ಸಿಬಿಎಸ್‌ಇ 10ನೇ ಕ್ಲಾಸ್: ಶೇ.99.96 ವಿದ್ಯಾರ್ಥಿಗಳು ಪಾಸ್!
* ಸಿಬಿಎಸ್‌ಇ ಫಲಿತಾಂಶ ಪ್ರಕಟ
* ಎಂದಿನಂತೆ ಬಾಲಕಿಯರು ಮುಂದು
* ಶೇ.99.96 ವಿದ್ಯಾರ್ಥಿಗಳು ಪಾಸ್
ಬೆಂಗಳೂರು(ಆ.04): ಸಿಬಿಎಸ್‌ಇ 10ನೇ ತರಗತಿ ಪರೀಕ್ಷಾ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ರಾಜ್ಯದಲ್ಲಿ ಪರೀಕ್ಷೆ ಬರೆದವರಲ್ಲಿ ಶೇ.99.96 ರಷ್ಟುವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ಕರ್ನಾಟಕದಲ್ಲಿ 10ನೇ ತರಗತಿ ಬರೆದ ಒಟ್ಟು 62,529 ಮಕ್ಕಳ ಪೈಕಿ 62,503 ವಿದ್ಯಾರ್ಥಿಗಳಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿನಿಯರು ಫಲಿತಾಂಶದಲ್ಲಿ ಕೊಂಚ ಮೇಲುಗೈ ಸಾಧಿಸಿದ್ದಾರೆ. 34,856 ಹುಡುಗರಲ್ಲಿ 34,838 (ಶೇ.99.95) ಮಂದಿ ಪಾಸಾಗಿದ್ದರೆ, 27,673 ಮಂದಿ ವಿದ್ಯಾರ್ಥಿನಿಯರಲ್ಲಿ 27,665 (ಶೇ.99.97) ಮಂದಿ ತೇರ್ಗಡೆ ಹೊಂದಿದ್ದಾರೆ ಎಂದು ಸಿಬಿಎಸ್‌ಇ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಎರಡನೇ ಅಲೆಯ ತೀವ್ರತೆ ಹಿನ್ನೆಲೆಯಲ್ಲಿ ಈ ಬಾರಿ 10ನೇ ತರಗತಿ ಪರೀಕ್ಷೆಗಳನ್ನು ರದ್ದುಪಡಿಸಿದ್ದ ಸಿಬಿಎಸ್‌ಇ, ಭವಿಷ್ಯದ ಶಿಕ್ಷಣಕ್ಕೆ ತೊಡಕಾಗದಂತೆ ವಿದ್ಯಾರ್ಥಿಗಳ 9ನೇ ತರಗತಿ ಫಲಿತಾಂಶ ಮತ್ತು 10ನೇ ತರಗತಿಯ ಕಿರು ಪರೀಕ್ಷೆಗಳು, ಅರ್ಧವಾರ್ಷಿಕ ಪರೀಕ್ಷೆ ಮತ್ತು ಪ್ರಿಪರೇಟರಿ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ಗ್ರೇಡ್ ಆಧಾರಿತ ಫಲಿತಾಂಶ ಸಿದ್ಧಪಡಿಸಿ ಪ್ರಕಟಿಸಿದೆ.
ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳು ಮತ್ತು ಶಾಲೆಗಳಿಂದ ಸಮಾಧಾನಕರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಪರೀಕ್ಷೆ ಬರೆದಿದ್ದರೆ ಇನ್ನಷ್ಟುಉತ್ತಮ ಫಲಿತಾಂಶ ಪಡೆಯುತ್ತಿದ್ದೆವು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪ್ರತಿ ವರ್ಷದಂತೆ 10ನೇ ತರಗತಿ ಪರೀಕ್ಷೆಗಳನ್ನು ನಡೆಸಿದ್ದರೆ ವಿದ್ಯಾರ್ಥಿಗಳಿಗೆ ಇನ್ನಷ್ಟುಹೆಚ್ಚಿನ ಫಲಿತಾಂಶ ಪಡೆಯಲು ಸಾಧ್ಯವಾಗುತ್ತಿತ್ತು. ಗ್ರೇಡ್ ಆಧಾರಿತ ಫಲಿತಾಂಶದಿಂದ ಶೇ.100ಕ್ಕೆ ನೂರು ಫಲಿತಾಂಶ ಪಡೆಯುವ ಅವಕಾಶ ತಪ್ಪಿದೆ ಎಂದು ಹಾರ್ವೆಸ್ವ್ ಇಂಟನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ದಾಕ್ಷಾಯಿಣಿ ಕಣ್ಣಾ ಹೇಳಿದರು.