Asianet Suvarna News Asianet Suvarna News

ಅಗ್ನಿಪರೀಕ್ಷೆ ಗೆದ್ದ ಸುರೇಶ್‌ ಕುಮಾರ್‌ , ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿದ್ದು ಹೇಗೆ?

ಮೊದಲಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಯಿತು. ರಾಜ್ಯಾದ್ಯಂತ 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್‌ ಪರೀಕ್ಷಾ ಕೇಂದ್ರಗಳನ್ನು ಸೃಷ್ಟಿಸಲಾಯಿತು. ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‌ಮೆಂಟ್‌ ವಲಯದ ಒಳಗೆ ಇರದ ರೀತಿಯಲ್ಲಿ ಕ್ರಮ ವಹಿಸಲಾಯಿತು. ಹಾಗೂ ಯಾವುದೇ ಪರೀಕ್ಷಾ ಕೇಂದ್ರ ಕ್ವಾರಂಟೈನ್‌ ಕೇಂದ್ರವಾಗಿ ಬಳಕೆಯಾಗಲು ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಯಿತು

SSLC Exams conclude in karnataka amid covid 19 scare reasons behind the success
Author
Bengaluru, First Published Jul 4, 2020, 9:34 AM IST

ನಮ್ಮ ಜೀವಿತಾವಧಿಯಲ್ಲಿ ಇಂತಹ ಒಂದು ಸಾಮಾಜಿಕ ಪರಿಸ್ಥಿತಿಯನ್ನು ಕಾಣುತ್ತೇವೆಂದು ನಮಗೆ ಎಂದೂ ಅನಿಸಿರಲಿಲ್ಲ. ಆದರೆ ದಿಢೀರ್‌ ಬಂದೆರಗಿದ ಕೊರೋನಾ ಸಾಂಕ್ರಾಮಿಕ ರೋಗ ಇಡೀ ಮನುಕುಲದ ಎದೆ ನಡುಗಿಸುವ ಸಂದರ್ಭವನ್ನು ಸೃಷ್ಟಿಸಿತು.

"

ಆದರೆ, ಅದಕ್ಕೆ ನಾವು ಎದೆಗುಂದಿ ಬದುಕಲಾಗದು. ಹಾಗೆಯೇ ನಮ್ಮನ್ನು ನಂಬಿರುವ ನಮ್ಮ ಮುಂದಿನ ಪೀಳಿಗೆಗೆ ಇದರಿಂದ ನಾವು ಅನ್ಯಾಯವನ್ನೂ ಮಾಡಲಾಗದು. ನಮ್ಮ ಮಕ್ಕಳು ವರ್ಷವಿಡೀ ಓದಿ ಪರೀಕ್ಷೆಗೆ ಅಣಿಯಾಗಿ ನಿಂತಾಗ ಮತ್ತು ಆ ಪರೀಕ್ಷೆಗಳನ್ನು ಅವರ ಭವಿಷ್ಯದ ದೃಷ್ಟಿಯಿಂದ ಕಳೆದುಕೊಳ್ಳಲು ಸಾಧ್ಯವಿರದ ಸ್ಥಿತಿ ಉದ್ಭವಿಸಿದಾಗ ನಮಗೆ ಕೆಲವೇ ಆಯ್ಕೆಗಳಿದ್ದವು. ಹೀಗಾಗಿ ಒಂದರಿಂದ ಒಂಭತ್ತನೇ ತರಗತಿಯ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಿ ಆ ಮಕ್ಕಳನ್ನು ಮುಂದಿನ ತರಗತಿಗಳಿಗೆ ತೇರ್ಗಡೆ ಮಾಡಿದೆವು. ಆದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಹಾಗೂ ಉಳಿದಿದ್ದ ದ್ವಿತೀಯ ಪಿಯು ಆಂಗ್ಲ ಭಾಷಾ ಪರೀಕ್ಷೆಯನ್ನು ನಾವು ಹಾಗೆ ಮಾಡಲು ಸಾಧ್ಯವಿರಲಿಲ್ಲ.

ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವನ್ನು ನಾವು ಅಸಮರ್ಪಕವಾದ ಮಾನದಂಡದ ಮೂಲಕ ಅಳೆಯುವುದು ಅವರ ಕಲಿಕೆಗೆ ಮಾಡುವ ಅಪಚಾರ ಎಂಬ ಭಾವನೆ ನಮ್ಮೆಲ್ಲರನ್ನೂ ಕಾಡಿತು. ಹಾಗಾಗಿ ನಾವು ಈ ಪರೀಕ್ಷೆಗಳನ್ನು ನಡೆಸಲೇಬೇಕೆನ್ನುವ ಗಟ್ಟಿನಿಲುವನ್ನು ತೆಗೆದುಕೊಂಡೆವು. ನಾವು ಪರೀಕ್ಷೆ ನಡೆಸುವುದು ನಮ್ಮ ಪ್ರತಿಷ್ಠೆಗೆ ಎಂಬ ಆರೋಪಗಳನ್ನು ಕೇಳಿದಾಗಲೆಲ್ಲ ನನಗೆ ನಮ್ಮ ಮುಗ್ಧ ಹಾಗೂ ಭವ್ಯ ಭವಿಷ್ಯದ ಕಡೆಗೆ ಮುಖ ಮಾಡಿ ನಿಂತ ವಿದ್ಯಾರ್ಥಿಗಳ ಚಿತ್ರಣ ಕಣ್ಮುಂದೆ ನಿಲ್ಲುತ್ತಿತ್ತು. ಅದು ನಮ್ಮ ಕರ್ತವ್ಯವನ್ನು ನನಗೆ ನೆನಪಿಸುತ್ತಿತ್ತು.

ಕೊಟ್ಟೂರು: ಪರೀಕ್ಷೆಯನ್ನೇ ಮರೆತಿದ್ದ ವಿದ್ಯಾರ್ಥಿನಿ ಕರೆತಂದ ಉಪ ಪ್ರಾಚಾರ್ಯ!

ಯೋಚಿಸಿ ಕೈಗೊಂಡ ನಿರ್ಣಯ

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪರೀಕ್ಷೆ ನಡೆಸಲು ಪ್ರತಿ ಹಂತದಲ್ಲೂ ಧೈರ್ಯ ತುಂಬಿದರು. ನನ್ನ ಸಂಪುಟ ಸಹೋದ್ಯೋಗಿಗಳೆಲ್ಲರೂ ನಮ್ಮ ನಿಲುವಿಗೆ ಬೆಂಬಲವಾಗಿ ನಿಂತರು. ವಿರೋಧಪಕ್ಷದ ಪ್ರಮುಖ ನಾಯಕರೂ ಪರೀಕ್ಷೆ ನಡೆಸುವ ನಿಲುವನ್ನು ಬೆಂಬಲಿಸಿದರು. ನಾನು ಅಂದಿನಿಂದಲೇ ರಾಜ್ಯಾದ್ಯಂತ ಪ್ರವಾಸ ಮಾಡಿ ಅಸಂಖ್ಯ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಸಂವಾದಿಸಿದೆ.

ಸಮಾಜದ ಪ್ರಮುಖರು, ಶಿಕ್ಷಣ ತಜ್ಞರು, ವೈದ್ಯಕೀಯ ಪರಿಣತರು ಸೇರಿದಂತೆ ಎಲ್ಲರನ್ನು ಖುದ್ದಾಗಿ ಸಂಪರ್ಕಿಸಿ ಸಲಹೆ ಸೂಚನೆಗಳನ್ನು ಪಡೆದೆ. ಎಲ್ಲರ ಸಲಹೆಯಂತೆ ಮಕ್ಕಳ ಹಿತದೃಷ್ಟಿಯಿಂದ ಸಕಲ ಸುರಕ್ಷತಾ ಉಪಕ್ರಮಗಳೊಂದಿಗೆ ಪರೀಕ್ಷೆ ನಡೆಸಲು ದಿನಾಂಕ ಘೋಷಣೆಯಾದಾಗ, ರಾಜ್ಯ ಘನ ಉಚ್ಚ ನ್ಯಾಯಾಲಯ, ತದನಂತರದ ದಿನಗಳಲ್ಲಿ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪರೀಕ್ಷೆಗಳನ್ನು ರದ್ದುಪಡಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾದವು. ಮಕ್ಕಳ ಹಿತರಕ್ಷಣೆ ದೃಷ್ಟಿಯಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿರುವ ಅಂಶವನ್ನು ಗಮನಕ್ಕೆ ತಂದಾಗ ಸರ್ಕಾರದ ನಿರ್ಣಯವನ್ನು ನ್ಯಾಯಾಲಯಗಳೂ ಬೆಂಬಲಿಸಿದವು.

ಪುನರ್ಮನನಕ್ಕೆ ಹಲವು ಉಪಕ್ರಮ

ಕೋವಿಡ್‌-19 ಸಂದರ್ಭದಲ್ಲಿಯೂ ಯಾವುದೇ ವಿದ್ಯಾರ್ಥಿಯ ಕಲಿಕೆಗೆ ತೊಂದರೆಯಾಗದ ರೀತಿಯಲ್ಲಿ ದೂರದರ್ಶನದ ಚಂದನ ವಾಹಿನಿ, ಆಕಾಶವಾಣಿಗಳ ಮೂಲಕ ಪುನರ್ಮನನ ತರಗತಿಗಳನ್ನು ಪ್ರಾರಂಭಿಸಿದೆವು. ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರಗೊಂಡ ಪುನರ್ಮನನ ತರಗತಿಗಳು ಆ ವಾಹಿನಿಯ ‘ಸಾರ್ವಕಾಲಿಕ ಜನಪ್ರಿಯ ಕಾರ್ಯಕ್ರಮ’ ಗಳಲ್ಲೊಂದಾದವು. ಶಿಕ್ಷಣ ಇಲಾಖೆ ತನ್ನದೇ ಯುಟ್ಯೂಬ್‌ ಚಾನಲ್‌ ಆರಂಭಿಸಿತು. ಸೃಜನಶೀಲ ಕಾರ್ಯಕ್ರಮಗಳು ಹಾಗೂ ಪರೀಕ್ಷಾ ಸಿದ್ಧತೆಯ ವಿಶಿಷ್ಟಕಾರ್ಯಕ್ರಮಗಳನ್ನು ಹೊಂದಿ ಇಡೀ ರಾಷ್ಟ್ರದ ಗಮನ ಸೆಳೆದವು.

ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಕೋವಿಡ್‌ ಕಾಲಘಟ್ಟದ ಸಮರ್ಥ ಸಾಂಸ್ಥಿಕ ಪ್ರತಿಕ್ರಿಯೆಯಾಗಿ ಯಶಸ್ವಿಯಾಗಿ ನಡೆದು ಈ ಪ್ರಯತ್ನ ಇತಿಹಾಸದಲ್ಲಿ ದಾಖಲಾಗಿದೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಈ ಪರೀಕ್ಷೆಗೆ ತಮ್ಮ ಸಹಕಾರವನ್ನು ನೀಡಿವೆ. ಪರೀಕ್ಷೆಯ ಯಶಸ್ಸಿಗೆ ಇಲಾಖೆ ಕೈಗೊಂಡ ಹಲವಾರು ಉಪಕ್ರಮಗಳು ಕಾರಣವಾಗಿವೆ. ಪರೀಕ್ಷಾ ಪೂರ್ವದಲ್ಲಿ ಒಂದೂವರೆ ಲಕ್ಷ ಅಧಿಕಾರಿ ಸಿಬ್ಬಂದಿ ತಮ್ಮನ್ನು ತಾವು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯೋಜನಾ ಬದ್ಧವಾಗಿ ಕೆಲಸ ನಿರ್ವಹಿಸಿದ್ದಾರೆ. ಈ ಯಶಸ್ಸಿನ ಹಿನ್ನೆಲೆಯ ಬಗ್ಗೆ ಒಂದೆರಡು ಮಾತುಗಳನ್ನು ನಾನು ಹೇಳಲೇಬೇಕು.

ಹಾವೇರಿ: ತಂದೆಯ ಸಾವಿನ ದುಃಖದ ಮಧ್ಯೆಯೂ SSLC ಪರೀಕ್ಷೆ ಬರೆದ ವಿದ್ಯಾರ್ಥಿ

ಸುರಕ್ಷತೆಗೆ ಮೊದಲ ಆದ್ಯತೆ

ಮೊದಲಿಗೆ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಸಮಗ್ರ ಮಾರ್ಗದರ್ಶಿ ಸೂತ್ರಗಳನ್ನು ರಚಿಸಲಾಯಿತು. ರಾಜ್ಯಾದ್ಯಂತ 2879 ಪರೀಕ್ಷಾ ಕೇಂದ್ರಗಳು ಮತ್ತು 330 ಬ್ಲಾಕ್‌ ಪರೀಕ್ಷಾ ಕೇಂದ್ರಗಳನ್ನು ಸೃಷ್ಟಿಸಲಾಯಿತು. ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‌ಮೆಂಟ್‌ ವಲಯದ ಒಳಗೆ ಇರದ ರೀತಿಯಲ್ಲಿ ಕ್ರಮ ವಹಿಸಲಾಯಿತು. ಹಾಗೂ ಯಾವುದೇ ಪರೀಕ್ಷಾ ಕೇಂದ್ರ ಕ್ವಾರಂಟೈನ್‌ ಕೇಂದ್ರವಾಗಿ ಬಳಕೆಯಾಗಲು ಅವಕಾಶ ನೀಡದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.

ಪ್ರತಿ ಪರೀಕ್ಷಾ ಕೇಂದ್ರವನ್ನೂ ಪರೀಕ್ಷಾ ಸಂದರ್ಭದಲ್ಲಿ ಪ್ರತಿದಿನವೂ ಸೋಂಕು ನಿವಾರಕ ದ್ರಾವಣದ ಮೂಲಕ ಸ್ವಚ್ಛಗೊಳಿಸಲು ಕ್ರಮವಹಿಸಲಾಯಿತು. ಪ್ರತಿ ಪರೀಕ್ಷೆ ನಂತರ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳು, ಪೀಠೋಪಕರಣಗಳನ್ನು ಸ್ಯಾನಿಟೈಜ್‌ ಮಾಡಲಾಗುತಿತ್ತು. ಯಾವುದೇ ಪರೀಕ್ಷಾ ಕೊಠಡಿಯಲ್ಲಿ 20ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡದೆ ಸುರಕ್ಷಿತ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ವಾತಾವರಣವನ್ನು ನಿರ್ಮಿಸಲಾಯಿತು.

ಕಂಟೈನ್‌ಮೆಂಟ್‌ ವಲಯಗಳಿಂದ ಬರುವ ವಿದ್ಯಾರ್ಥಿಗಳಿಗೆ ವಿಶೇಷ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ವರದಿಯಾಗಿ ಯಾವುದೇ ಪರೀಕ್ಷಾ ಕೇಂದ್ರ ಕಂಟೈನ್‌ಮೆಂಟ್‌ ವಲಯದೊಳಗೆ ಬಂದರೆ ತಕ್ಷಣವೇ ಆ ಕೇಂದ್ರವನ್ನು ಹತ್ತಿರದ ಕಾಯ್ದಿರಿಸಿದ ಕೇಂದ್ರಕ್ಕೆ ಬದಲಾಯಿಸಲು ವ್ಯವಸ್ಥೆ ಮಾಡಲಾಯಿತು.

ಪ್ರತಿ ವಿದ್ಯಾರ್ಥಿಗೂ ಸಾರಿಗೆ ವ್ಯವಸ್ಥೆ

ಪ್ರತಿ ಜಿಲ್ಲೆಯಲ್ಲಿ ಸಹಾಯವಾಣಿಗಳನ್ನು ಸ್ಥಾಪಿಸಿ ಸಾರಿಗೆ ವ್ಯವಸ್ಥೆ ನಿರ್ವಹಿಸಲಾಯಿತು. ಪ್ರತಿ ವಿದ್ಯಾರ್ಥಿಗೆ ಅಗತ್ಯ ಸಂಖ್ಯೆಯ ಫೇಸ್‌ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳನ್ನು ವಿತರಿಸಲಾಯಿತು. 3500 ಪ್ರತ್ಯೇಕ ವಾಹನಗಳನ್ನು ಒಪ್ಪಂದದ ಮೇರೆಗೆ ಬಳಸಿಕೊಂಡು ಯಾವುದೇ ಒಬ್ಬ ವಿದ್ಯಾರ್ಥಿಗೂ ಸಾರಿಗೆ ವ್ಯವಸ್ಥೆಯ ಸಮಸ್ಯೆಯಾಗದ ರೀತಿಯಲ್ಲಿ ನಿರ್ವಹಿಸಲಾಯಿತು. ಪ್ರತಿ ಪರೀಕ್ಷಾ ಕೇಂದ್ರದ ಮುಖ್ಯದ್ವಾರದ ಬಳಿ ಆರೋಗ್ಯ ತಪಾಸಣಾ ಕೌಂಟರ್‌ಗಳನ್ನು ಸ್ಥಾಪನೆ ಮಾಡಲಾಗಿತ್ತು. ಪ್ರತಿ 200 ವಿದ್ಯಾರ್ಥಿಗಳಿಗೆ ಒಂದರಂತೆ ರಾಜ್ಯಾದ್ಯಂತ 5755 ಆರೋಗ್ಯ ತಪಾಸಣಾ ಕೌಂಟರ್‌ಗಳು ಕಾರ್ಯನಿರ್ವಹಿಸಿದವು.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಇಬ್ಬರಂತೆ ಹಿರಿಯ ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳ ಆರೋಗ್ಯ ತಪಾಸಣಾ ಜವಾಬ್ದಾರಿಯನ್ನು ನಿರ್ವಹಿಸಿದರು. ಯಾವುದೇ ವಿದ್ಯಾರ್ಥಿ ಕೆಮ್ಮು, ಶೀತ, ನೆಗಡಿಗಳಿಂದ ಬಳಲುತ್ತಿದ್ದಲ್ಲಿ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ವ್ಯವಸ್ಥೆ ಮಾಡಲಾಯಿತು. ಯಾವುದೇ ವಿದ್ಯಾರ್ಥಿ ಕೋವಿಡ್‌ ಪಾಸಿಟಿವ್‌ ಎಂದು ಗುರುತಿಸಿದ್ದಲ್ಲಿ, ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ಪೂರಕ ಪರೀಕ್ಷೆಯಲ್ಲಿ ಪ್ರಥಮ ಅವಕಾಶವಾಗಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಯಿತು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ತುರ್ತು ಚಿಕಿತ್ಸಾ ವಾಹನಗಳನ್ನು ಮೀಸಲಿಡಲಾಯಿತು.

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಸೋಂಕು ತಗುಲದಂತೆ ಕ್ರಮ

ಗಡಿ ಶಾಲೆಗಳಲ್ಲೂ ಪರೀಕ್ಷೆ

ಹಾಸ್ಟೆಲ್‌ಗಳು, ವಸತಿ ಶಾಲೆಗಳು, ವಲಸೆ ಕುಟುಂಬದ ಮಕ್ಕಳು ತಮ್ಮ ಪ್ರಸ್ತುತ ನಿವಾಸಕ್ಕೆ ಸಮೀಪವಿರುವ ಪರ್ಯಾಯ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಯಿತು. 12,644 ವಲಸೆ/ ವಸತಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ನಿವಾಸದ ಸನಿಹದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು. ಯಾವುದೇ ಮಕ್ಕಳು ರಾಜ್ಯದ ಹೊರಗೆ ವಲಸೆ ಹೋಗಿದ್ದರೆ, ಗಡಿ ರಾಜ್ಯದಲ್ಲಿ ಉಳಿದುಕೊಂಡಿದ್ದರೆ ಅವರಿಗೂ ಸಹ ಗಡಿಭಾಗದ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. ಸಂಬಂಧಪಟ್ಟಜಿಲ್ಲಾಡಳಿತಗಳು ಯಾವುದೇ ರೀತಿಯಲ್ಲೂ ವ್ಯತ್ಯಯವಾಗದ ರೀತಿಯಲ್ಲಿ ಅವಶ್ಯಕ ಅನುಮತಿ ಪತ್ರಗಳನ್ನು ದೊರಕಿಸಿ, ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಿ ಪರೀಕ್ಷೆಗೆ ಅನುವು ಮಾಡಿಕೊಡಲಾಯಿತು. 614 ವಿದ್ಯಾರ್ಥಿಗಳು ನೆರೆ ರಾಜ್ಯಗಳಿಂದ ಬಂದು ಪ್ರತ್ಯೇಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.

ಪರೀಕ್ಷೆ ಕೋಣೆಗಳ ಸ್ಯಾನಿಟೈಸ್‌

ಕಂಟೈನ್‌ಮೆಂಟ್‌ ವಲಯಗಳಲ್ಲಿನ ಮಕ್ಕಳಿಗೆ ವಿಶೇಷ ಕೊಠಡಿಗಳಲ್ಲಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಯಿತು. ಇಂತಹ ವಿದ್ಯಾರ್ಥಿಗಳಿಗೆ ಎನ್‌-95 ಮಾಸ್ಕ್‌ಗಳನ್ನು ವಿತರಿಸಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ. ಕಂಟೈನ್‌ಮೆಂಟ್‌ ವಲಯಗಳಿಂದ ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳ ವಿಶೇಷ ಕೊಠಡಿಗಳನ್ನು ಪ್ರತಿದಿನದ ಪರೀಕ್ಷೆ ಬಳಿಕ ಸೋಂಕು ನಿವಾರಕ ದ್ರಾವಣಗಳಿಂದ ಸ್ವಚ್ಚಗೊಳಿಸಿ ಆರೋಗ್ಯಕರ ವಾತಾವರಣವನ್ನು ದೊರಕಿಸಿಕೊಡಲಾಗಿದೆ. ಸರಾಸರಿ 8 ಲಕ್ಷ ವಿದ್ಯಾರ್ಥಿಗಳು ಪ್ರತಿದಿನ ಪರೀಕ್ಷೆಯನ್ನು ಬರೆದಿದ್ದಾರೆ. ಈ ಪೈಕಿ ಸುಮಾರು 1000 ವಿದ್ಯಾರ್ಥಿಗಳು ಕಂಟೈನ್‌ಮೆಂಟ್‌ ವಲಯಗಳಿಂದ ಪರೀಕ್ಷೆಗೆ ಹಾಜರಾಗಿದ್ದಾರೆ. ಕೋವಿಡ್‌ ಸೋಂಕಿನ 32 ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಿರಾಕರಿಸಿ ಮುಂದಿನ ಪೂರಕ ಪರೀಕ್ಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಯಿತು. 1,438 ವಸತಿ ನಿಲಯಗಳ ವಿದ್ಯಾರ್ಥಿಗಳು ಪ್ರತ್ಯೇಕ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದಾರೆ.

ಪಾರದರ್ಶಕತೆಗೂ ಒತ್ತು

ಇದಲ್ಲದೆ, ಪರೀಕ್ಷೆಯನ್ನು ಶಾಂತಿ ಸುವ್ಯವಸ್ಥೆ ಹಾಗೂ ಪಾರದರ್ಶಕವಾಗಿ ನಡೆಸುವ ಎಲ್ಲ ಉಪಕ್ರಮಗಳನ್ನು ಶಿಕ್ಷಣ ಇಲಾಖೆ ಜಾರಿಯಲ್ಲಿಡಬೇಕಾದ ಬಹು ಪ್ರಮುಖ ಅವಶ್ಯಕತೆಯಿತ್ತು. ಇದಕ್ಕಾಗಿ ಪ್ರತಿ ಜಿಲ್ಲೆಗೆ ಮೇಲುಸ್ತುವಾರಿ ಹಾಗೂ ವೀಕ್ಷಕರನ್ನು ನೇಮಕ ಮಾಡಲಾಯಿತು. ಕಾನೂನು ಭದ್ರತೆಗಾಗಿ ಪೊಲೀಸ್‌ ಸಹಕಾರವನ್ನು ಗರಿಷ್ಠ ರೀತಿಯಲ್ಲಿ ಬಳಸಿಕೊಳ್ಳಲಾಯಿತು. ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಿಸಿಟಿವಿ ನಿರಂತರ ನಿಗಾವಣೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಂರಕ್ಷಿಸಲಾಯಿತು.

ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆಯನ್ನು ಕೈಗೊಳ್ಳಲಾಯಿತು. ವಿಶೇಷವಾಗಿ ಈ ಪರೀಕ್ಷಾ ಪಾವಿತ್ರ್ಯತೆಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಸಾರ್ವಜನಿಕರು, ಸಂಘಸಂಸ್ಥೆಗಳು ಸರ್ಕಾರದ ಈ ಮಹೋನ್ನತ ಉದ್ದೇಶಕ್ಕೆ ಕೈಜೋಡಿಸಿವೆ. ಅನೇಕ ವೈಯಕ್ತಿಕ ಸಂಕಷ್ಟಗಳ ಮಧ್ಯೆಯೂ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ವಿಮುಖರಾಗಿಸಿಲ್ಲ.

ಸುರಕ್ಷಿತವಾಗಿ ಪರೀಕ್ಷೆ ಬರೆದು ತಮ್ಮ ಭವಿಷ್ಯವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. Nಛಿvಛ್ಟ್ಝಿಛಿಠಿ a ್ಚ್ಟಜಿsಜಿs ಜಟ ಡಿasಠಿಛಿ ಎಂಬ ಪ್ರಸಿದ್ಧ ಸಾಲಿಗೆ ಅನ್ವರ್ಥವಾಗಿ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ರಾಜ್ಯದ ಬಹುನಿರೀಕ್ಷಿತ ಈ ಎಸ್‌ಎಸ್‌ ಎಲ್‌ಸಿ ಪರೀಕ್ಷೆಗಳನ್ನು ಮಕ್ಕಳ ಹಿತದೃಷ್ಟಿಯಿಂದ ನಡೆಸಲಾಗಿದೆ. ಸಮಾಜದ ಎಲ್ಲ ವರ್ಗಗಳ ಬೆಂಬಲದೊಂದಿಗೆ ಈ ಪರೀಕ್ಷೆ ‘ನಾಡಹಬ್ಬ’ವಾಗಿ ಆಚರಿಸಲ್ಪಟ್ಟಿದೆ. ಆ ಮೂಲಕ ಸಕಾರಾತ್ಮಕ ಚಿಂತನೆ ಮತ್ತು ಅವಿರತ ಪ್ರಯತ್ನವೊಂದಿದ್ದರೆ ಎಂತಹ ಸಂದರ್ಭವನ್ನೂ ಧೈರ್ಯದಿಂದ ಎದುರಿಸಲು ಸಾಧ್ಯ ಎಂಬ ಮೇಲ್ಪಂಕ್ತಿಯನ್ನು ಕರ್ನಾಟಕ ಸರ್ಕಾರ ಇಂದು ಇಡೀ ದೇಶಕ್ಕೆ ತೋರಿಸಿಕೊಟ್ಟಿದೆ.

- ಎಸ್‌. ಸುರೇಶ್‌ ಕುಮಾರ್‌

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Follow Us:
Download App:
  • android
  • ios