎ 2028, ಎಂಟೆಕ್ 01363, ಎಆಚ್‌ರ್- 82 ಮತ್ತು 1 ಪಿಜಿ ಡಿಪ್ಲೋಮಾ ಪದವಿ ಪ್ರದಾನ ಮಾಡಲಾಗುವುದು. ಯಶಸ್ವಿಯಾಗಿ ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 700 ಪಿಎಚ್‌ಡಿ, 2 ಎಂಎಸ್ಸಿ, ಎಂಜಿನಿಯರಿಂಗ್ ಬೈ ರಿಸಚ್‌ರ್ ಮತ್ತು 4 ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಮುರಳಿ ಎಸ್. ಚಿನ್ನದ ಹುಡುಗ:
ವಿಟಿಯು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಅಂದರೆ 18 ಚಿನ್ನದ ಪದಕ ಪಡೆದ ಕೀರ್ತಿಗೆ ಬೆಂಗಳೂರಿನ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಮುರಳಿ ಎಸ್ ಪಾತ್ರರಾಗಿದ್ದಾರೆ. ದಕ್ಷಿಣ ಕನ್ನಡ ಸುಳ್ಯಾದ ಕುರುಂಜಿ ವೆಂಕಟರಮನ್ ಗೌಡ ಕಾಲೇಜ್ ಆಪ್ ಎಂಜಿನಿಯರಿಂಗ್‌ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕೃತಿ ಎಸ್. 8 ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಇನ್ಸಿ$್ಟಟ್ಯೂಟ್ ಆಫ್ ಟೆಕ್ನಾಲೋಜಿಯ ಕಂಪ್ಯೂಟರ್ ಆ್ಯಂಡ್ ಕಮ್ಯೂನಿಕೇಷನ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸ್ವಾತಿ ಎಸ್. 7 ಚಿನ್ನದ ಪದಕ ಹಾಗೂ ಸುಶ್ಮೀತಾ ಎಸ್.ವಿ. 6 ಚಿನ್ನದ ಪದಕ ಪಡೆದಿದ್ದಾರೆ. ಬೆಂಗಳೂರಿನ ಬಿ.ಎನ್.ಎಂ. ಇನ್ಸಿ$್ಟಟ್ಯೂಟ್ ಆಫ್ ಟೆಕ್ನಾಲೋಜಿಯ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಪೂಜಾ ಬಾಸ್ಕೆರ್ ಅವರಿಗೆ 6 ಚಿನ್ನದ ಪದಕ ಲಭಿಸಿವೆ.
ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಪ್ರೊ.ಬಿ.ಈ. ರಂಗಸ್ವಾಮಿ, ಪ್ರೊ.ಟಿ.ಎನ್. ಶ್ರೀನಿವಾಸ ಉಪಸ್ಥಿತರಿದ್ದರು.
ಪದವಿ ಪೂರ್ಣಗೊಳಿಸಲು ಅವಕಾಶ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ರಜತ ಸಂಭ್ರಮ ಆಚರಣೆ ಹಿನ್ನೆಲೆಯಲ್ಲಿ ಕಾರಣಾಂತರಗಳಿಂದ ತಮ್ಮ ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳಿಗೆ ವಿವಿ ಒಂದು ಸುವರ್ಣ ಅವಕಾಶ ಒದಗಿಸಿದೆ. ಇಂತಹ ವಿದ್ಯಾರ್ಥಿಗಳಿಗೆ ಎರಡು ವಿಶೇಷ ಪರೀಕ್ಷೆಗಳನ್ನು ನಡೆಸಲು ವಿಟಿಯು ಕಾರ್ಯಕಾರಿ ಪರಿಷತ್ ಅನುಮೋದನೆ ನೀಡಿದೆ. ಹಾಗಾಗಿ, ಪದವಿ ಪೂರ್ಣಗೊಳಿಸದ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಬಹುದು. ಈ ವಿಶೇಷ ಅವಕಾಶ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಲಭಿಸಿದೆ ಎಂದು ಕುಲಪತಿ ಪ್ರೊ.ವಿದ್ಯಾಶಂಕರ ತಿಳಿಸಿದರು.