Asianet Suvarna News Asianet Suvarna News

ಕರ್ನಾಟಕದ 10 ಕಡೆ ಮುಸ್ಲಿಂ ಕಾಲೇಜು: ಶೀಘ್ರ ಸಿಎಂ ಶಂಕು

ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ವಕ್ಫ್ ಬೋರ್ಡ್‌ನಿಂದ ಕಾಲೇಜು ಸ್ಥಾಪನೆ, ಪ್ರತಿ ಕಾಲೇಜಿಗೆ 2.5 ಕೋಟಿ ವೆಚ್ಚ

10 Muslim Colleges in Karnataka grg
Author
First Published Nov 29, 2022, 6:20 AM IST

ಸಂದೀಪ್‌ ವಾಗ್ಲೆ

ಮಂಗಳೂರು(ನ.29):  ರಾಜ್ಯದಲ್ಲಿ ಮುಸ್ಲಿಂ ಹೆಣ್ಮಕ್ಕಳಿಗಾಗಿಯೇ ಪ್ರತ್ಯೇಕ 10 ಕಾಲೇಜುಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮುಂದಿನ ತಿಂಗಳು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ನಿರೀಕ್ಷೆಯಿದೆ. ಮೂರು ತಿಂಗಳ ಹಿಂದೆ, ರಾಜ್ಯ ವಕ್ಫ್ ಬೋರ್ಡ್‌ನಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಸರ್ಕಾರದಿಂದ ಇದಕ್ಕೆ ಅನುಮೋದನೆಯೂ ದೊರೆತಿತ್ತು. ಪ್ರತಿ ಕಾಲೇಜಿಗೆ 2.50 ಕೋಟಿ ರು.ಅನುದಾನವನ್ನೂ ಮೀಸಲಿರಿಸಲಾಗಿದ್ದು, ವಕ್ಫ್ ಬೋರ್ಡ್‌ಗೆ ರಾಜ್ಯ ಸರ್ಕಾರ ನೀಡುವ ಅನುದಾನದಲ್ಲಿ ಈ ವೆಚ್ಚವನ್ನು ಭರಿಸಲು ನಿರ್ಧರಿಸಲಾಗಿದೆ.

ಉಡುಪಿಯಲ್ಲಿ ಹಿಜಾಬ್‌ ವಿವಾದ ಉದ್ಭವಿಸಿದ ಬಳಿಕ ತರಗತಿಯಲ್ಲಿ ಹಿಜಾಬ್‌ ಧರಿಸದಂತೆ ಸರ್ಕಾರ ಆದೇಶ ಹೊರಡಿಸಿತ್ತು. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ವಿಷಯವಾಗಿ ಬಹುತೇಕ ಮುಸ್ಲಿಂ ಸಂಘ, ಸಂಸ್ಥೆಗಳು ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದವು. ಇದೀಗ ಚುನಾವಣೆಯ ಪರ್ವ ಕಾಲದಲ್ಲಿ ಸರ್ಕಾರವೇ ಮುತುವರ್ಜಿ ವಹಿಸಿ ಮುಸ್ಲಿಂ ಹೆಣ್ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಸ್ಥಾಪನೆಗೆ ಮುಂದಾಗಿರುವುದು ಕುತೂಹಲ ಕೆರಳಿಸಿದೆ. ಅಲ್ಲದೆ, ಇಂತಹ ಪ್ರತ್ಯೇಕ ಕಾಲೇಜು ಸ್ಥಾಪನೆ ವಿಚಾರ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

Udupi: ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ವೈಭವದ ಯಕ್ಷೋತ್ಸವ

ಎಲ್ಲೆಲ್ಲಿ ಕಾಲೇಜು ಸ್ಥಾಪನೆ?:

ದಕ್ಷಿಣ ಕನ್ನಡ ಜಿಲ್ಲೆಯ ಅಡ್ಯಾರ್‌ ಕಣ್ಣೂರಿನ 16 ಎಕರೆ ಜಾಗದಲ್ಲಿ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಉಳಿದಂತೆ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಕೆಲವೆಡೆ ಕಾಲೇಜು ಆರಂಭಿಸಲಾಗುತ್ತದೆ.

ರಾಜ್ಯಾದ್ಯಂತ ಇರುವ ವಕ್ಫ್ ಆಸ್ತಿಯಲ್ಲೇ ಈ ಕಾಲೇಜುಗಳು ತಲೆ ಎತ್ತಲಿವೆ. ಶಂಕುಸ್ಥಾಪನೆ ನೆರವೇರಿದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, 2024-25ನೇ ಸಾಲಿನಿಂದ ಕಾಲೇಜುಗಳು ಕಾರ್ಯಾರಂಭವಾಗುವ ನಿರೀಕ್ಷೆಯಿದೆ. ಆರಂಭದಲ್ಲಿ ಪ್ರಥಮ ಪಿಯುಸಿ ಆರಂಭವಾಗಲಿದ್ದು, ನಂತರದ ವರ್ಷ ದ್ವಿತೀಯ ಪಿಯುಸಿ...ಹೀಗೆ ಪದವಿ ಹಂತದವರೆಗೆ ಇದನ್ನು ವಿಸ್ತರಿಸಲಾಗುತ್ತದೆ.

ಹಿಜಾಬ್‌ ವಿವಾದದ ಬಳಿಕ ರಾಜ್ಯಾದ್ಯಂತ ಸುಮಾರು ಏಳೆಂಟು ಸಾವಿರ ಮುಸ್ಲಿಂ ವಿದ್ಯಾರ್ಥಿನಿಯರು ಒಂದೋ ಶಿಕ್ಷಣದಿಂದಲೇ ವಿಮುಖರಾಗಿದ್ದಾರೆ, ಇಲ್ಲವೇ ಮುಸ್ಲಿಂ ಆಡಳಿತದ ಕಾಲೇಜುಗಳಿಗೆ ಹಾಗೂ ಹಿಜಾಬ್‌ಗೆ ಅವಕಾಶವಿರುವ ಖಾಸಗಿ ಕಾಲೇಜುಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆ ನಂತರ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲಿಯೇ ಮುಸ್ಲಿಂ ಶಿಕ್ಷಣ ಸಂಸ್ಥೆಗಳಿಂದ ಕಾಲೇಜು ಸ್ಥಾಪನೆಗೆ 13 ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ ಎರಡು ಕಾಲೇಜುಗಳು ಈಗಾಗಲೇ ಮಂಜೂರಾಗಿವೆ. ಮುಂದಿನ ವರ್ಷ ಇನ್ನಷ್ಟುಶಿಕ್ಷಣ ಸಂಸ್ಥೆಗಳಿಗೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಸರ್ಕಾರದ ಹೊಸ ನಿರ್ಧಾರ ಗಮನ ಸೆಳೆದಿದೆ.

ಕೊಪ್ಪಳದ ಸಚಿವರ ಹುಟ್ಟುಹಬ್ಬದ ಕ್ರೀಡಾಕೂಟಕ್ಕೆ ಸರ್ಕಾರಿ ಶಿಕ್ಷಕರ ನಿಯೋಜನೆ?

ವಕ್ಫ್ ಆಸ್ತಿಯಲ್ಲಿ ಸಮುದಾಯದ ಮಕ್ಕಳಿಗೆ ಕಾಲೇಜು ಸ್ಥಾಪನೆಗೆ ಅವಕಾಶವಿದೆ. ಮುಸ್ಲಿಂ ಹೆಣ್ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಇವುಗಳನ್ನು ಆರಂಭಿಸಲಾಗುತ್ತಿದೆಯೇ ಹೊರತು ಹಿಜಾಬ್‌ ವಿವಾದದ ಹಿನ್ನೆಲೆಯಲ್ಲಿ ಅಲ್ಲ. ಖಾಸಗಿ ಕಾಲೇಜುಗಳಲ್ಲಿ ಬಡ ಕುಟುಂಬಗಳಿಗೆ ದುಬಾರಿ ಫೀಸ್‌ ಕಟ್ಟುವುದು ಕಷ್ಟ. ಪ್ರತ್ಯೇಕ ಸರ್ಕಾರಿ ಕಾಲೇಜು ಇದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಬರುತ್ತಾರೆ, ಶಿಕ್ಷಣದಿಂದ ದೂರ ಉಳಿಯುವುದು ತಪ್ಪುತ್ತದೆ ಎನ್ನುವ ದೃಷ್ಟಿಯಿಂದ ವಕ್ಫ್ ಬೋರ್ಡ್‌ ಮೂಲಕ ಆರಂಭಿಸಲಾಗುತ್ತಿದೆ ಅಂತ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್‌ ಲಕ್ಕಿಸ್ಟಾರ್‌ ತಿಳಿಸಿದ್ದಾರೆ. 

ಮುಸ್ಲಿಂ ಪರ ಕೆಲಸ: ಹಿಂದೂಗಳ ಆಕ್ಷೇಪ

ಬಿಜೆಪಿ ಹಿಂದುತ್ವದ ಆಧಾರದಲ್ಲಿ ಓಟು ಪಡೆದುಕೊಂಡು ಈಗ ಜಾತ್ಯತೀತ ಮುಖವಾಡ ಹಾಕಿಕೊಂಡಿರುವುದು ನಿಷ್ಠಾವಂತ ಹಿಂದೂ ಕಾರ್ಯಕರ್ತರಿಗೆ ಮಾಡುತ್ತಿರುವ ದೊಡ್ಡ ಮೋಸ. ಆರಂಭದಿಂದಲೂ ಹಿಂದುತ್ವವಾದವನ್ನೇ ಹೇಳಿಕೊಂಡು ಬಂದು ಈಗ ಮುಸ್ಲಿಮರ ಪರ ಕೆಲಸ ಮಾಡುತ್ತಿದ್ದಾರೆ ಎಂದಾದರೆ ಬಿಜೆಪಿ ಸರ್ಕಾರವು ದ್ವಿಮುಖ ನೀತಿ ಅಳವಡಿಸಿಕೊಂಡಿರುವುದು ಸ್ಪಷ್ಟ. ಇಂತಹ ಪಕ್ಷ ಮತ್ತು ಅದರ ನಾಯಕರು ಭವಿಷ್ಯತ್ತಿನಲ್ಲಿ ಹಿಂದೂ ಧರ್ಮಕ್ಕೆ ಮಾರಕ ಅಂತ ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿದ್ದಾರೆ. 
 

Follow Us:
Download App:
  • android
  • ios