ಬುಕ್‌ಬ್ಯಾಂಕ್‌ನಲ್ಲಿ 1.40 ಕೋಟಿ ಪಠ್ಯಪುಸ್ತಕ ಸಂಗ್ರಹ..!
* ಶಿಕ್ಷಣ ಇಲಾಖೆ ಕಾರ್ಯಕ್ರಮಕ್ಕೆ ಮೊದಲ ವರ್ಷವೇ ನಿರೀಕ್ಷೆಗೂ ಮೀರಿದ ಸ್ಪಂದನೆ
* ಪ್ರತಿ ವರ್ಷವೂ ಪುಸ್ತಕ ಸಂಗ್ರಹಕ್ಕೆ ಸರ್ಕಾರ ಸೂಚನೆ
* ಬಾಗಲಕೋಟೆ ಜಿಲ್ಲೆಯ ಶಾಲೆಗಳಿಂದ 11 ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹ
ಲಿಂಗರಾಜು ಕೋರಾ
ಬೆಂಗಳೂರು(ಆ.04): ಶಾಲಾ ಮಕ್ಕಳಿಗೆ ಹೊಸ ಪಠ್ಯ ಪುಸ್ತಕಗಳ ಹಂಚಿಕೆ ತಡವಾದರೂ ಶೈಕ್ಷಣಿಕ ಚಟುವಟಿಕೆಗೆ ಹಿನ್ನಡೆಯಾಗಬಾರದೆಂದು ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ರೂಪಿಸಿರುವ ಹಳೆಯ ಪುಸ್ತಕಗಳನ್ನು ಸಂಗ್ರಹಿಸಿ ಮರು ಬಳಕೆ ಮಾಡುವ ‘ಬುಕ್ ಬ್ಯಾಂಕ್’ ಕಾರ್ಯಕ್ರಮದಡಿ 1.40 ಕೋಟಿಗೂ ಹೆಚ್ಚು ಪಠ್ಯ ಪುಸ್ತಕಗಳು ಸಂಗ್ರಹವಾಗಿವೆ.
ಇಲಾಖೆಯ ಆಯಾ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಸಂಬಂಧ ಪ್ರತಿ ಶಾಲೆಗಳಿಂದ ಮಾಹಿತಿ ಪಡೆದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ. ರಾಜ್ಯದ ಎಲ್ಲ 34 ಶೈಕ್ಷಣಿಕ ಜಿಲ್ಲೆಗಳಿಂದಲೂ 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಂದ ಅವರು ಉತ್ತೀರ್ಣರಾಗಿರುವ ಹಿಂದಿನ ತರಗತಿಗಳ ಬಹುತೇಕ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಲಕ್ಷಾಂತರ ಪಠ್ಯ ಪುಸ್ತಕಗಳು ಆಯಾ ಶಾಲಾ ಬುಕ್ ಬ್ಯಾಂಕ್‌ಗೆ ಸಂಗ್ರಹವಾಗಿವೆ. ಈ ಪೈಕಿ ಬಾಗಲಕೋಟೆ ಜಿಲ್ಲೆಯ ಶಾಲೆಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಪುಸ್ತಕ ಸಂಗ್ರಹವಾಗಿದೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 10 ಲಕ್ಷಕ್ಕೂ ಹೆಚ್ಚು, ಬೆಳಗಾವಿ ಜಿಲ್ಲೆಯಲ್ಲಿ 8 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಸಂಗ್ರಹವಾಗಿವೆ. ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 1 ಲಕ್ಷದಿಂದ 7 ಲಕ್ಷ ವರೆಗೂ ಪಠ್ಯಪುಸ್ತಕಗಳು ಬಂದಿವೆ.
ಈ ಸಂಬಂಧ ‘ಕನ್ನಡಪ್ರಭ’ಕ್ಕೆ ಮಾಹಿತಿ ಹಂಚಿಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ವಿ.ಅನ್ಬುಕುಮಾರ್ ಅವರು, ಬುಕ್ ಬ್ಯಾಂಕ್ ಕಾರ್ಯಕ್ರಮ ಮೊದಲ ವರ್ಷವೇ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆಯೊಂದಿಗೆ ಯಶಸ್ವಿಯಾಗಿದೆ. ಈ ಕಾರ್ಯಕ್ರಮದಡಿ ಒಟ್ಟಾರೆ 1,40,73,781 ಪಠ್ಯ ಪುಸ್ತಕಗಳು ಸಂಗ್ರಹವಾಗಿದ್ದು ವಿದ್ಯಾರ್ಥಿಗಳ ಮರು ಬಳಕೆಗೆ ಲಭ್ಯವಾಗಿವೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ರಾಜ್ಯದ ಎಲ್ಲ ಶಾಲಾ ಮುಖ್ಯ ಶಿಕ್ಷಕರು ಬುಕ್‌ಬ್ಯಾಂಕ್ ಚಟುವಟಿಕೆಯನ್ನು ಆದ್ಯತೆ ಮೇರೆಗೆ ಪರಿಗಣಿಸಿ ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಸೂಚಿಸಿ ಈಗಾಗಲೇ ಸುತ್ತೋಲೆ ಹೊರಡಿಸಿದ್ದೇವೆ ಎಂದು ತಿಳಿಸಿದರು.
ಸಿಬಿಎಸ್‌ಇ 10ನೇ ಕ್ಲಾಸ್: ಶೇ.99.96 ವಿದ್ಯಾರ್ಥಿಗಳು ಪಾಸ್!
ಪ್ರತಿ ವರ್ಷವೂ ಹಳೆಯ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಪಠ್ಯ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯ ಇಲ್ಲವೇ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಸಂಗ್ರಹಿಸಿಡಬೇಕು. ಈ ರೀತಿ ಬುಕ್ ಬ್ಯಾಂಕ್ ಅಡಿಯಲ್ಲಿ ಸಂಗ್ರಹಿಸುವ ಪಠ್ಯಪುಸ್ತಕಗಳನ್ನು ಆಯಾಯ ಶೈಕ್ಷಣಿಕ ಸಾಲಿನಲ್ಲಿ ಶಾಲೆ ಪ್ರಾರಂಭವಾದ ಕೂಡಲೇ ಹೊಸ ಪಠ್ಯಪುಸ್ತಕಗಳು ಬರುವವರೆಗೂ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಬಳಕೆ ಮಾಡಬೇಕು. ಹೊಸ ಪಠ್ಯಪುಸ್ತಕಗಳು ವಿತರಣೆಯಾದ ಕೂಡಲೇ ಬುಕ್‌ಬ್ಯಾಂಕ್‌ನ ಅಡಿಯಲ್ಲಿ ವಿತರಣೆಯಾಗಿರುವ ಪುಸ್ತಕಗಳನ್ನು ಹಿಂಪಡೆಯಬೇಕು. ಬುಕ್‌ಬ್ಯಾಂಕ್‌ನಲ್ಲಿರುವ ಪುಸ್ತಕಗಳನ್ನು ಪ್ರಕೃತಿ ವಿಕೋಪ, ವಲಸೆ ಮತ್ತಿತರ ಕಾರಣಗಳಿಂದ ಪಠ್ಯಪುಸ್ತಕಗಳನ್ನು ಕಳೆದುಕೊಂಡ ಮಕ್ಕಳಿಗೆ ಹಾಗೂ ಇನ್ನಿತರೆ ವಿಶೇಷ ಸಂದರ್ಭಗಳಲ್ಲಿ ಬಳಕೆ ಮಾಡಿ ಅವುಗಳ ಮಾಹಿತಿಯನ್ನು ಇಲಾಖೆಗೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ವಿವರಿಸಿದರು.
ಏನಿದು ಯೋಜನೆ?
- ಶೈಕ್ಷಣಿಕ ವರ್ಷ ಪ್ರಾರಂಭವಾದ ಕೂಡಲೇ ಮಕ್ಕಳಿಗೆ ಪುಸ್ತಕ ಸಿಗುವುದಿಲ್ಲ
- ಈ ಹಿನ್ನೆಲೆಯಲ್ಲಿ ಹಿಂದಿನ ವರ್ಷದ ವಿದ್ಯಾರ್ಥಿಗಳಿಂದ ಪುಸ್ತಕ ಸಂಗ್ರಹ
- ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಮಕ್ಕಳಿಗೆ ಪುಸ್ತಕಗಳ ವಿತರಣೆ
- ಹೊಸ ಪಠ್ಯ ಪುಸ್ತಕ ಬಂದ ಬಳಿಕ ಹಳೆ ಪುಸ್ತಕ ವಾಪಸ್ ಪಡೆದು ಸಂಗ್ರಹ
- ಪ್ರಕೃತಿ ವಿಕೋಪ, ವಲಸೆಯಿಂದ ಪುಸ್ತಕ ಕಳೆದುಕೊಂಡವರಿಗೆ ವಿತರಣೆ
ಯಾವ ಶೈಕ್ಷಣಿಕ ಜಿಲ್ಲೆಯಲ್ಲಿ ಎಷ್ಟು ಪುಸ್ತಕ ಸಂಗ್ರಹ?
ಬಾಗಲಕೋಟೆ ಶೈಕ್ಷಣಿಕ ಜಿಲ್ಲೆ 11.76 ಲಕ್ಷ, ಚಿಕ್ಕೋಡಿ- 10.64 ಲಕ್ಷ, ಬೆಳಗಾವಿ- 8.58 ಲಕ್ಷ, ಬಳ್ಳಾರಿ- 7.66 ಲಕ್ಷ, ಶಿವಮೊಗ್ಗ- 7.61 ಲಕ್ಷ, ವಿಜಯಪುರ- 6.63 ಲಕ್ಷ, ದಕ್ಷಿಣ ಕನ್ನಡ- 6.59 ಲಕ್ಷ, ಮೈಸೂರು- 5.66 ಲಕ್ಷ, ದಾವಣಗೆರೆ- 5.02 ಲಕ್ಷ, ಹಾವೇರಿ- 4.71 ಲಕ್ಷ, ತುಮಕೂರು- 4.55 ಲಕ್ಷ, ಧಾರವಾಡ- 4.34 ಲಕ್ಷ, ಮಧುಗಿರಿ- 4.31 ಲಕ್ಷ, ಬೆಂಗಳೂರು ಗ್ರಾಮಾಂತರ- 4.15 ಲಕ್ಷ, ಕೊಪ್ಪಳ- 3.77 ಲಕ್ಷ, ಚಿಕ್ಕಮಗಳೂರು- 3.73 ಲಕ್ಷ, ಚಿತ್ರದುರ್ಗ- 3.31 ಲಕ್ಷ, ಶಿರಸಿ- 3.04 ಲಕ್ಷ, ರಾಯಚೂರು- 2.98 ಲಕ್ಷ, ಉತ್ತರ ಕನ್ನಡ- 2.90 ಲಕ್ಷ, ಮಂಡ್ಯ ಮತ್ತು ಗದಗ ತಲಾ 2.89 ಲಕ್ಷ, ರಾಮನಗರ- 2.83 ಲಕ್ಷ, ಹಾಸನ 2.78 ಲಕ್ಷ, ಬೆಂಗಳೂರು ದಕ್ಷಿಣ 2.23 ಲಕ್ಷ, ಚಾಮರಾಜನಗರ ಮತ್ತು ಉಡುಪಿ ತಲಾ 2.10 ಲಕ್ಷಕ್ಕೂ ಹೆಚ್ಚು, ಚಿಕ್ಕಬಳ್ಳಾಪುರ 2.09 ಲಕ್ಷ, ಕೋಲಾರ 1.88 ಲಕ್ಷ, ಯಾದಗಿರಿ 1.71 ಲಕ್ಷ,-ಬೆಂಗಳೂರು ಉತ್ತರ-1.99 ಲಕ್ಷ, ಬೀದರ್- 1.38 ಲಕ್ಷ, ಕಲಬುರಗಿ- 91 ಸಾವಿರ ಹಾಗೂ ಕೊಡಗು ಶೈಕ್ಷಣಿಕ ಜಿಲ್ಲೆಯಲ್ಲಿ 83 ಸಾವಿರಕ್ಕೂ ಹೆಚ್ಚು ಪಠ್ಯ ಪುಸ್ತಕಗಳು ಸಂಗ್ರಹವಾಗಿವೆ.